ಪೆರ್ನಾಜೆಯಲ್ಲಿ ಮತ್ತೆ ಕಾಡಾನೆ ಹಾವಳಿ :ಅಪಾರ ಬೆಳೆ ನಾಶ : ಕೃಷಿಕರಲ್ಲಿ ಆತಂಕ

aane
Published on

ಪುತ್ತೂರು ಗ್ರಾಮಾಂತರ: ಪುತ್ತೂರು ತಾಲೂಕಿನ ಪೆರ್ನಾಜೆ ಪರಿಸರಕ್ಕೆ ಸೆಪ್ಟೆಂಬರ್ ಕೊನೆಯ ವಾರದಲ್ಲಿ ನಿರಂತರವಾಗಿ 4 ಬಾರಿ ರಾತ್ರಿಯ ವೇಳೆ ಲಗ್ಗೆ ಇಟ್ಟು ಕೃಷಿ ಹಾನಿ ಮಾಡಿದ್ದ ಕಾಡಾನೆಗಳು ಮತ್ತೆ ಕಾಣಿಸಿಕೊಂಡಿವೆ. ಪೆರ್ನಾಜೆ ಪರಿಸರ ಕೃಷಿಕರ ತೋಟಗಳಿಗೆ ಸೋಮವಾರ ರಾತ್ರಿ ಕಾಡಾನೆ ನುಗ್ಗಿ ಅಪಾರ ಕೃಷಿ ಹಾನಿ ಮಾಡಿದೆ.

ಪೆರ್ನಾಜೆಯ ಪ್ರಗತಿಪರ ಕೃಷಿಕ ಕುಮಾರ್ ಪೆರ್ನಾಜೆ ಅವರ ತೋಟಕ್ಕೆ ದಾಳಿ ಮಾಡಿರುವ ಕಾಡಾನೆ 25ಕ್ಕೂ ಅಧಿಕ ಬಾಳೆಗಿಡಗಳನ್ನು, 5 ಅಡಕೆ ಗಿಡಗಳನ್ನು ನಾಶಮಾಡಿದೆ. 15 ದೀವಿ ಹಲಸು ಮರಗಳ ತಿಪ್ಪೆ ತೆಗೆದು, ಕೆಲವನ್ನು ಮುರಿದು ಹಾಕಿ ನಾಶಗೊಳಿಸಿದೆ. ತೋಟದಲ್ಲಿರುವ ಕೆರೆಯಲ್ಲಿ ಈಜಾಡಿ ಹೋಗಿದೆ.

ಪೆರ್ನಾಜೆಯ ರಾಘವೇಂದ್ರ ಭಟ್ ಅವರ ತೋಟಕ್ಕೆ ನುಗ್ಗಿದ ಕಾಡಾನೆ 75ಕ್ಕೂ ಅಧಿಕ ಬಾಳೆಗಿಡ, 5 ಅಡಕೆ ಗಿಡ, 3 ದೀವಿ ಹಲಸು ಮರಗಳಿಗೆ ಹಾನಿಗೊಳಿಸಿ ಅಪಾರ ನಷ್ಟವನ್ನುಂಟು ಮಾಡಿದೆ. ಪೆರ್ನಾಜೆಯ ಗೋಪಾಲಕೃಷ್ಣ ಕಲ್ಲೂರಾಯ ಅವರ ತೋಟದಲ್ಲಿ 25ಕ್ಕೂ ಅಧಿಕ ಬಾಳೆಗಿಡಗಳನ್ನು ಮುರಿದು ಹಾಕಿ ತಿಂದು ನಾಶಗೊಳಿಸಿದೆ.

ಈ ಕುರಿತು ಕುಮಾರ್ ಪೆರ್ನಾಜೆ ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮಂಗಳವಾರ ಘಟನಾ ಸ್ಥಳಗಳಿಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಕರ್ನಾಟಕ-ಕೇರಳ ಗಡಿಪ್ರದೇಶದಲ್ಲಿರುವ ಪರಪ್ಪೆ ರಕ್ಷಿತಾರಣ್ಯದಿಂದ ಆನೆಗುಂಡಿ ರಕ್ಷಿತಾರಣ್ಯದ ಮೂಲಕವಾಗಿ ಪೆರ್ನಾಜೆ ಪರಿಸರಕ್ಕೆ ಕಾಡಾನೆ ಬಂದಿರಬಹುದೆಂದು ಶಂಕಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net