

ಬೆಳಗಾವಿ: ಇಲ್ಲಿನ ಟಿಳಕವಾಡಿಯ ಮಂಗಳವಾರ ಪೇಟೆಯಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಬುಧವಾರ ಗೀತಾ ರಂಜಿತ ದಾವಲೆ (55) ಎಂಬ ವಿಧವೆಯನ್ನು ಆಕೆಯ ಮೈದುನನೇ ಹತ್ಯೆ ಮಾಡಿದ್ದಾನೆ.
ನಗರದ ಮಂಗಳವಾರ ಪೇಟೆ ನಿವಾಸಿ ಗಣೇಶ ದಾವಲೆ (50) ಕೊಲೆ ಆರೋಪಿ. ಕಳೆದ ಹಲವು ತಿಂಗಳಿನಿಂದ ಎರಡೂ ಕುಟುಂಬಗಳ ನಡುವೆ ಆಸ್ತಿ ವಿವಾದ ನಡೆದಿತ್ತು. ರಂಜಿತ ದಾವಲೆ ಮೃತಪಟ್ಟಿದ್ದರಿಂದ ಅವರ ಎಲ್ಲ ಆಸ್ತಿಗಳು ಪತ್ನಿ ಗೀತಾ ದಾವಲೆ ಹೆಸರಿಗೆ ವರ್ಗಾವಣೆಗೊಂಡಿದ್ದವು. ಆರೋಪಿ ಈ ಆಸ್ತಿಗಳಿಗೆ ಸಂಬಂಧಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಲ ಪಡೆದುಕೊಂಡಿದ್ದ ಹಾಗೂ ಆಸ್ತಿಯನ್ನು ಬಿಟ್ಟುಕೊಡುವಂತೆ ಅತ್ತಿಗೆಯನ್ನು ಒತ್ತಾಯಿಸುತ್ತಿದ್ದನು. ಇದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಕುರಿತು ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.