

ಬ್ಯಾಡಗಿ: ತಾಲೂಕಿನ ಅಳಲಗೇರಿ ಗ್ರಾಮದ ಸುತ್ತಮುತ್ತ ಗೋವಿನ ಜೋಳ ಹಾಗೂ ತೆಂಗಿನ ಗಿಡಗಳನ್ನು ಕಾಡುಹಂದಿಗಳು ತಿಂದು ಹಾಕಿ ಅಪಾರ ಪ್ರಮಾಣದ ಹಾನಿ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಅಳಲಗೇರಿ ಗ್ರಾಮದ ರೈತ ಮಹೇಶ ಕರ್ಜಗಿ ಅವರಿಗೆ ಸೇರಿದ 6 ಎಕರೆಯಲ್ಲಿ ಬೆಳೆದ ಗೋವಿನ ಜೋಳ ಹೊಲದ ತುಂಬ ಓಡಾಡಿದ ಕಾಡುಹಂದಿಗಳು ಅಲ್ಲಲ್ಲಿ ಬೆಳೆ ತಿಂದು ಗೋವಿನ ಜೋಳವನ್ನು ಮುರಿದು ಹಾನಿಗೊಳಿಸಿವೆ. ಅಲ್ಲದೆ, ಮೂರು ವರ್ಷದ 5-6 ತೆಂಗಿನ ಗಿಡಗಳನ್ನು ಕಿತ್ತು ಹಾಕಿದೆ.
ತಾಲೂಕಿನ ಕದರಮಂಡಲಗಿ, ಬೆಳಕೇರಿ, ಶಿಡೇನೂರು, ಆಣೂರು, ಕದಮನಹಳ್ಳಿ, ಗುಂಡೇನಹಳ್ಳಿ, ಛತ್ರ, ಮೋಟೆಬೆನ್ನೂರು ಸೇರಿದಂತೆ ಕೆಲ ಗ್ರಾಮಗಳು ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿವೆ. ರಾಣೆಬೆನ್ನೂರು ತಾಲೂಕು ಕೃಷ್ಣಮೃಗ ಅಭಯಾರಣ್ಯ ಪ್ರದೇಶ ಬ್ಯಾಡಗಿ ವ್ಯಾಪ್ತಿಗೆ ಹೊಂದಿಕೊಂಡಿದೆ. ಆದರೆ, ಪ್ರತಿಬಾರಿ ಮುಂಗಾರು, ಹಿಂಗಾರು ಬಿತ್ತನೆ ಶುರುವಾಗುತ್ತಿದ್ದಂತೆ ಜಿಂಕೆ, ಸಾರಂಗಗಳ ಹಿಂಡು ಯಥೇಚ್ಛವಾಗಿ ದಾಳಿ ನಡೆಸುತ್ತಿದ್ದು, ಇವುಗಳ ಕಾಟಕ್ಕೆ ರೈತರು ತೀವ್ರ ಬೇಸತ್ತಿದ್ದಾರೆ. ಬೆಳೆದು ನಿಂತಿದ್ದ ಹೆಸರು, ಅಲಸಂದಿ, ಜೋಳ, ಹೊಲದಲ್ಲಿನ ತರಕಾರಿ ಬೆಳೆಗಳನ್ನು ಜಿಂಕೆಗಳ ಹಿಂಡು ತಿಂದುಹಾಕುತ್ತಿದೆ. ಅರಣ್ಯಾಧಿಕಾರಿಗಳು ಇವುಗಳಿಗೆ ಪರ್ಯಾಯ ವ್ಯವಸ್ಥೆ ಕಂಡುಹಿಡಿಯುವ ಗೋಜಿಗೆ ಹೋಗಿಲ್ಲ. ಅಲ್ಲದೆ, ರೈತರು ಹಾನಿಗೆ ಅರ್ಜಿ ಸಲ್ಲಿಸಿದರೆ ಎಕರೆ 1000-1500 ಸಾ.ರೂ. ವಿತರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.
ನೀವು ನೀಡುವ ಪರಿಹಾರ ಯಾತಕ್ಕೂ ಸಾಲುವುದಿಲ್ಲ ಎಂದು ರೈತ ಸಂಘಟನೆಗಳು ಹಲವು ಬಾರಿ ಹೋರಾಟ ನಡೆಸಿ ಒತ್ತಾಯಿಸಿದ್ದಾರೆ. ಸಭೆಯಲ್ಲಿ ಅಧಿಕಾರಿಗಳ ಜತೆ ಮಾತಿನ ಚಕಮಕಿ ನಡೆದಿದೆ. ಆದರೆ, ಅಧಿಕಾರಿಗಳು ಪರಿಹಾರ ಹೆಚ್ಚಿಸುವುದು ಮೇಲಧಿಕಾರಿಗಳಿಗೆ ಬಿಟ್ಟ ವಿಷಯ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ.
ಈಗ ಬೆಳೆದು ನಿಂತಿದ್ದ ಗೋವಿನ ಜೋಳದ ಹೊಲಗಳಿಗೆ ಕಾಡುಹಂದಿಗಳು ನುಗ್ಗುತ್ತಿದ್ದು, ರೈತರಿಗೆ ಕೈಗೆ ಬಂದು ತುತ್ತು ಬಾಯಿಗೆ ಬಾರದಂತಾಗಿದೆ. ಬಹುತೇಕ ರೈತರು ಅರ್ಧ ಎಕರೆ, ಒಂದು ಎಕರೆ ಹಾನಿಯಾದಲ್ಲಿ ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದು, ಕೂಡಲೇ ಸರ್ಕಾರ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ರೈತ ಸಮುದಾಯ ಆಗ್ರಹಿಸುತ್ತಿದೆ.
ರೈತ ಹೋರಾಟಗಾರ ಶಶಿಧರಸ್ವಾಮಿ ಛತ್ರದಮಠ ಮಾತನಾಡಿ, ಪ್ರತಿವರ್ಷವೂ ನಾವು ಅರಣ್ಯಾಧಿಕಾರಿಗಳಿಗೆ ಮುಂಜಾಗೃತೆಯಾಗಿ ಹಾಗೂ ಬೆಳೆ ಹಾನಿಯಾದ ಬಳಿಕವೂ ಅರ್ಜಿ ಸಲ್ಲಿಸುತ್ತಿದ್ದೇವೆ. ಆದರೆ, ಅಧಿಕಾರಿಗಳು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಸಾವಿರಾರು ರೂ. ಮೀಸಲಿಟ್ಟು ರೈತರನ್ನು ಸಮಾಧಾನಪಡಿಸುತ್ತಿದ್ದಾರೆ. ಮೀಸಲು ಅರಣ್ಯ ಪ್ರದೇಶದ ಸುತ್ತಲಿನ ನಮ್ಮ ಜಮೀನುಗಳಿಗೆ ನಾವೇ ಹೆಸರು, ಗೋವಿನ ಜೋಳ, ಶೇಂಗಾ, ಅಲಸಂದಿ ಇತ್ಯಾದಿ ಬಿತ್ತಿ ಕೊಡುತ್ತೇವೆ. ಎಲ್ಲ ಬೆಳೆಯನ್ನು ನಿಮ್ಮ ಕಾಡುಪ್ರಾಣಿಗಳಿಗೆ ಮೇಯಲು ಬಿಡುತ್ತೇವೆ. ಸರ್ಕಾರದಿಂದ ಎಕರೆಗೆ 50 ಸಾ.ರೂ. ಪರಿಹಾರ ಮೊತ್ತವನ್ನು ಪ್ರತಿವರ್ಷವೂ ಕಾಯಂ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ.