

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಶುಕ್ರವಾರ (ಸೆ.29) ಕರೆ ನೀಡಿರುವ ರಾಜ್ಯ ಬಂದ್‌ಗೆ ನಗರದಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಹೋಟೆಲ್ ಮಾಲೀಕರ ಸಂಘ, ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಸ್ಥೆ, ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ, ಕಾವೇರಿ ಕ್ರಿಯಾ ಸಮಿತಿ, ಮೈಸೂರು ಟಾಂಗಾವಾಲಗಳ ಸಂಘ, ಹಿಂದುಸ್ತಾನ ಜನತಾ ಪಾರ್ಟಿ, ಜಯಕರ್ನಾಟಕ, ಕರ್ನಾಟಕ ರಾಜ್ಯ ರೈತ ಸಂಘ, ಮೈಸೂರು ಆಟೋ ರಿಕ್ಷಾ ಮಾಲೀಕರು ಮತ್ತು ಚಾಲಕರ ಸಂಘ, ಖಾಸಗಿ ಬಸ್ ಮಾಲೀಕ ಮತ್ತು ಚಾಲಕರ ಸಂಘ, ಕರ್ನಾಟಕ ತಮಿಳು ಸಂಘಟನೆಗಳ ಒಕ್ಕೂಟ, ವಾಣಿಯರ್ ಸಂಘಂ (ತಮಿಳು ಗಾಣಿಗರು) ಸಂಘಟನೆ ಸೇರಿದಂತೆ ಕನ್ನಡ ಪರ ಸಂಘಟನೆ, ರೈತ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು ಬೆಂಬಲ ಸೂಚಿಸಿವೆ. ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮೆಡಿಕಲ್ ಸ್ಟೋರ್, ಆಸ್ಪತ್ರೆ ಸೇರಿದಂತೆ ಅಗತ್ಯ ವಸ್ತು ಸೇವೆಗಳನ್ನು ಹೊರತುಪಡಿಸಿ ಹೋಟೆಲ್, ಆಟೋ, ಟ್ಯಾಕ್ಸಿ ಸೇರಿದಂತೆ ಇತರ ಸೇವೆ ಇರುವುದಿಲ್ಲ.