ನಂಜನಗೂಡು : ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಯನ್ನೇ ಕೊಲೆ ಮಾಡಿ ಪತ್ನಿ ಪರಾರಿಯಾಗಿದ್ದಾಳೆ. ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಇಂದಿರಾ ನಗರ ಗ್ರಾಮದ ವೀರಣ್ಣ(41) ಕೊಲೆಯಾದವ.
ಶನಿವಾರ ರಾತ್ರಿ ವೀರಣ್ಣ ಕೂಲಿ ಕೆಲಸ ಮುಗಿಸಿ ಮನೆಗೆ ಬಂದಾಗ ಪತ್ನಿ ಶಿವಮ್ಮ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಳು. ಈ ವಿಚಾರವಾಗಿ ಇಬ್ಬರಿಗೂ ಜಗಳ ಶುರುವಾಗಿದೆ. ಸುಮಾರು ಹೊತ್ತಿನವರೆಗೂ ಜಗಳ ನಡೆಯುತ್ತಿತ್ತು. ಇದನ್ನು ಕಂಡ ವೀರಣ್ಣನ ತಮ್ಮ ಮಾದಪ್ಪ ಅನುಮಾನಗೊಂಡು ಅಣ್ಣನ ಮನೆಗೆ ಬಂದು ನೋಡಿದಾಗ ಬಾಗಿಲು ಮುಚ್ಚಿತ್ತು. ಕೆಲ ಸಮಯದ ನಂತರ ಇದ್ದಕ್ಕಿದ್ದಂತೆ ನಿಶ್ಶಬ್ದವಾಗಿದ್ದು, ಬಾಗಿಲು ಒಡೆದು ನೋಡಿದಾಗ ಅತ್ತಿಗೆ ಶಿವಮ್ಮ ಅಣ್ಣನನ್ನು ಸಾಯಿಸಿ ಕುತ್ತಿಗೆ ಭಾಗಕ್ಕೆ ಸೀರೆ ಸುತ್ತುತ್ತಿದ್ದದ್ದು ಕಂಡುಬಂತು. ನನ್ನನ್ನು ಕಂಡ ತಕ್ಷಣ ಅತ್ತಿಗೆ ಶಿವಮ್ಮ ಮನೆಯಿಂದ ಓಡಿ ಹೋಗಿದ್ದಾಳೆ. ಹಿಡಿದುಕೊಳ್ಳುವಂತೆ ಜೋರಾಗಿ ಕೂಗಿಕೊಂಡಾಗ ಅಕ್ಕಪಕ್ಕದ ಮನೆಯವರು ಆಕೆಯನ್ನು ಹಿಡಿದಿದ್ದಾರೆ. ಅಣ್ಣನ ಸಾವಿಗೆ ಅತ್ತಿಗೆ ಶಿವಮ್ಮಳೇ ಕಾರಣ ಎಂದು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ವೀರಣ್ಣನ ಸಹೋದರ ಮಾದಪ್ಪ ದೂರು ದಾಖಲಿಸಿದ್ದಾನೆ. ವೀರಣ್ಣನ ಸಾವಿಗೆ ಪತ್ನಿಯ ಅಕ್ರಮ ಸಂಬಂಧವೇ ಕಾರಣ ಎನ್ನಲಾಗಿದ್ದು, ಪ್ರತಿದಿನ ದಂಪತಿ ನಡುವೆ ಇದೇ ವಿಚಾರಕ್ಕೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ಸಂಬಂಧ ಆರೋಪಿ ಶಿವಮ್ಮಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.