ವಕ್ಪ್ ಕಾರ್ಯವೈಖರಿಗೆ ವ್ಯಾಪಕ ಆಕ್ರೋಶ

NAREGAL VAKF
Published on

ನರೇಗಲ್ಲ: ರೈತರ ಪಹಣಿಗಳಲ್ಲಿ ಏಕಾಏಕಿ ವಕ್ಪ್ ಬೋರ್ಡ್ ಹೆಸರು ಸೇರಿಸಿರುವುದರಿಂದ ನಮ್ಮ ಮನಸಿಗೆ ತೀವ್ರ ನೋವಾಗಿದೆ ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ರಾಜ್ಯಾದ್ಯಂತ ಕೃಷಿ ಜಮೀನು, ಧಾರ್ವಿುಕ ಕೇಂದ್ರ, ಸರ್ಕಾರಿ ಜಾಗ ಹಾಗೂ ಸಾಮಾನ್ಯ ಜನರ ಆಸ್ತಿಯ ಪಹಣಿಯಲ್ಲಿ ವಕ್ಪ್ ಮಂಡಳಿ ಹೆಸರು ನಮೂದಾಗಿದ್ದನ್ನು ವಿರೋಧಿಸಿ ಭಾರತಿಯ ಕಿಸಾನ್ ಸಂಘ, ನರೇಗಲ್ಲ ಪಟ್ಟಣ ಅಭಿವೃದ್ಧಿ ಸಮಿತಿ ಹಾಗೂ ವ್ಯಾಪಾರಸ್ಥರ ಸಂಘದ ಆಶ್ರಯದಲ್ಲಿ ಭಾನುವಾರ ಕರೆ ನೀಡಿದ್ದ ನರೇಗಲ್ಲ ಬಂದ್ ಅಂಗವಾಗಿ ಹೊಸ ಬಸ್​ನಿಲ್ದಾಣದ ಸರ್ಕಲ್ ಬಳಿ ಜರುಗಿದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ಹಿಂದು ಧರ್ಮದ ಪರಂಪರೆಯಲ್ಲಿ ಬರುವ ಎಲ್ಲ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಮುಜರಾಯಿ ಇಲಾಖೆ ಎನ್ನುವುದಿದೆ. ಈ ಇಲಾಖೆಗೆ ದಾನದ ರೂಪದಲ್ಲಿ ಅನೇಕ ಆಸ್ತಿ ಬಂದಿದೆ. ಅದು ಸರ್ಕಾರಕ್ಕೆ ಸೇರುತ್ತದೆ. ಈ ಇಲಾಖೆಗೆ ತನ್ನದೇ ಆದ ಕಾನೂನು ಚೌಕಟ್ಟಿದೆ. ಅದೇ ರೀತಿ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದಂತೆ ವಕ್ಪ್ ಬೋರ್ಡ್ ಎನ್ನುವುದಿದೆ. ಆದರೆ, ಎರಡಕ್ಕೂ ತುಂಬಾ ಕಾನೂನಿನ ವ್ಯತ್ಯಾಸಗಳಿವೆ. ಒಂದೇ ದೇಶದ, ಒಂದೇ ಕಾನೂನಿನಡಿಯಲ್ಲಿದ್ದರೂ ಕಾಯ್ದೆಗಳಲ್ಲಿ ವ್ಯತ್ಯಾಸವಿರುವ ಕಾರಣ ರೈತರ ಜಮೀನುಗಳು, ಮಠದ ಆಸ್ತಿಗಳು ವಕ್ಪ್ ಬೋರ್ಡ್​ನಲ್ಲಿ ಕಾಣುತ್ತಿದ್ದೇವೆ. ಬಹಳ ಜನರಿಗೆ ಅವರ ಆಸ್ತಿ ಉತಾರ ಹಾಗೂ ಅದರಲ್ಲಿನ ಕಾಲಂಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಯಾವಾಗ ಕುತ್ತಿಗೆಗೆ ಬರುತ್ತದೆಯೋ ಆಗ ಪರಿಶೀಲನೆಗೆ ಮುಂದಾಗುತ್ತಾರೆ. ಸಂವಿಧಾನದ ಸಮಾನತೆಯಡಿ ನಾವೆಲ್ಲ ಬರಬೇಕು. ಈ ಕುರಿತು ರಾಷ್ಟ್ರಾದ್ಯಂತ ಹೋರಾಟವಾಗಬೇಕು’ ಎಂದರು.

ನರೇಗಲ್ಲನ ರಹಿಮಾನ ಶಾವಲಿ ದರ್ಗಾದ ಸಯ್ಯದ್ ಮಂಜೂರ ಹುಸೇನ್ ಶ್ಯಾವಲಿ ಶರಣರು ಮಾತನಾಡಿ, ಯಾವೊಬ್ಬ ರೈತನಿಗೂ ಯಾವುದೇ ರೀತಿ ಅನ್ಯಾಯವಾಗಬಾರದು ಎಂದರು.

ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀಧರ ಕುಲಕರ್ಣಿ ಮಾತನಾಡಿ, 1957ರ ಕಾನೂನಿನ ಪ್ರಕಾರ ಕೇವಲ 8 ಸಾವಿರ ಎಕರೆ ವಕ್ಪ್ ಆಸ್ತಿ ಇತ್ತು. ಆದರೆ, ಸರ್ಕಾರದಿಂದ ಆಗಾಗ ನೀಡಿದ ಸವಲತ್ತುಗಳಿಂದ ಈಗ 9.40 ಲಕ್ಷ ಎಕರೆ ಆಸ್ತಿಯಾಗಿದೆ. ಆದರೆ, ಒವೈಸಿ ಪ್ರಕಾರ 36 ಲಕ್ಷ ಎಕರೆ ವಕ್ಪ್​ಗೆ ಸೇರಿದೆ ಎನ್ನುತ್ತಾರೆ. ಹೀಗಾದರೆ ಅರ್ಧ ಭಾರತವೇ ವಕ್ಪ್ ಆಸ್ತಿಯಾಗಿದೆ. ಇದನ್ನು ನೋಡಿದರೆ ದೇಶವನ್ನು ಇಸ್ಲಾಂ ರಾಷ್ಟ್ರವನ್ನಾಗಿಸುವ ಉದ್ದೇಶವನ್ನು ವಕ್ಪ್ ಹೊಂದಿದೆ ಎನ್ನುವಂತಿದೆ ಎಂದು ಆರೋಪಿಸಿದರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸಹಕಾರ್ಯದರ್ಶಿ ಉಮೇಶ ಪಾಟೀಲ ಮಾತನಾಡಿ, ರೈತರ ಆಸ್ತಿಯನ್ನು ವಕ್ಪ್ ಆಸ್ತಿಯನ್ನಾಗಿ ಮಾಡಲು ಹೊರಟರೆ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬಸವರಾಜ ವಂಕಲಕುಂಟಿ, ಜಗದೀಶ ಸಂಕನಗೌಡ್ರ, ರಘುನಾಥ ಕೊಂಡಿ, ಮಂಜುನಾಥ ಹೆಗಡೆ, ಚನ್ನಬಸಪ್ಪ ಕುಷ್ಟಗಿ, ರವಿ ಮ್ಯಾಗೇರಿ, ಹಂಜಿ ಶೆಟ್ಟರ, ಬಾಳಪ್ಪ ಸೊಮಗೊಂಡ, ಶರಣಪ್ಪ ಧರ್ವಯತ, ಚಂದ್ರಾಂ ಗ್ರಾಮಪುರೋಹಿತ, ಈರಣ್ಣ ಹತ್ತಿಕಟಗಿ, ಕಿರಣ ಕೆರಿಯವರ, ಸಿದ್ದಪ್ಪ ಶಿರಹಟ್ಟಿ, ಬಿ.ಕೆ. ಪೊಲೀಸ್ ಪಾಟೀಲ, ರಾಜಣ್ಣ ವಂಕಲಕುಂಟಿ, ಶಿವಾನಂದ ಇಟಗಿ, ಧ್ರುವ ವಡ್ಡಟ್ಟಿ, ವಿನೋದ ರಾಯಬಾಗಿ, ಇತರರಿದ್ದರು.

ಇದಕ್ಕೂ ಮುನ್ನ ಪಟ್ಟಣದ ಚಾವಡಿ ಹತ್ತಿರದ ಗಣಪತಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ಹಳೇ ಬಸ್ ನಿಲ್ದಾಣ, ಜಕ್ಕಲಿ ಕ್ರಾಸ್ ಮೂಲಕ ಹೊಸ ಬಸ್ ನಿಲ್ದಾಣದ ಸರ್ಕಲ್​ವರೆಗೆ ತೆರಳಿ, ಬಹಿರಂಗ ಸಭೆಯಾಗಿ ಮಾರ್ಪಟ್ಟಿತು. ಮೆರವಣಿಗೆಯುದ್ದಕ್ಕೂ ‘ವಕ್ಪ್ ಹಟಾವೋ ರೈತ ಬಚಾವೋ’ ಎಂಬಿತ್ಯಾದಿ ಘೊಷಣೆಗಳನ್ನು ಕೂಗಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net