

ಹೊನ್ನಾವರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಸಾಧಕ-ಬಾಧಕಗಳ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ತಾಲೂಕಿನ ಗೇರುಸೊಪ್ಪ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಸಭಾಭವನದಲ್ಲಿ ಭಾನುವಾರ ನಡೆಯಿತು.
ವಿವಿಧ ಕ್ಷೇತ್ರದ ತಜ್ಞರು, ಪರಿಸರ ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ವಿಷಯ ಮಂಡಿಸಿದರು. ಯೋಜನೆಯ ವಿರುದ್ಧ ಹೆಚ್ಚು ಅಭಿಪ್ರಾಯಗಳು ಕೇಳಿ ಬಂದಿದ್ದು, ಖಂಡನಾ ನಿರ್ಣಯ ಮಂಡಿಸಲಾಯಿತು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ವಿದ್ಯುತ್ ಉತ್ಪಾದಿಸಲು ಅನೇಕ ಮಾರ್ಗಗಳಿವೆ; ಅವುಗಳನ್ನು ಬಳಸಲಿ. ಶರಾವತಿ ಪಂಪ್ಡ್ ಯೋಜನೆಯಿಂದ ಸರಿಸುಮಾರು 10 ಸಾವಿರ ಎಕರೆ ಅರಣ್ಯ ಭೂಮಿ ನಾಶ ಆಗಲಿದೆ. ವಿದ್ಯುತ್ ಉತ್ಪಾದನೆ ಆದ ನಂತರ ಅದರ ಹಂಚಿಕೆ ಮಾಡುವಾಗ ಮತ್ತೆ ಅರಣ್ಯ ನಾಶ ಆಗುತ್ತದೆ. ಈ ನಷ್ಟ ಯಾರು ತುಂಬುಕೊಡುತ್ತಾರೆ. ಆರಂಭದಲ್ಲಿ 9 ಸಾವಿರ ಕೋಟಿ ರೂ.ಗಳ ಯೋಜನೆ ಎನ್ನುತ್ತಾರೆ. ಮುಗಿಯುವ ವೇಳೆ 14 ಸಾವಿರ ಕೋಟಿ ರೂ. ದಾಟುತ್ತದೆ. ಇದರ ವಿರುದ್ಧ ಹೋರಾಟ ನಡೆಸಬೇಕು ಎಂದರು.
ಪರಿಸರ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಮಾತನಾಡಿ, ಪಶ್ಚಿಮ ಘಟ್ಟದ ಈ ಭಾಗವು ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಇಲ್ಲಿ ಯಾವುದೇ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ. ಇಂದು ಸಮಾಜ, ವಿಜ್ಞಾನ, ಸಂಸ್ಕೃತಿಯು ಒಂದೂಗೂಡಿದೆ. ಅಧಿಕಾರಿಗಳ ಕುತಂತ್ರದಿಂದ ಇಂತಹ ಯೋಜನೆ ತರಲು ಮುಂದಾಗಿದ್ದಾರೆ. ಇದನ್ನು ನಾವೆಲ್ಲರೂ ವಿರೋಧಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಪಿ.ಎಸ್. ಭಟ್ ಉಪ್ಪೋಣಿ ಮಾತನಾಡಿ, ಈ ಯೋಜನೆಯ ವಿಚಾರವಾಗಿ ಸದನದಲ್ಲಿ ಕೆ.ಜೆ. ಜಾರ್ಜ್ ಅವರು ಅವೈಜ್ಞಾನಿಕವಾದ ಉತ್ತರವನ್ನು ನೀಡಿದ್ದಾರೆ. ಈ ಯೋಜನೆಯಲ್ಲಿ ಷಡ್ಯಂತ್ರ ಇದೆ. ಯೋಜನೆಯಿಂದ ನಾವು ಮುಂದಿನ ದಿನಗಳಲ್ಲಿ ದಿನ ಬಳಕೆಗೆ ಉಪ್ಪು ನೀರನ್ನು ಬಳಸಬೇಕಾಗುವ ಪರಿಸ್ಥಿತಿ ಬರುತ್ತದೆ ಎಂದರು.
ವಿಜ್ಞಾನಿ ಡಾ. ಪ್ರಕಾಶ್ ಮೇಸ್ತ ಮಾತನಾಡಿ, ಪಂಚಭೂತಗಳಲ್ಲಿ ಒಂದಾದ ಜಲಮೂಲವನ್ನು ನಾವು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಅವೈಜ್ಞಾನಿಕ ಯೋಜನೆಗಳು ಮುಂದಿನ ದಿನಗಳಲ್ಲಿ ಮಾರಕವಾಗಲಿದೆ ಎಂದರು.
ಕೆಪಿಸಿಎಲ್ನ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯ್ ಅವರು ಯೋಜನೆ ಕುರಿತು ವಿವರಿಸಿ, ಮೆಕಾನಿಕಲ್ ಸ್ಟೋರೆಜ್ನಡಿ ಈ ಪಂಪ್ ಸ್ಟೋರೇಜ್ ಮಾಡಲಿದ್ದೇವೆ. ಹೆಚ್ಚಿನ ವಿದ್ಯುತ್ ಶೇಖರಣೆ ಮಾಡಲು ಪಂಪ್ಡ್ ಸ್ಟೋರೇಜ್ ಅನುಕೂಲವಾಗುತ್ತದೆ ಎಂದರು.
ಯೋಜನೆಯ ಅನಾಹುತದ ಕುರಿತು ಡಾ. ಎನ್.ಎಂ. ಗುರುಪ್ರಸಾದ್, ಡಾ. ಗಿರೀಶ್ ಜನ್ನೆ, ಡಾ. ಸವಿನಯ ಮಾಲ್ವೆ, ಡಾ. ಸಚೇತ್ ಹೆಗಡೆ, ಕಾರ್ತಿಕ್ ಸಾಲೇಹಿತ್ತಲ್, ಸಂದೀಪ್ ಹೆಗಡೆ, ಪ್ರೊ.ಬಿ.ಎಂ. ಕುಮಾರಸ್ವಾಮಿ, ಎಂ.ಡಿ. ಸುಭಾಷ್ ಚಂದ್ರನ್, ಡಾ. ಶ್ರೀಪತಿ, ಶಂಕರ ಶರ್ವ, ಕೇಶವ ಕೂರ್ಸೆ, ಗ್ರಾಪಂ ಅಧ್ಯಕ್ಷೆ ಸುನೀತಾ ಹೆಗಡೆ, ಉಪಾದ್ಯಕ್ಷ ಮಂಜುನಾಥ ನಾಯ್ಕ, ಹೋರಾಟಗಾರ ಚಂದ್ರಕಾಂತ ಕೊಚರೇಕರ್, ಹೊನ್ನಾವರ ಉಳಿಸಿ ವೇದಿಕೆ ಅಧ್ಯಕ್ಷ ಜಿ.ಎನ್. ಗೌಡ, ಕರವೇ ಅಧ್ಯಕ್ಷ ಮಂಜುನಾಥ ಗೌಡ, ವಿನಾಯಕ ನಾಯ್ಕ, ಮಹೇಶ ನಾಯ್ಕ ಇತರರಿದ್ದರು. ಅಜಿತಕುಮಾರ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣದಾಸ್ ಮಹಾಲೆ ಕಾರ್ಯಕ್ರಮ ನಿರ್ವಹಿಸಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಕುರಿತು ಆರೋಗ್ಯಕರ ಚಿಂತನೆ ಆಗಬೇಕು ಎನ್ನುವ ದೃಷ್ಟಿಯಿಂದ ಸಭೆ ನಡೆಸಲಾಗಿದೆ. ಯೋಜನೆಯು ಹಾನಿಕಾರಕವಾದುದು ಎಂಬುದು ವ್ಯಕ್ತವಾಗಿದೆ. ಪಂಚಾಯಿತಿಯಿಂದ ಪ್ರಧಾನಮಂತ್ರಿಗಳವರೆಗೂ ಖಂಡನಾ ನಿರ್ಣಯ ತಲುಪಬೇಕಿದೆ. | ಶ್ರೀ ಮಾರುತಿ ಗುರೂಜಿ, ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಜೀವವೈವಿಧ್ಯತೆಯ ಬಗ್ಗೆ ಅಧ್ಯಯನ ಮಾಡದೇ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಇಂದು ತಂತ್ರಜ್ಞಾನ ಎಷ್ಟೊಂದು ಮುಂದುವರಿದಿದೆ. ಆದರೆ, ಇನ್ನು ಈ ಭೂಗತ ಯೋಜನೆಯ ಮೂಲಕ ವಿದ್ಯುತ್ ಉತ್ಪಾದಿಸಲು ಮುಂದಾಗುತ್ತಿದ್ದಾರೆ. ಇಂದು ಅಧಿಕೃತವಾಗಿ ಕೆಪಿಸಿಯವರು ಬಂದಿದ್ದಾರೆ. ಮುಂದೆ ಈ ಯೋಜನೆ ಗುತ್ತಿಗೆ ಪಡೆದ ಗುತ್ತಿಗೆದಾರರು ಬಂದು ಬೆದರಿಸಲು ಮುಂದಾಗುತ್ತಾರೆ. ಇಲ್ಲಿಯವರು ಕಲ್ಲು ಹೊಡೆಯಲು ಆರಂಭಿಸಿಲ್ಲವಾದರೆ ಈ ಯೋಜನೆ ಮುಂದುವರಿಯುತ್ತದೆ. ಜನ ಸಮೂಹದೊಂದಿಗೆ ಹೋರಾಟದ ಜತೆಗೆ ನಾವು ಕಾನೂನಾತ್ಮಕವಾಗಿಯೂ ಹೋರಾಟ ಮುಂದುವರೆಸುತ್ತೇವೆ.| ಅಖಿಲೇಶ್ ಚಿಪ್ಲಿ, ಪರಿಸರ ತಜ್ಞ ಖಂಡನಾ ನಿರ್ಣಯ: ಉತ್ತರ ಕನ್ನಡ ಜಿಲ್ಲೆಯ ಅಪೂರ್ವವಾದ ಇಂಥ ನೈಸರ್ಗಿಕ ಸಂಪತ್ತನ್ನು ಶಾಶ್ವತವಾಗಿ ಕಾಪಾಡುವ ನೈತಿಕ ಮತ್ತು ಸಂವಿಧಾನಿಕ ಜವಾಬ್ದಾರಿ ಸಮಾಜಕ್ಕೆ ಮತ್ತು ಸರ್ಕಾರದ್ದಾಗಿದೆ. ಶರಾವತಿ ಕೊಳ್ಳದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಯೋಜನೆಯು ಅವೈಜ್ಞಾನಿಕವಾಗಿದ್ದು, 120 ಮಿಲಿಯನ್ ವರುಷಗಳಿಂದ ವಿಕಸನಗೊಂಡ ಅಪೂರ್ವ ನಿತ್ಯಹರಿದ್ವರ್ಣ ಮಳೆಕಾಡಿಗೆ ಮಾರಕವಾಗಿ ಪರಿಣಮಿಸಲಿದೆ. ಪರಿಸರ ಸಂಬಂಧಿ ಶಾಶ್ವತ ನಷ್ಟ ಉಂಟುಮಾಡುವ ಈ ಅವೈಜ್ಞಾನಿಕ ಯೋಜನೆಯನ್ನು ತಡೆಗಟ್ಟಬೇಕಿದೆ. ಪ್ರಸ್ತಾವಿತ ಯೋಜನೆ ಅನುಷ್ಠಾನಗೊಂಡಲ್ಲಿ, ಅತಿವಿರಳವಾಗಿರುವ ಸಿಂಗಳೀಕಗಳ ಶಾಶ್ವತ ಅವನತಿಗೆ ಕಾರಣವಾಗುತ್ತದೆ. ಸಿಂಗಳೀಕದಂಥ ಅತಿ ವಿಶಿಷ್ಠ ಜೀವಿಯ ಅಳಿದುಳಿದ ಸಂಕುಲವನ್ನು ಶಾಶ್ವತವಾಗಿ ಈ ಭೂಮಿಯಿಂದಲೇ ನಾಶಪಡಿಸುವ ಹಕ್ಕು ಯಾವುದೇ ಸರ್ಕಾರಕ್ಕೆ ಇಲ್ಲ. ಶರಾವತಿ ನದಿ ನೀರನ್ನು ಈಗಾಗಲೇ ಸಾಕಷ್ಟು ತಡೆಹಿಡಿದು ಅಣೆಕಟ್ಟುಗಳನ್ನು ಕಟ್ಟಿದ್ದು, ಪುನಃ ನದಿ ಪಥದಲ್ಲಿ ಹೊಸ ಯೋಜನೆಗಳು ಬಂದಲ್ಲಿ, ಸಮುದ್ರ ಸೇರುವ ನದಿ ನೀರಿನ ಪ್ರಮಾಣ ಇನ್ನಷ್ಟು ಇಳಿಮುಖವಾಗಲಿದ್ದು, ಅಂಥ ಸನ್ನಿವೇಶದಲ್ಲಿ ಸಮುದ್ರದ ಉಪ್ಪು ನೀರು ಗೇರುಸೊಪ್ಪೆಯವರೆಗೂ ತಲುಪಲಿದೆ. ಇದು, ಗೇರುಸೊಪ್ಪೆಯಿಂದ ಹೊನ್ನಾವರದವರೆಗಿನ ನದಿಯ ಇಕ್ಕೆಲಗಳಲ್ಲಿ ಕೃಷಿ ಮತ್ತು ಸಿಹಿನೀರಿನ ಮೀನುಗಾರಿಕೆಯನ್ನೇ ಅವಲಂಬಿಸಿ ಬದುಕುತ್ತಿರುವ ಸಹಸ್ರಾರು ಕುಟುಂಬಗಳ ಆದಾಯದ ಮೂಲವನ್ನೇ ಕಸಿದುಕೊಳ್ಳಲಿದೆ. ಇಂಥ ವಿನಾಶಕಾರಿ ಪ್ರಸ್ತಾವಿತ ಯೋಜನೆಯನ್ನು ಖಂಡಿಸಬೇಕಾಗಿದೆ.