ಸಚಿವ ಸಂಪುಟದಲ್ಲಿ ಕೇಳಿದ್ದರ ಅನುಮೋದನೆ ಇಲ್ಲ, ವ್ಯಾಪಕ ಬೇಸರ

IMG-20250702-WA0039.jpg
Published on

ಚಿಕ್ಕಬಳ್ಳಾಪುರ: ಜಿಲ್ಲೆಯ ಹಳೇ ಪ್ರಸ್ತಾಪಿತ ಯೋಜನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್‌ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ದೊರಕಿಸಿಕೊಡುವಲ್ಲಿ ಸಫಲರಾಗಿದ್ದು ಇದೇ ವೇಳೆ ಎಚ್‌.ಎನ್‌.ವ್ಯಾಲಿ ಯೋಜನೆಯ ಮೂರನೇ ಹಂತದ ಶುದ್ದೀಕರಣದ ಅಗತ್ಯತೆಯ ಬಗ್ಗೆ ಮನವರಿಕೆ ಕೊಡುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ವಿಫಲರಾಗಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಶಾಶ್ವತ ನೀರಾವರಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಜತೆಗೆ ಪರಿಸರವಾದಿಗಳು, ಸಾಹಿತಿಗಳು ಸೇರಿದಂತೆ ಎಚ್‌.ಎನ್.ವ್ಯಾಲಿ ಯೋಜನೆಯಡಿ ಅರೆಬರೆ ಸಂಸ್ಕರಿತ ನೀರನ್ನು ಕೆರೆಗಳಿಗೆ ಹರಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಆದರೆ, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಅಪಸ್ವರ ತೆಗೆದ್ದಿದ್ದಾರೆ. ರಾಜಕೀಯದಿಂದ ಕೆಲವರು ಮೂರನೇ ಹಂತದ ಶುದ್ದೀಕರಣದ ಹೆಸರಿನಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವಸಂಸ್ಥೆಯ ತಂಡವೇ ವ್ಯಾಲಿ ನೀರಿನ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಸಮರ್ಥಿಸಿಕೊಂಡರು.

*ವ್ಯಾಲಿ ನೀರು ಬಳಕೆಗೆ ಅಲ್ಲ
ಎಚ್‌.ಎನ್‌ ಹಾಗೂ ಕೆ.ಸಿ.ವ್ಯಾಲಿ ಯೋಜನೆಯಡಿ ಪೂರೈಕೆ ನೀರನ್ನು ಕುಡಿಯಲು, ಕೃಷಿಗೆ ಬಳಬಾರದು. ಕೇವಲ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಜಿಲ್ಲೆಯ ಕೆರೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಈಗಾಗಲೇ ವ್ಯಾಲಿ ಯೋಜನೆಯಡಿ ವ್ಯಾಪ್ತಿಯ ಕೆರೆಗಳ ಭಾಗಗಳಲ್ಲಿ ಕೊರೆದಿರುವ ಕೊಳವೆ ಬಾವಿಗಳಿಂದ ನೀರನ್ನು ಜನರಿಗೆ ಕುಡಿಯುವ ಸಲುವಾಗಿ ಪೂರೈಸದಿರಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಡಾ ಎಂ.ಸಿ.ಸುಧಾಕರ್‌ ಸ್ಪಷ್ಟಪಡಿಸಿದರು. ಇದರ ನಡುವೆ ಚಿಕ್ಕಬಳ್ಳಾಪುರದ ಕಂದವಾರ ಕೆರೆ, ಅಮಾನಿ ಗೋಪಾಲಕೃಷ್ಣ ಕೆರೆ, ಪೆರೇಸಂದ್ರ ಭಾಗದಲ್ಲಿನ ಕೆರೆಗಳಲ್ಲಿ ಎಚ್‌.ಎನ್‌.ವ್ಯಾಲಿ ನೀರು ಮಿಶ್ರಣವಾಗಿದ್ದರೂ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡುತ್ತಿರುವುದು ನಿಂತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

*ಜನಪ್ರತಿನಿಧಿಗಳಲ್ಲಿ ಒಮ್ಮತ ಗೊಂದಲ
ಆಹಾರ, ನಾಗರಿಕ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ಕೆ.ಎಚ್‌.ಮುನಿಯಪ್ಪ ಎಚ್.ಎನ್.ವ್ಯಾಲಿ ಹಾಗೂ ಕೆ.ಸಿ.ವ್ಯಾಲಿ ಯೋಜನೆಯ ಸಂಸ್ಕರಿತ ನೀರನ್ನು ಮೂರು ಹಂತದಲ್ಲಿ ಶುದ್ದೀಕರಣಗೊಳಿಸಬೇಕು. ಈ ಭಾಗದ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು. ವೈಜ್ಞಾನಿಕ ಸರ್ವೇ ಮೂಲಕ ತೀರ್ಮಾನ ಕೈಗೊಳ್ಳಲು ಸಲಹೆ ನೀಡಿದರು. ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವರು ಅಗತ್ಯವಿಲ್ಲ ಎಂಬ ಧಾಟಿಯಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಇದಕ್ಕೆ ಸ್ಥಳದಲ್ಲಿ ಅಪಹಾಸ್ಯದ ಪ್ರತಿಕ್ರಿಯೆ ವ್ಯಕ್ತವಾಯಿತು. ಇದಕ್ಕೆ ಕೋಪಗೊಂಡು ಹೆಚ್ಚಿನ ಸಮರ್ಥನೆಗೆ ಇಳಿದರು. ಇನ್ನೂ ಮೂರನೇ ಹಂತದ ಶುದ್ದೀಕರಣವಾಗಲೇಬೇಕು. ಇದರ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದ್ದ ಶಾಸಕ ಪ್ರದೀಪ್‌ ಈಶ್ವರ್‌ ಅಯ್ಯರ್‌ ಸುಮ್ಮನೆ ಕುಳಿತುಕೊಂಡು ಕುಳಿತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net