ಆರು ತಿಂಗಳಲ್ಲಿ ಚತುಷ್ಪಥ ರಸ್ತೆ ಸಿದ್ಧ

mkg
Published on

ಟಿ. ಶ್ರೀನಿವಾಸ್ ಹೊನ್ನಾಳಿ
ಎಲ್ಲವೂ ಅಂದುಕೊಂಡಂತೆ ನಡೆದರೆ ಗದಗ್‌ನಿಂದ ಹೊನ್ನಾಳಿವರೆಗಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಅಗಲೀಕರಣ ಕಾಮಗಾರಿ ಇನ್ನಾರೂ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಜತೆಗೆ, ರಸ್ತೆಗೆ ಜಾಗ ನೀಡಿದವರಿಗೆ ಇನ್ನೊಂದು ತಿಂಗಳಲ್ಲಿ ಪರಿಹಾರವೂ ಸಿಗಲಿದೆ.

2020ರಲ್ಲಿ ಗದಗ್‌ನಿಂದ ಹೊನ್ನಾಳಿವರೆಗಿನ ಚತುಷ್ಪಥ ರಸ್ತೆ ಅಗಲೀಕರಣಕ್ಕೆ ಆಗಿನ ಸರ್ಕಾರ ಹಸಿರು ನಿಶಾನೆ ತೋರಿ ಹಣ ಬಿಡುಗಡೆ ಮಾಡಿತ್ತು. ರಸ್ತೆ ಜಾಗಕ್ಕಾಗಿ ಹಲವಾರು ಬಾರಿ ಜಿಲ್ಲಾಧಿಕಾರಿ ಹಾಗೂ ರೈತರ ನಡುವೆ ಸಭೆ ನಡೆದಿದ್ದವು. ಈಗ ರಸ್ತೆಗೆ ಬೇಕಾದ ಜಾಗ ರೈತರಿಂದ ವಶಪಡಿಸಿಕೊಂಡು ಹೊನ್ನಾಳಿ ಗಡಿಯಿಂದ ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭಿಸಿದ್ದಾರೆ.

ಇನ್ನೂ ಪಟ್ಟಣದಲ್ಲಿ 240 ಸ್ವತ್ತಿನ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ ಜಾಗ ಕಳೆದುಕೊಳ್ಳುವ ಸ್ವತ್ತಿನ ಮಾಲೀಕರಿಗೆ ಹಣ ಸಂದಾಯ ಮಾಡಲು ವಿವರವನ್ನು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿ ಸಹ ರಸ್ತೆ ಅಗಲೀಕರಣ ಅಭಿವೃದ್ಧಿ ಶೀಘ್ರ ಆರಂಭಿಸುವುದಾಗಿ ಕೆಶಿಪ್ ಅಧಿಕಾರಿಗಳು ತಿಳಿಸಿದ್ದಾರೆ.

ಗದಗದಿಂದ ಹೊನ್ನಾಳಿವರೆಗಿನ ರಾಜ್ಯಹೆದ್ದಾರಿ ಕಾಮಗಾರಿ 2020ರಲ್ಲಿಯೇ ಆರಂಭವಾಗಿದ್ದು, ಶೇ. 100ರಷ್ಟು ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಈ ನಡುವೆ ರಸ್ತೆ ಅಗಲೀಕರಣ ಕಾರ್ಯ ವೇಗ ಪಡೆದಿದೆ. ಪಟ್ಟಣದ ಗ್ಯಾಂಟ್ರಿ ಬೋರ್ಡ್‌ನಿಂದ (ರಸ್ತೆಯಂಚಿನ ರಸ್ತೆ ಸೂಚಕ ನಾಮಫಲಕ) ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಈಗಾಗಲೇ ಪಟ್ಟಣದಲ್ಲಿ ರಸ್ತೆ ಅಗಲೀಕರಣಕ್ಕೆ ಗುರುತು ಮಾಡಿರುವ ಜಾಗದ ಮಾಲೀಕರು ತಮ್ಮ ಸ್ವತ್ತಿನ ವಿವರಗಳನ್ನು ಉಪವಿಭಾಗಾಧಿಕಾರಿ ಕಚೇರಿಗೆ ತಲುಪಿಸುತ್ತಿದ್ದಾರೆ. ಎಲ್ಲ್ಲ ಪ್ರಕ್ರಿಯೆ ಮುಗಿದರೆ ಇನ್ನಾರೂ ತಿಂಗಳಲ್ಲಿ ಚತುಷ್ಪಥ ರಸ್ತೆ ಲೋಕಾರ್ಪಣೆಗೊಳ್ಳಲಿದೆ.

ಹೊನ್ನಾಳಿ ತಾಲೂಕು ಗಡಿ ಆರಂಭದಿಂದ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ 8.3 ಕಿ. ಮೀಟರ್‌ವರೆಗೆ ಮತ್ತು ಮುಂದುವರೆದು 1.56 ಕಿ.ಮೀ. ವರೆಗೂ ಸೇರಿ ಒಟ್ಟು 9.86 ಕಿ.ಮೀ. ವರೆಗೆ ಅಭಿವೃದ್ಧಿಪಡಿಸಲಾಗುತ್ತಿದೆ.

ಈ ಚತುಷ್ಪಥ ರಸ್ತೆ ಅಗಲೀಕರಣಕ್ಕೆ ಅವಶ್ಯಕವಾಗಿ ಬೇಕಾದ ಹೊನ್ನಾಳಿ ಪುರಸಭೆಯ 240 ಸ್ವತ್ತುಗಳು ಹಾನಿಗೊಳಗಾಗುವುದಾಗಿ ಗುರುತಿಸಿದ್ದು, ರಾಜ್ಯ ಹೆದ್ದಾರಿ ಕಾಯ್ದೆ 1964ರ ಅಡಿ ಸರ್ಕಾರದ ಕಲಂ 15 ಮತ್ತು ಕಲಂ 19ರ ಅಧಿಸೂಚನೆ ಘೋಷಣೆ ಪ್ರಕಟಿಸಲಾಗಿದೆ.

ಭೂ ಸ್ವಾಧೀನ ಕಾಯ್ದೆ 2013 ನಡವಳಿಯಂತೆ ಪಾರದರ್ಶಕತೆಯಂತೆ ಅವಾರ್ಡ್ ರಚಿಸಿದ್ದು, ಅವಾರ್ಡ್ ಅನುಮೋದನೆಗೊಂಡಿದ್ದು, ಈಗಾಗಲೇ ಸಂಬಂಧಿಸಿದ ಸ್ವತ್ತಿನ ಮಾಲೀಕರಿಗೆ ಅವಾರ್ಡ್‌ನ ಪ್ರತಿ ಜಾರಿ ಮಾಡಲಾಗಿದೆ.

ಪಟ್ಟಣದಲ್ಲಿ ಚತುಷ್ಪಥ ರಸ್ತೆ ಅಳತೆ ಈಗ ಹಾಲಿ ಇರುವ ರಸ್ತೆಯ ಮಧ್ಯಭಾಗದಿಂದ ಎಡಕ್ಕೆ 11.50 ಮೀಟರ್ ಮತ್ತು ಬಲಕ್ಕೆ 11.50 ಮೀಟರ್‌ವರೆಗೆ ಅಂದರೆ 38 ಅಡಿ ಎಡಕ್ಕೆ ಮತ್ತು 38 ಅಡಿ ಬಲಕ್ಕೆ ಒಟ್ಟು ರಸ್ತೆ 76 ಅಡಿಯಷ್ಟು ಅಗಲೀಕರಣ ಮಾಡಲಾಗುವುದು ಎನ್ನುತ್ತಾರೆ ಕೆಶಿಪ್‌ನ ಎಇಇ ಮಂಜುನಾಥ್.

ಸ್ವತ್ತಿನ ಮಾಲೀಕರು ದಾಖಲೆಗಳನ್ನು ಉಪ ವಿಭಾಗ ಕಚೇರಿಗೆ ಸಲ್ಲಿಸಿದಲ್ಲಿ ಪರಿಹಾರವನ್ನು ಮಾಲೀಕರಿಗೆ ಮಂಜೂರು ಮಾಡಲಾಗುವುದು. ಒಂದು ವೇಳೆ ನಿಗದಿತ ಕಾಲಮಿತಿಯಲ್ಲಿ ಮಾಲೀಕರು ದಾಖಲೆ ಸಲ್ಲಿಸದಿದ್ದಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಹಣ ಠೇವಣಿಕರಿಸಲಾಗುವುದು ಎಂದು ಹೊನ್ನಾಳಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ತಿಳಿಸಿದ್ದಾರೆ.
ಸ್ವತ್ತಿನ ಮಾಲೀಕರ ಅಸಮಾಧಾನ
ಹೊನ್ನಾಳಿ ಪಟ್ಟಣದ ರಸ್ತೆ ಇಕ್ಕೆಲಗಳಲ್ಲಿರುವ ಕಟ್ಟಡದ ಮಾಲೀಕರಿಗೆ ಪರಿಹಾರದ ಅನುದಾನ ಕೊಡುವ ವಿಚಾರದಲ್ಲಿ ಅವೈಜ್ಞಾನಿಕವಾಗಿ ಪರಿಹಾರ ನೀಡಲಾಗುತ್ತಿದೆ. ಇದರಿಂದ ಸ್ವತ್ತಿನ ಮಾಲೀಕರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಉಪವಿಭಾಗಾಧಿಕಾರಿ ಮಧ್ಯ ಪ್ರವೇಶ ಮಾಡಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಸ್ವತ್ತಿನ ಮಾಲೀಕರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net