

ವಿಜಯವಾಣಿ ಸುದ್ದಿಜಾಲ ಆನೇಕಲ್
ಪ್ರಿಯಕರನೊಂದಿಗೆ ಸೇರಿ ಪೊಲೀಸ್ ಕೇಸ್ನಲ್ಲಿ ಪತಿಯನ್ನು ಸಿಲುಕಿಸಲು ಎಣೆದಿದ್ದ ತಂತ್ರ ಬಯಲು ಮಾಡಿದ ಪೊಲೀಸರು ಪತ್ನಿ ಕೈಗೆ ಕೋಳ ತೊಡಿಸಿರುವ ಪ್ರಕರಣ ಪಟ್ಟಣದ ಮಾರುತಿ ಬಡಾವಣೆಯಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಪತಿಗೆ ತೋಡಿದ್ದ ಖೆಡ್ಡಾದಲ್ಲಿ ಪತ್ನಿಯೇ ಸಿಲುಕಿದ್ದು ಇದೀಗ ಆಕೆಯೇ ಪೊಲೀಸ್ ಕೇಸ್ ಎದುರಿಸುವಂತಾಗಿದೆ.
ಉತ್ತಮ ಕರ್ನಾಟಕ ಮೂಲದ ವಿದ್ಯಾರಾಣಿ (36) ಬಂಧಿತೆ. ಪ್ರಿಯಕರ ರಾಮ್ಪ್ರಸಾದ್ (38) ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪತ್ನಿ ಹಾಗೂ ಪ್ರಿಯಕರ ಸಂಚಿಗೆ ಕಾನೂನು ಕುಣಿಕೆಗೆ ತಲೆಯೊಡ್ಡಬೇಕಿದ್ದ ಪತಿ ಕಿರಣ್ (39) ಪೊಲೀಸರ ವಿಚಾರಣೆಯಲ್ಲಿ ಬಯಲಾದ ಅಸಲಿಯತ್ತಿನಿಂದ ಬಚಾವಾಗಿದ್ದಾರೆ.
ಏನಿದು ಪ್ರಕರಣ? ಪಟ್ಟಣದ ಮಾರುತಿ ಬಡಾವಣೆಯಲ್ಲಿ ದಂಪತಿ ನೆಲೆಸಿದ್ದರು. ಜಾಲತಾಣದಲ್ಲಿ ವಿದ್ಯಾರಾಣಿಗೆ ರಾಮ್ಪ್ರಸಾದ್ ಪರಿಚಯವಾಗಿ ಅದು ಸಲುಗೆಗೆ ತಿರುಗಿತ್ತು. ಪ್ರತಿದಿನ ರಾಮ್ಪ್ರಸಾದ್ನೊಂದಿಗೆ ಗಂಟೆಗಟ್ಟಲೆ ವಿದ್ಯಾರಾಣಿ ಚಾಟಿಂಗ್ ಮಾಡುತ್ತಿರುವುದು ಪತಿ ಕಿರಣ್ ಗಮನಕ್ಕೆ ಬಂದಿತ್ತು. ಇದರಿಂದ ಸಿಟ್ಟಿಗೆದ್ದ ಪತಿ ಜಗಳ ಮಾಡಿ ಮೊಬೈಲ್ ಹೊಡೆದು ಹಾಕಿದ್ದ. ಇದರಿಂದ ಆಕ್ರೋಶಗೊಂಡಿದ್ದ ವಿದ್ಯಾರಾಣಿ ಮತ್ತೊಂದು ಮೊಬೈಲ್ ಮೂಲಕ ಪ್ರಿಯಕರನಿಗೆ ವಿಷಯ ತಿಳಿಸಿದ್ದಳು.
ಮಾಸ್ಟರ್ ಪ್ಲಾನ್ ಸಿದ್ದ: ಕಿರಣ್ನನ್ನು ಪೊಲೀಸ್ ಕೇಸ್ನಲ್ಲಿ ಸಿಲುಕಿಸಿ ಜೈಲುಪಾಲು ಮಾಡಲು ಸಂಚುರೂಪಿಸಿದ ರಾಮ್ಪ್ರಸಾದ್ ಮಾಸ್ಟರ್ ಪ್ಲಾನ್ ರೂಪಿಸಿದ್ದ. ಆರ್ಡಿಎಕ್ಸ್ ಬಾಂಬ್ ಹಾಕುವುದಾಗಿ ಬೆದರಿಕೆ ಸಂದೇಶ್ ಟೈಪ್ ಮಾಡಿ ವಿದ್ಯಾರಾಣಿಗೆ ಕಳುಹಿಸಿದ್ದ. ಪೊಲೀಸರಿಗೆ ಹಾಗೂ ಕೇಂದ್ರ ತನಿಖಾ ತಂಡಗಳಿಗೆ ಪತಿ ಮೊಬೈಲ್ನಿಂದ ಕಳುಹಿಸುವಂತೆ ಸೂಚನೆ ನೀಡಿದ್ದ. ಅದರಂತೆ ಡಿ.5ರಂದು ವಿದ್ಯಾರಾಣಿ ಸಂದೇಶ ಕಳುಹಿಸಿ ಬಳಿಕ ಡಿಲೀಟ್ ಮಾಡಿದ್ದಳು.
ವಿಚಾರಣೆಯಲ್ಲಿ ಅಲಿಯತ್ತು ಬಯಲು: ಬೆದರಿಕೆ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹಾಗೂ ತನಿಖಾ ಸಂಸ್ಥೆ ಅಧಿಕಾರಿಗಳು ನಂಬರ್ ಆಧರಿಸಿ ಕಿರಣ್ ಮನೆಗೆ ದಾವಿಸಿದ್ದರು. ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿಯತ್ತು ಬಯಲಾಗಿದೆ. ಆನೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿದ್ಯಾರಾಣಿಯನ್ನ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಮಾಸ್ಟರ್ ಮೈಂಡ್ ರಾಮ್ ಪ್ರಸಾದ್ ಬಂಧನಕ್ಕೆ ಬಲೆ ಬೀಸಲಾಗಿದೆ.
.