

ಹನೂರು: ತಾಲೂಕಿನ ಕೌದಳ್ಳಿ ಗ್ರಾಮದ ಹೊರವಲಯದಲ್ಲಿ ಭಾನುವಾರ ಕಿಡಿಗೇಡಿಗಳು ಇಟ್ಟಿದ್ದ ಸಿಡಿಮದ್ದಿಗೆ ಕಾಡು ಹಂದಿಯೊಂದು ಬಲಿಯಾಗಿದೆ. ಈ ಭಾಗದಲ್ಲಿ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಗ್ರಾಮದ ಹೊರವಲಯದ ದೊಡ್ಡಕೆರೆಯ ಬಳಿ ಮುಸುಕಿನ ಜೋಳದ ಸಂಡಿನ ರಾಶಿಯಲ್ಲಿ ಸಿಡಿಮದ್ದನ್ನು ಇಟ್ಟಿದ್ದರು ಎನ್ನಲಾಗಿದೆ. ಈ ವೇಳೆ ಕಾಡು ಹಂದಿ ಆಹಾರವನ್ನು ಅರಸಿ ಬಂದಾಗ ಸಿಡಿತಕ್ಕೆ ಒಳಗಾಗಿ ಮೃತಪಟ್ಟಿದೆ. ಸುದ್ದಿ ತಿಳಿದು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.