ಕಾಡುಪ್ರಾಣಿ ದಾಳಿಗೆ ರೈತ ಬಲಿ?

8kanapur20a-CRIME.jpg
Published on

ಖಾನಾಪುರ: ತಾಲೂಕಿನ ಘೋಸ್ ಬಿಕೆ ಗ್ರಾಮದ ಹೊರವಲಯದಲ್ಲಿ ಕಾಡುಪ್ರಾಣಿ ದಾಳಿಗೆ ರೈತ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಭೀಕಾಜಿ ಈರಪ್ಪ ಮಿರಾಶಿ (63) ಮೃತ ರೈತ.

ಎಂದಿನಂತೆ ಅ.7ರಂದು ಮಧ್ಯಾಹ್ನ ಎಮ್ಮೆಯೊಂದಿಗೆ ಭಿಕಾಜಿ ಜಮೀನಿಗೆ ತೆರಳಿದ್ದರು. ಆದರೆ, ಸಂಜೆ ಎಮ್ಮೆಗಳು ಮಾತ್ರ ಮನೆಗೆ ಮರಳಿದ್ದವು. ಹೀಗಾಗಿ ಮನೆಯವರು ರಾತ್ರಿ ಜಮೀನಿನಲ್ಲಿ ಹುಡುಕಾಡಿದ್ದಾರೆ. ಯುವಕರ ನೆರವಿನಿಂದ ಹುಡುಕಾಡಿದಾಗ ಭಿಕಾಜಿ ಶವವಾಗಿ ಪತ್ತೆಯಾಗಿದ್ದಾರೆ. ಲೋಂಡಾ ಅರಣ್ಯ ಇಲಾಖೆಯ ಆರ್‌ಎಫ್‌ಒ ನಾಗರಾಜ್ ಭೀಮಗೋಳ ಹಾಗೂ ನಂದಗಡ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕ ಅರವಿಂದ ಪಾಟೀಲ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಭಿಕಾಜಿ ಕೈಯಲ್ಲಿದ್ದ ಹಗ್ಗ ಮತ್ತು ಕುಡುಗೋಲು ಅದೇ ಸ್ಥಳದಲ್ಲಿ ಬಿದ್ದಿದ್ದವು. ಕಾಡುಪ್ರಾಣಿ ದಾಳಿಯಿಂದ ಬೆನ್ನಿಗೆ ತೀವ್ರ ಗಾಯವಾಗಿರುವುದು ಕಂಡುಬಂದಿದೆ. ಇದು ಕರಡಿ ದಾಳಿಯಾಗಿರದೆ ಬೇರೆ ಪ್ರಾಣಿ ದಾಳಿಯಾಗಿರುವ ಸಾಧ್ಯತೆ ಹೆಚ್ಚು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ಹಾಗೂ ಯಾವ ಕಾಡು ಪ್ರಾಣಿ
ದಾಳಿ ಮಾಡಿದೆ ಎಂಬುದು ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net