ಮಲೆನಾಡಿನಲ್ಲಿ ಮರೆಯಾದ ಕಾಡುಹಣ್ಣುಗಳು

1sri-1
ಬಾಯಲ್ಲಿ ನೀರೂರಿಸುವ ಸಂಪಿಗೆ ಹಣ್ಣು.
Published on

ಶೃಂಗೇರಿ: ಬೇಸಿಗೆ ರಜೆ ಬಂದರೆ ನಗರ, ಪಟ್ಟಣಗಳಿಂದ ಹಳ್ಳಿಗಳಿಗೆ ಬರುವ ಮಕ್ಕಳು ಮನೆ ಸಮೀಪದಲ್ಲಿಯೇ ಇರುವ ಕಾಡುಗಳಿಗೆ ಹೋಗಿ ಕಾಡುಗಳಲ್ಲಿ ಸಿಗುತ್ತಿದ್ದ ಹಣ್ಣುಗಳನ್ನು ತಿಂದು ಸಂಭ್ರಮಿಸುತ್ತಿದ್ದರು. ಆದರೆ ಈ ಬಾರಿ ಕಾಡುಗಳಲ್ಲಿ ಹಣ್ಣುಗಳು ಮರೆಯಾಗಿವೆ.
ಕಾಡಿನಲ್ಲಿ ದೊರೆಯುವ ಹಣ್ಣುಗಳು ನೋಡಲು ಬಲು ಸುಂದರ ಹಾಗೂ ಆರೋಗ್ಯಕ್ಕೂ ಪೂರಕ. ಪಶ್ಚಿಮಘಟ್ಟದಲ್ಲಿ ಈ ರೀತಿಯ ನೂರು ಜಾತಿಯ ಹಣ್ಣುಗಳಿವೆ. ಅವುಗಳು ಪೋಷಕಾಂಶಗಳು ಮತ್ತು ಔಷಧಿಯ ಗುಣಗಳು, ಜೀವಸತ್ವಗಳು, ಸಸಾರಜನಕ, ಕೊಬ್ಬು , ಖನಿಜಾಂಶಗಳನ್ನು ಒಳಗೊಂಡಿರುತ್ತವೆ. ನೆಲ್ಲಿ, ಕರಿಮಾದಲ, ಅಂಜೂರ ಕ್ಯಾರೋಟಿನ್‌ಯುಕ್ತ ಗುಡ್ಡೆಹಣ್ಣುಗಳಲ್ಲಿ ಸಿ ಜೀವಸತ್ವವಿದೆ. ನೇರಳೆ, ಅತ್ತಿ ಮಧುಮೇಹಕ್ಕೆ, ರಕ್ತದೊತ್ತಡಕ್ಕೆ ಜಂಬುನೇರಳೆ, ಬಿರುಂಡಿ ಪಿತ್ತ ನಿವಾರಣೆಗೆ, ಧಾರೆಹುಳಿ ಕಫ ಶಮನಕ್ಕೆ ಸಹಕಾರಿ. ಹೀಗೆ ಪ್ರತಿಯೊಂದು ಹಣ್ಣುಗಳಲ್ಲಿ ಪೋಷಕಾಂಗಳನ್ನು ಕಾಣಬಹುದಾಗಿದೆ.
ಪ್ರಾಣಿ, ಪಕ್ಷಿಗಳಿಗೂ ಪ್ರಿಯ: ಮನುಷ್ಯನ ಜತೆಗೆ ಅಪಾರ ಜೀವರಾಶಿಗಳು ಕಾಡುಹಣ್ಣಿನ ಮೇಲೆ ಅವಲಂಬಿತವಾಗಿವೆ. ಮಂಗಳಗಳಿಗೆ ಸಂಪೆ, ಅತ್ತಿಹಣ್ಣು ಕೆಂದಳಿಲಿಗೆ, ಮುಸುವ ಮತ್ತು ಸಿಂಗಳೀಕಗಳಿಗೆ ಹಲಸು, ಹೆಬ್ಬಲಸು, ಬಾವಲಿಗೆ ಗೋಣಿಹಣ್ಣು ಬಲುಪ್ರೀತಿ. ಅರಳಿ, ಪಿಳ್ಳಿಹಣ್ಣುಗಳು ಬಿಟ್ಟಾಗ ಮರಗಳ ತುಂಬಾ ಹಕ್ಕಿಗಳ ಚಿಲಿಪಿಲಿ ಕಲರವ. ಪ್ರಸ್ತುತ ಮರೆಯಾಗಿದೆ.ಕಾಡುಗಳಲ್ಲಿ ಹಣ್ಣು ಸಿಗದೇ ಕಾಡುಕೋಣಗಳು,ಮಂಗಗಳು ಮುಂತಾದ ಪ್ರಾಣಿಗಳು ತೋಟಗಳಿಗೆ ಲಗ್ಗೆ ಇಡುತ್ತಿದೆ.
ನಿಸರ್ಗದತ್ತವಾದ ಮಲೆನಾಡಿನಲ್ಲಿ ಸಿಗುತ್ತಿದ್ದ ಕಾಡು ಹಣ್ಣುಗಳ ಉಳಿಸುವ ಕಡೆ ಸಂಬಂಧಪಟ್ಟ ಇಲಾಖೆಗಳು ಹೆಚ್ಚಿನ ಗಮನ ನೀಡಬೇಕಿದೆ. ಅಕೇಶೀಯಾ, ಕಾಡಿನ ಗಿಡಗಳನ್ನು ಬೆಳೆಸುವುದಕ್ಕಿಂತ ಹಣ್ಣುಗಳ ತಳಿಗಳನ್ನು ಉಳಿಸುವತ್ತ ಮಲೆನಾಡಿಗರು ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ. ಪ್ರಕೃತಿ ಎಂದರೆ ಕಾಡುಹಣ್ಣುಗಳ ನಾಡು. ಇಲ್ಲಿನ ಒಂದೊಂದು ಹಣ್ಣಿಗೂ ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳನ್ನೂ ಮೀರಿಸುವ ರುಚಿ ಇದೆ ಎಂದು ಮಕ್ಕಳಿಗೆ ತಿಳಿವಳಿಕೆ ಮೂಡಿಸಲು ಮತ್ತೊಮ್ಮ ಮಲೆನಾಡಿನಲ್ಲಿ ಕಾಡುಹಣ್ಣುಗಳನ್ನು ಚಿಗುರಿಸಲು ಮುಂದಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net