

ಬೆಂಗಳೂರು: ಈಗ ಕರೊನಾ ಹಾವಳಿಯಿಂದಾಗಿ ಎಲ್ಲಿ ನೋಡಿದರೂ ಪಾಸಿಟಿವ್ನದ್ದೇ ಮಾತು. ಈಗ ಅಂತೂ 'ಬಿ ಪಾಸಿಟಿವ್' ಎಂದು ಒಳ್ಳೆಯ ಉದ್ದೇಶದಿಂದ ಯಾರಿಗಾದರೂ ಹೇಳಿದರೂ ಒಮ್ಮೆ ತಬ್ಬಿಬ್ಬಾಗುವಂಥ ಪರಿಸ್ಥಿತಿ ಇದೆ. ಏಕೆಂದರೆ ಪಾಸಿಟಿವ್ ಎಂದಾಕ್ಷಣ ಬಹಳಷ್ಟು ಜನರಿಗೆ ಮೊದಲಿಗೆ ನೆನಪಾಗುವಂಥದ್ದೇ ಕರೊನಾ ಸೋಂಕು.
ಬಹುಶಃ ಅದಕ್ಕೇ ಇರಬೇಕು.. ನಟ ರಮೇಶ್ ಅರವಿಂದ್ ಈಗ ನೆಗೆಟಿವ್ ಬಗ್ಗೆ, ಅರ್ಥಾತ್ ನೆಗೆಟಿವಿಟಿ ಕುರಿತು ಮಾತನಾಡಿದ್ದಾರೆ. ಇತ್ತೀಚಿನ ಸಿನಿಮಾಗಳಲ್ಲಿ ಪೊಲೀಸ್ ಪಾತ್ರಗಳಲ್ಲೇ ಕಾಣಿಸಿಕೊಂಡಿರುವ ಅವರು ರಿವಾಲ್ವರ್ನಿಂದ ಗುರಿ ಇಟ್ಟು ಈ ಮಾತನ್ನಾಡಿದ್ದಾರೆ.
ಹಾಗಂತ ಅವರು ರಿವಾಲ್ವರ್ ಎತ್ತಿಕೊಂಡಿದ್ದು ಯಾರನ್ನೂ ಹೆದರಿಸಲು ಅಲ್ಲ, ಬದಲಿಗೆ ಹುರಿದುಂಬಿಸಲು. ಅಷ್ಟಕ್ಕೂ ಅವರು ಗುರಿ ಇಟ್ಟು ಮಾತನಾಡಿದ್ದು ಸರ್ಕಸ್ ರಿವಾಲ್ವರ್ನಿಂದ ಹಾಗೂ ಗುರಿ ಇಟ್ಟಿದ್ದು ನೆಗೆಟಿವಿಟಿಯತ್ತ. ಈ ಮೂಲಕ ಅವರು ಎಲ್ಲರೂ ನೆಗೆಟಿವಿಟಿ ಬದಲು ಪಾಸಿಟಿವ್ ಅಪ್ರೋಚ್ ಬೆಳೆಸಿಕೊಳ್ಳಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.
'ನೀವು ಸರ್ಕಸ್ ರಿವಾಲ್ವರ್ಗಳ ಬಗ್ಗೆ ಕೇಳಿದ್ದೀರಾ? ಅದರ ಟ್ರಿಗರ್ ಅದುಮಿದಾಗ ಅದರಲ್ಲಿನ ಗುಂಡು ಹಿಮ್ಮುಖವಾಗಿ ಎಗರಿ ರಿವಾಲ್ವರ್ ಹಿಡಿದ ಜೋಕರ್ನನ್ನು ಹೊಡೆದುರುಳಿಸುತ್ತದೆ. ಅದೇ ರೀತಿ ಈ ನೆಗೆಟಿವಿಟಿ ಕೂಡ.. ನಿಮ್ಮ ನೆಗೆಟಿವಿಟಿ ಬೇರೆಯವರತ್ತ ಗುರಿ ಇರಿಸಿದ್ದಾಗಿದ್ದರೂ ಕೊನೆಗೆ ಸರ್ಕಸ್ನ ಜೋಕರ್ನಂತೆ ಸಫರ್ ಆಗುವವರು ನೀವೇ..' ಎಂಬುದಾಗಿ ಹೇಳುವ ಮೂಲಕ, ಎಲ್ಲರೂ ನೆಗೆಟಿವಿಟಿಯಿಂದ ದೂರ ಇರಬೇಕು ಎಂದು ರಮೇಶ್ ಅರವಿಂದ್ ಕಿವಿಮಾತು ಹೇಳಿದ್ದಾರೆ.