

ಹಾನಗಲ್ಲ: ಹಾನಗಲ್ಲ ಹೊರಭಾಗದಲ್ಲಿ ತಡಸ್-ಶಿವಮೊಗ್ಗ ಹೆದ್ದಾರಿಯ ಮಲ್ಲಿಗ್ಗಾರ ಬಳಿ ನಿರ್ವಿುಸುತ್ತಿರುವ ಟೋಲ್ ಸಂಗ್ರಹ ಕೇಂದ್ರಕ್ಕೆ ಸಾರ್ವಜನಿಕರಿಂದ ತೀವೃ ವಿರೋಧ ವ್ಯಕ್ತವಾಗಿದೆ. ಟೋಲ್ ಸ್ಥಾಪನೆಗೆ ನಡೆಸುತ್ತಿದ್ದ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಪ್ರತಿಭಟನೆಯನ್ನೂ ಕೈಗೊಂಡಿದ್ದಾರೆ.
ತಡಸ್-ಶಿವಮೊಗ್ಗ ಮಾರ್ಗಮಧ್ಯೆ ಹಾಕಬೇಕಿದ್ದ ಟೋಲ್ ಕೇಂದ್ರವನ್ನು ಬಂಕಾಪುರ-ಹುಬ್ಬಳ್ಳಿ ಹಾಗೂ ಗದಗಕ್ಕೆ ತೆರಳುವ ರಸ್ತೆಗೆ ಹಾಕಲಾಗುತ್ತಿದೆ. ಇದರಿಂದ ಹುಬ್ಬಳ್ಳಿ ಹಾಗೂ ಗದಗ ತೆರಳುವವರೂ ಹಣ ತೆರುವಂತಾಗುತ್ತದೆ. ತಡಸ್ ಮಾರ್ಗದಿಂದ ತೆರಳುವ ವಾಹನಗಳಿಗೆ ಮಾತ್ರ ಟೋಲ್ ಹಾಕಬೇಕು. ಗದಗ, ಬಂಕಾಪುರಕ್ಕೆ ತೆರಳುವವರು ಏಕೆ ಟೋಲ್ ನೀಡಬೇಕು ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಕರಗುದರಿ ಗ್ರಾಮದ ಸಮೀಪ ಅಳವಡಿಸಬೇಕಿದ್ದ ಟೋಲ್ನ್ನು ಮಲ್ಲಿಗ್ಗಾರ ಸಮೀಪ ಸ್ಥಾಪಿಸಲಾಗುತ್ತಿರುವುದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 2019ರಲ್ಲಿ ತಡಸ್ ಹಾನಗಲ್ಲ-ಶಿವಮೊಗ್ಗ ರಾಜ್ಯ ಹೆದ್ದಾರಿ ನಿರ್ವಣಗೊಂಡಿದ್ದು, ಈಗ 5 ವರ್ಷಗಳ ನಂತರ ಟೋಲ್ ನಿರ್ವಿುಸುತ್ತಿರುವುದೇಕೆ? ಅನಗತ್ಯವಾಗಿ ಸಾರ್ವಜನಿಕರನ್ನು ಆರ್ಥಿಕವಾಗಿ ಶೋಷಣೆಗೊಳಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ತಡಸ್-ಶಿವಮೊಗ್ಗ ಮಾರ್ಗದಲ್ಲಿ ಟೋಲ್ ಹಾಕುವ ಅಗತ್ಯವಿಲ್ಲ. ಈ ರಸ್ತೆ ರಾಜ್ಯ ಹೆದ್ದಾರಿ ಗುಣಮಟ್ಟದಲ್ಲಿ ನಿರ್ವಣಗೊಂಡಿಲ್ಲ. ಅಲ್ಲದೆ, ಯಾವುದೇ ಮೂಲ ಸೌಕರ್ಯಗಳನ್ನೂ ಒದಗಿಸಿಲ್ಲ. ಸರ್ವಿಸ್ ರಸ್ತೆ ನಿರ್ವಿುಸಿಲ್ಲ. ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು, ತೇಪೆ ಹಾಕಲಾಗಿದೆ. ಟೋಲ್ ಸ್ಥಾಪಿಸುವಂಥ ಯಾವುದೇ ಗುಣಮಟ್ಟ ಈ ರಸ್ತೆಯಲ್ಲೆಲ್ಲೂ ಕಂಡುಬರುತ್ತಿಲ್ಲ. ಹಾಕುವುದೇ ಆಗಿದ್ದಲ್ಲಿ ಕರಗುದರಿ ಗ್ರಾಮದ ಬಳಿ ಟೋಲ್ ಸ್ಥಾಪಿಸಬೇಕಿತ್ತು. ಆಗ ತಡಸ್ ಮಾರ್ಗದಿಂದ ಸಂಚರಿಸುವವರಿಗೆ ಟೋಲ್ ವಿಧಿಸಬಹುದಾಗಿತ್ತು. ಈಗ ಬಂಕಾಪುರ ಮತ್ತು ಗದಗ ರಸ್ತೆಗೇಕೆ ಹಾಕಲಾಗುತ್ತಿದೆ ಎಂಬ ಪ್ರಶ್ನೆ ಎದುರಾಗಿದೆ. ಬಂಕಾಪುರ, ಗದಗ ಮಾರ್ಗದವರೂ ಹಾನಗಲ್ಲ ಮಾರ್ಗದ ಮುಖಾಂತರ ಶಿವಮೊಗ್ಗಕ್ಕೆ ತೆರಳುತ್ತಾರೆ ಅದಕ್ಕಾಗಿ ಮಲ್ಲಿಗ್ಗಾರ ಸಮೀಪ ಸ್ಥಾಪಿಸಲಾಗುತ್ತಿದೆ. ಕರಗುದರಿ ಗ್ರಾಮದ ಬಳಿ ಸ್ಥಾಪಿಸಿದರೆ ಅಷ್ಟೇನೂ ಕಲೆಕ್ಷನ್ ಆಗುವುದಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದಾರೆನ್ನಲಾಗಿದೆ
ತಡಸ್-ಶಿವಮೊಗ್ಗ 170 ಕಿಮಿ ಅಂತರವಿದ್ದು, ಈ ರಸ್ತೆಯಲ್ಲಿ ಒಟ್ಟು ಮೂರು ಟೋಲ್ ಸ್ಥಾಪನೆಯಾಗಲಿವೆ ಎನ್ನಲಾಗಿದೆ. ಈಗಾಗಲೇ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಕುತ್ರಹಳ್ಳಿ ಹಾಗೂ ಕಲ್ಲಾಪುರ ಗ್ರಾಮಗಳಲ್ಲಿ ಟೋಲ್ ಸಂಗ್ರಹ ಆರಂಭವಾಗಿದೆ. ಈಗ ಹಾನಗಲ್ಲ ಸಮೀಪ 3ನೇ ಟೋಲ್ ಸ್ಥಾಪನೆಗೆ ಕಾಮಗಾರಿ ಆರಂಭಿಸಲಾಗಿದೆ. ಸದ್ಯದ ಮಾಹಿತಿಯಂತೆ ಕಾರ್ಗಳಿಗೆ 30 ರೂ., ಬಸ್ಗಳಿಗೆ 100 ರೂ, ಸರಕು ಸಾಗಣೆ ವಾಹನಗಳಿಗೆ 50 ರೂ. ಟೋಲ್ ಸಂಗ್ರಹಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಮಲ್ಲಿಗ್ಗಾರ ಸಮೀಪ ಟೋಲ್ ಸ್ಥಾಪನೆಯ ಕಾಮಗಾರಿ ಆರಂಭಗೊಳ್ಳುತ್ತಿದ್ದಂತೆ ಸಾರ್ವಜನಿಕರು ತೀವೃ ವಿರೋಧಿಸಿ, ರಸ್ತೆಯಲ್ಲಿ ನಿಲ್ಲಿಸಿದ್ದ ಸಿಮೆಂಟ್ ಕಂರ್ಬಗಳನ್ನು ಕಿತ್ತೆಸೆದು ಪ್ರತಿಭಟಿಸಿದ್ದಾರೆ. ಪ್ರಮುಖರಾದ ಪುಟ್ಟಪ್ಪ ನರೇಗಲ್, ಭೋಜರಾಜ ಕರೂದಿ, ಮಂಜು ನೀಲಗುಂದ, ಕುಮಾರ ಹತ್ತಿಕಾಳ, ಯಲ್ಲಪ್ಪ ಶೇರಖಾನಿ, ಅನಿಲ್ ವೆರ್ಣೆಕರ್, ನಾರಾಯಣ ಅಥಣಿ ಇತರರು ಕಾಮಗಾರಿ ಸ್ಥಗಿತಗೊಳಿಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದ್ದಾರೆ.
ಟೋಲ್ ಸ್ಥಾಪಿಸುವ ಮೊದಲು ತಾಲೂಕಿನಲ್ಲಿ ಹಾಯ್ದು ಹೋಗಿರುವ ತಡಸ್-ಶಿವಮೊಗ್ಗ ರಸ್ತೆಯನ್ನು ಇನ್ನಷ್ಟು ದುರಸ್ತಿಗೊಳಿಸಬೇಕಿದೆ. ಬೊಮ್ಮನಹಳ್ಳಿ ಸಮೀಪದ ಲಕ್ಕಿಕೊಪ್ಪದಿಂದ ಗೊಂದಿ ಗ್ರಾಮದವರೆಗೆ ಮರುಡಾಂಬರೀಕರಣ ಗೊಳಿಸಬೇಕು. ಟೋಲ್ ಸ್ಥಾಪನೆಯಾಗಬೇಕಾದ ಸ್ಥಳದ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಲಾಗುತ್ತದೆ.