

ಕುಮಟಾ: ಇಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಡಿ ಅರಣ್ಯ ಹಕ್ಕು ಕುರಿತು ಸಭೆ ಏರ್ಪಡಿಸಲಾಗಿತ್ತು.
ಹೋರಾಟಗಾರರ ವೇದಿಕೆ ಸಂಚಾಲಕಿ ಸಂಜಿತಾ ರವೀಂದ್ರ, ಅರಣ್ಯ ಇಲಾಖೆಯವರು ಅತಿಕ್ರಮಣದಾರ ಕುಟುಂಬದ ಗಂಡಸರು ಮನೆಯಲ್ಲಿ ಇಲ್ಲದಿದ್ದಾಗ ಬೇಲಿ ಕೀಳುವುದು, ಗಿಡ ಕಿತ್ತುವ ಕಾರ್ಯ ಮಾಡುತ್ತಾರೆ. ನೋಟಿಸ್ ಕೊಡುವುದಿಲ್ಲ, ಸಮಯಾವಕಾಶ ನೀಡುವುದಿಲ್ಲ. ಹೆಂಗಸರಷ್ಟೇ ಇದ್ದಾಗ ಅರಣ್ಯ ಸಿಬ್ಬಂದಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸುವುದು ಯಾಕೆ ಎಂದು ಪ್ರಶ್ನಿಸಿದರು.
ವೇದಿಕೆಯ ಅಧ್ಯಕ್ಷ ಎ. ರವೀಂದ್ರ ನಾಯ್ಕ, ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ, ಮರುಪರಿಶೀಲನಾ ಹಂತದಲ್ಲಿ ಇರುವ, ಜಿಪಿಎಸ್ ಮೇಲ್ಮನವಿ ಉರ್ಜಿತ ಇರುವ ಸಂದರ್ಭದಲ್ಲಿ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಅರಣ್ಯ ಸಿಬ್ಬಂದಿಯಿಂದ ಆತಂಕ ಉಂಟಾಗುತ್ತಿದೆ ಎಂದು ವಿವರಿಸಿದರು.
ಈ ಬಗ್ಗೆ ಅರಣ್ಯ ಅಧಿಕಾರಿಗಳು ಲಿಖಿತ ಉತ್ತರ ನೀಡಬೇಕು ಎಂದು ಸಭೆಯಲ್ಲಿ ಅರಣ್ಯವಾಸಿಗಳು ಪಟ್ಟು ಹಿಡಿದರು.
ಹೊನ್ನಾವರ ಡಿಎಫ್ಒ ಯೋಗೇಶ ಸಿ.ಕೆ. ಪ್ರತಿಕ್ರಿಯಿಸಿ, ಒಂದು ವಾರದಲ್ಲಿ ಲಿಖಿತ ಉತ್ತರ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಎಸಿಎಫ್ ಯೋಗೀಶ, ಆರ್ಎಫ್ಒ ಪ್ರವೀಣ ನಾಯಕ, ವಿನೋದ ನಾಯ್ಕ, ಪ್ರೀತಿ ನಾಯ್ಕ, ರಾಜೀವ ನಾಯಕ, ಗಜಾನನ ಹೆಗಡೆ, ಯಾಕೂಬ ಸಾಬ, ಮಹೇಂದ್ರ ನಾಯ್ಕ ಕತಗಾಲ, ವೀರಭದ್ರ ನಾಯ್ಕ, ರಾಘವೇಂದ್ರ ಕಂವಚೂರು, ಶುಕೂರ್ ಸಾಬ, ಸೀತಾರಾಮ ನಾಯ್ಕ, ಅಬ್ದುಲ್ ಶುಕೂರ್, ಸದಾನಂದ ಹರಿಕಾಂತ, ಜಗದೀಶ ನಾಯ್ಕ, ಅರವಿಂದ ನಾಯ್ಕ ಇತರರು ಇದ್ದರು.