ವಿಜಯಪುರವನ್ನೇ ನೋಡಲ್ ಜಿಲ್ಲೆಯಾಗಿ ಆಯ್ದುಕೊಂಡಿದ್ದೇಕೆ? ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಯೋಜನೆಗಳೇನು ಗೊತ್ತಾ?

SUDHAMURTI PRESS MEET
ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಜಿಪಂ ಸಿಇಒ ರಿಷಿ ಆನಂದ ಇದ್ದಾರೆ.
Published on

ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆಯನ್ನು ನೋಡಲ್ ಜಿಲ್ಲೆಯನ್ನಾಗಿ ಆಯ್ದುಕೊಂಡಿರುವ ರಾಜ್ಯ ಸಭೆ ಸದಸ್ಯೆ ಸುಧಾಮೂರ್ತಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದಾಗಿ ತಿಳಿಸಿದ್ದಾರೆ.

ಬಾಲ್ಯದಿಂದಲೂ ಈ ಭಾಗದ ಜೊತೆ ನಂಟಿದೆ. ಇಲ್ಲಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಲಿತಿದ್ದೇನೆ. ಕೃಷ್ಣಾ ತೀರದ ಜನರ ಒಡನಾಟ ಮತ್ತು ಇಲ್ಲಿ ಸಂಬಂಧಿಕರನ್ನು ಹೊಂದಿದ್ದಾರೆ. ಅಂತೆಯೇ ಐತಿಹಾಸಿಕ ವಿಜಯಪುರ ಜಿಲ್ಲೆಯನ್ನು ನೋಡಲ್ ಜಿಲ್ಲೆಯನ್ನಾಗಿ ಆಯ್ದುಕೊಂಡಿದ್ದು, ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ಯೋಜನೆ ಮತ್ತು ಯೋಚನೆ ಹೊಂದಿದ್ದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ವಿಜಯಪುರಕ್ಕೆ ದೆಹಲಿ, ಮುಂಬೈ ಮತ್ತಿತರ ಭಾಗಗಳಿಂದ ಅನೇಕ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಪ್ರವಾಸೋದ್ಯಮ ಕ್ಷೇತ್ರ ಬಲಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿರುವ ಸುಧಾಮೂರ್ತಿ ಅವರು ಈ ಭಾಗದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು.

ಕಾಯಕಲ್ಪ ಪ್ರಶಸ್ತಿ ಕಂಡ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಧರ್ಮ ಶಾಲೆ ಸ್ಥಾಪಿಸುವ ಅವಶ್ಯಕತೆ ಇದೆ. ಆ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ. ಸಿಂದಗಿ, ಬಸವನಬಾಗೇವಾಡಿ ಹಾಗೂ ತಾಳಿಕೋಟೆಯಲ್ಲಿ ಸುಸಜ್ಜಿತ ಗ್ರಂಥಾಲಯ ಸ್ಥಾಪಿಸಲು ತೀರ್ಮಾನಿಸಲಾಗಿದೆ. ವಿಜಯಪುರ ಜಿಲ್ಲೆ ಜನ ಕೌಶಲ ಹೊಂದಿದವರು. ಇಲ್ಲೊಂದು ಜಿಮ್ ಅವಶ್ಯಕತೆ ಇದೆ.

ಇಂಥ ಹಲವು ಯೋಜನೆ- ಯೋಚನೆ ಹಮ್ಮಿಕೊಳ್ಳಲಾಗಿದೆ. ಬರುವ ದಿನಗಳಲ್ಲಿ ಪಟ್ಟಿ ಮಾಡಿ ಆದ್ಯತಾನುಸಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕುಮಟಗಿಯ ಬೇಸಿಗೆ ಅರಮನೆಯ ಅಭಿವೃದ್ಧಿಗಾಗಿ 2 ಕೋಟಿ ರೂ.ಅನುದಾನ ನೀಡುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಜಿಪಂ ಸಿಇಒ ರಿಷಿ ಆನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net