32 ವರ್ಷದ ಬಳಿಕ ಕರಸೇವಕನ ಬಂಧನವೇಕೆ? ಈಶ್ವರಪ್ಪ ಪ್ರಶ್ನೆ

bjp protest
ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಕೆ.ಎಸ್.ಈಶ್ವರಪ್ಪ, ಎಸ್.ಎನ್.ಚನ್ನಬಸಪ್ಪ, ಹರತಾಳು ಹಾಲಪ್ಪ, ಎಂ.ಬಿ.ಭಾನುಪ್ರಕಾಶ್, ಟಿ.ಡಿ.ಮೇಘರಾಜ್, ಬಳ್ಳೇಕೆರೆ ಸಂತೋಷ್, ಎಸ್.ದತ್ತಾತ್ರಿ, ಸುರೇಖಾ ಮುರಳೀಧರ್, ಪದ್ಮಿನಿ, ಸುನೀತಾ ಅಣ್ಣಪ್ಪ ಮುಂತಾದವರು ಭಾಗವಹಿಸಿದ್ದರು.
Published on

ಶಿವಮೊಗ್ಗ: ಅಯೋಧ್ಯೆ ಕರಸೇವೆಯಲ್ಲಿ ಭಾಗವಹಿಸಿದ್ದ ಶ್ರೀಕಾಂತ್ ಪೂಜಾರಿ ಎಂಬುವವರನ್ನು ಬಂಧಿಸಲಾಗಿದೆ. 32 ವರ್ಷದ ಬಳಿಕ ಇವರನ್ನು ಬಂಧಿಸಿರುವ ಉದ್ದೇಶವಾದರೂ ಏನು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ಎಂಬಾತನ ಬಂಧನ ವಿರೋಧಿಸಿ ಜಿಲ್ಲಾ ಬಿಜೆಪಿಯಿಂದ ಗುರುವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಧರ್ಮ ಪ್ರೇರಿತವಾಗಿ ಕೆಲಸ ಮಾಡುತ್ತಿರುವ ಪೊಲೀಸರನ್ನು ಅಮಾನತು ಮಾಡಬೇಕು. ಬಂಧಿಸಿರುವ ಕರಸೇವಕನನ್ನು ಖುಲಾಸೆ ಮಾಡಬೇಕೆಂದು ಆಗ್ರಹಿಸಿದರು.
ಶ್ರೀಕಾಂತ್ ಪೂಜಾರಿಗೆ ಸಂಬಂಧಿಸಿದ ಎಫ್‌ಐಆರ್‌ನಲ್ಲಿ ಏನಿದೆ ಎಂಬುದೇ ಗೊತ್ತಿಲ್ಲ. ಇದು ದ್ವೇಷ ರಾಜಕಾರಣದ ಪರಿಣಾಮವಷ್ಟೇ. ಹಿಂದಿನ ಪ್ರಕರಣಗಳನ್ನು ಚುಕ್ತಾ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಈಗ ಕರಸೇವಕರನ್ನೇ ಗುರಿಯಾಗಿಸಿಕೊಂಡು ಹಿಂದಿನ ಪ್ರಕರಣಗಳನ್ನು ಕೆದಕುತ್ತಿದ್ದಾರೆ ಎಂದು ದೂರಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಆಗುತ್ತಿರುವುದನ್ನು ಸಹಿಸಲು ರಾಜ್ಯ ಕಾಂಗ್ರೆಸ್ ನಾಯಕರಿಗೆ ಆಗುತ್ತಿಲ್ಲ. ಹೀಗಾಗಿ ಕರಸೇವಕರನ್ನು ಬಂಧಿಸಿ ಜೈಲಿಗಟ್ಟಲು ನಿರ್ಧರಿಸಿದಂತಿದೆ. ಆ ಮೂಲಕ ಅಯೋಧ್ಯೆಗೆ ತೆರಳದಂತೆ ತಡೆಯೊಡ್ಡುತ್ತಿದೆ ಎಂದು ಹರಿಹಾಯ್ದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಮಾಜಿ ಎಂಎಲ್‌ಸಿ ಎಂ.ಬಿ.ಭಾನುಪ್ರಕಾಶ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಜಗದೀಶ್, ನಗರ ಪ್ರಧಾನ ಕಾರ್ಯದರ್ಶಿ ಬಳ್ಳೇಕೆರೆ ಸಂತೋಷ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಎಂ.ಬಿ.ಹರಿಕೃಷ್ಣ, ಪಾಲಿಕೆ ಮಾಜಿ ಸದಸ್ಯರಾದ ಸುನೀತಾ ಅಣ್ಣಪ್ಪ, ಇ.ವಿಶ್ವಾಸ್ ಇತರರಿದ್ದರು.
ಪಟ್ಟಿ ಸಿದ್ಧವಾದಂತಿದೆ: ಕರಸೇವಕರನ್ನು ಬಂಧಿಸಲು ಸರ್ಕಾರ ಪಟ್ಟಿ ಸಿದ್ಧ ಮಾಡಿಕೊಂಡಂತಿದೆ. ಆದರೆ ಸರ್ಕಾರದ ಈ ಕ್ರಮಕ್ಕೆ ಯಾರೂ ಭಯಪಡುವುದಿಲ್ಲ. ರಾಮನ ಸೇವೆಗಾಗಿ ಬಂಧನಕ್ಕೆ ಹಿಂದೇಟು ಹಾಕುವುದಿಲ್ಲ. ಕಾಂಗ್ರೆಸ್ಸಿಗರು ಬಾಬರ್ ಸಂಸ್ಕೃತಿಯವರು. ಅವರ ಈ ಸಂಸ್ಕೃತಿಯನ್ನು ನಾಶ ಮಾಡಲು ನಾವು ಸಜ್ಜಾಗಿದ್ದೇವೆ. ತಾಕತ್ತಿದ್ದರೆ ನಮ್ಮನ್ನು ತಡೆಯಲಿ. ಅಂದು ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸದಂತೆ ತಡೆದವರು ಕಾಂಗ್ರೆಸ್ ನಾಯಕರು. ಅಯೋಧ್ಯೆ ಈ ದೇಶದ ಅಸ್ಮಿತೆ. ರಾಮ ಭಕ್ತರು ಅಯೋಧ್ಯೆಗೆ ತೆರಳುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net