ಬಂದ್ ಆಚರಣೆಗೆ ವ್ಯಾಪಕ ಬೆಂಬಲ

ಬಂದ್ ಆಚರಣೆಗೆ ವ್ಯಾಪಕ ಬೆಂಬಲ
Published on

ಶನಿವಾರಸಂತೆ: ಸಿ ಆ್ಯಂಡ್ ಡಿ ಲ್ಯಾಂಡ್ ಗೊಂದಲಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ತಾಲೂಕು ರೈತ ಹೋರಾಟ ಸಮಿತಿ ಮಂಗಳವಾರ ಕರೆ ನೀಡಿದ್ದ ತಾಲೂಕು ಬಂದ್‌ಗೆ ಕೊಡ್ಲಿಪೇಟೆ ಹೋಬಳಿ ಮತ್ತು ಆಲೂರು ಸಿದ್ದಾಪುರ ವ್ಯಾಪ್ತಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಇಲ್ಲಿ ವರ್ತಕರು ಸ್ವಯಂ ಪ್ರೇರಣೆಯಿಂದ ಹೋಟೆಲ್, ಕ್ಯಾಂಟೀನ್ ಹಾಗೂ ಅಂಗಡಿಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ನೀಡಿದರು. ಕೊಡ್ಲಿಪೇಟೆ ವರ್ತಕರ ಸಂಘ, ಕರ್ನಾಟಕ ರಕ್ಷಣ ವೇದಿಕೆ, ರೈತ ಹೋರಾಟ ಸಮಿತಿ, ಮತ್ತು ಸಾರ್ವಜನಿಕರು ಸಹ ಬಂದ್ ಆಚರಣೆಗೆ ಕೈ ಜೋಡಿಸಿದರು.

ಬೆಳಗ್ಗೆ 6 ರಿಂದ ಸಂಜೆ 6ವರೆಗೆ ಕೊಡ್ಲಿಪೇಟೆ ವರ್ತಕರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಮುಚ್ಚಿ ವ್ಯವಹಾರ ಸ್ಥಗಿತಗೊಳಿಸಿದ್ದರು. ಅರಕಲಗೂಡು, ಸಕಲೇಶಪುರ, ಹಾಸನ ಕಡೆಗೆ ಸಂಚರಿಸುವ ರಸ್ತೆ ಸಾರಿಗೆ ಬಸ್‌ಗಳು ಹೊರತು ಪಡಿಸಿದಂತೆ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತು. ಬೆಳಗ್ಗೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಭೆ ನಡೆಸಿದ ರೈತ ಹೋರಾಟಗಾರರು ಮತ್ತು ಬಂದ್‌ಗೆ ಬೆಂಬಲ ನೀಡಿದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಸಿಡಿ ಲ್ಯಾಂಡ್ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗುತ್ತಿರುವುದು ಮತ್ತು ರೈತರ ಜಮೀನನ್ನು ಅರಣ್ಯ ಇಲಾಖೆ ವಶ ಪಡಿಸಿಕೊಳ್ಳಲು ನಡೆಸುತ್ತಿರುವ ಹುನ್ನಾರವನ್ನು ಖಂಡಿಸಿದರು.

ನಂತರ ರೈತ ಹೋರಾಟಗಾರರು ಈ ಸಂಬಂಧ ಮನವಿ ಪತ್ರವನ್ನು ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲುಪಿಸಿದರು. ರೈತ ಹೋರಾಟ ಸಭೆಯಲ್ಲಿ ವರ್ತಕರ ಸಂಘದ ಯತೀಶ್‌ಕುಮಾರ್, ಮುಖಂಡರಾದ ಕೆ.ಆರ್.ಚಂದ್ರಶೇಖರ್, ಶಿವಕುಮಾರ್, ಭಗವಾನ್ ಇತರರು ಇದ್ದರು.

ಆಲೂರು ಸಿದ್ದಾಪುರದಲ್ಲೂ ಬೆಂಬಲ: ಆಲೂರು ಸಿದ್ದಾಪುರ ರೈತ ಹೋರಾಟ ಸಮಿತಿ, ವಿವಿಧ ಸಂಘ ಸಂಸ್ಥೆಗಳು, ರೈತರು ಮತ್ತು ಸಾರ್ವಜನಿಕರು ಮಂಗಳವಾರ ನಡೆದ ತಾಲೂಕು ಬಂದ್‌ಗೆ ಬೆಂಬಲ ನೀಡಿದರು.

ಆಲೂರು ಸಿದ್ದಾಪುರದ ಹೋಟೆಲ್, ಕ್ಯಾಂಟೀನ್ ಹಾಗೂ ಅಂಗಡಿ-ಮುಂಗಟ್ಟುಗಳನ್ನು ವರ್ತಕರು ಸ್ವಯಂಪ್ರೇರಿತರಾಗಿ ಮುಚ್ಚಿದರು. ರೈತ ಹೋರಾಟಗಾರರು ಗ್ರಾಮದ ಜಂಕ್ಷನ್‌ನಲ್ಲಿ ಬೆಳಗ್ಗೆ ಸ್ವಲ್ಪ ಹೊತ್ತು ಖಾಸಗಿ ವಾಹನಗಳ ಸಂಚಾರ ತಡೆದು ಬಳಿಕ ಬಿಟ್ಟರು.

ನಂತರ ಗ್ರಾಮದ ಜಂಕ್ಷನ್‌ನಲ್ಲಿ ಸಭೆ ಸೇರಿದ ರೈತ ಹೋರಾಟಗಾರರು, ಸಿ ಆ್ಯಂಡ್ ಡಿ ಭೂಮಿ ವಿಚಾರದಲ್ಲಿ ಅರಣ್ಯ ಇಲಾಖೆಯ ನಿಲುವನ್ನು ಖಂಡಿಸಿದರು. ಈ ವಿಚಾರದ ಬಗ್ಗೆ ಹಲವು ಬಾರಿ ಶಾಸಕರು, ಸರಕಾರದ ಗಮನಕ್ಕೆ ತರುತ್ತಿದ್ದರೂ ಸರಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿಲ್ಲ. ಈ ಕಾರಣದಿಂದ ಮುಂದಿನ ದಿನದಲ್ಲಿ ರೈತರು ದೊಡ್ಡ ಮಟ್ಟದಲ್ಲಿ ಹೋರಾಟ, ಪ್ರತಿಭಟನೆಯ ಹಾದಿ ಹಿಡಿಯುವ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಂಡರು.

ನಂತರ ರೈತ ಮುಖಂಡರು ಗ್ರಾಪಂ ಪಿಡಿಒ ಮೂಲಕ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು. ಮುಖಂಡರಾದ ಎಸ್.ಜೆ.ಪ್ರಸನ್ನ, ಕೆ.ವಿ.ಜಯಕುಮಾರ್, ಸತೀಶ್‌ಕುಮಾರ್, ಎ.ಜಿ.ವಿಜಯ್, ಕಿರಣ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net