ಏನಿಗದಲೆಗೆ ಬೇಕು ಹೊಸ ತಂಗುದಾಣ

FotoJet
Published on

ಪ್ರಯಾಣಿಕರ ಆಗ್ರಹ ನಿಲ್ದಾಣದಡಿ ನಿಲ್ಲಲು ಆತಂಕ ಅಂಗಡಿ ಮುಂಗಟ್ಟುಗಳಲ್ಲಿ ನಿಂತು ಬಸ್ ಕಾಯುವಿಕೆ

ಚೇಳೂರು: ತಾಲೂಕಿನ ಏನಿಗದಲೆ ಗ್ರಾಮದಲ್ಲಿರುವ ಬಸ್ ತಂಗುದಾಣವು ಶಿಥಿಲಾವಸ್ಥೆ ಹಂತ ತಲುಪಿದ್ದು, ಪ್ರಯಾಣಿಕರು ಕಟ್ಟಡ ಕುಸಿಯುವುದೆಂಬ ಭಯದಿಂದ ಅಂಗಡಿಗಳ ಮುಂಗಟ್ಟುಗಳಲ್ಲಿ ನಿಂತು ಬಸ್‌ಗೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಏನಿಗದಲೆ ಗ್ರಾಮವು ಚೇಳೂರು-ಚಿಂತಾಮಣಿ ಮುಖ್ಯ ರಸ್ತೆಯಲ್ಲಿದ್ದು, ಪ್ರಮುಖ ಗ್ರಾಪಂ ಕೇಂದ್ರವಾಗಿದೆ. ಚಿಂತಾಮಣಿ, ಚೇಳೂರು ತಾಲೂಕು ಕೇಂದ್ರಗಳಿಗೆ ತೆರಳಲು ಈ ಬಸ್ ನಿಲ್ದಾಣದಲ್ಲಿಯೇ ಬಸ್ಸು ಹತ್ತಬೇಕಾಗುತ್ತದೆ.

ಗ್ರಾಮದಿಂದ ಪುಣ್ಯಕ್ಷೇತ್ರ ಬುರುಡಗುಂಟೆ ಗಂಗಮ್ಮ, ವೆಂಕಟರಮಣಸ್ವಾಮಿ ದೇವಾಲಯ, ಆಂಜನೇಯಸ್ವಾಮಿ ವಿಗ್ರಹ, ತಿರುಮಲಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಗಡಿಗವಾರಹಳ್ಳಿ ಮುರಾರ್ಜಿ ವಸತಿ ಶಾಲೆ, ನವೋದಯ ವಸತಿ ಶಾಲೆ ಹಾಗೂ ಸುತ್ತಮುತ್ತಲ ಪ್ರಮುಖ ಸ್ಥಳಗಳಿಗೆ ಹೋಗಲು ಪ್ರಮುಖ ತಾಣವಾಗಿದೆ. ಸುಮಾರು 16 ಗ್ರಾಮಗಳ ಪ್ರಯಾಣಿಕರು ಇಲ್ಲಿಂದಲೇ ಬಸ್ ಹತ್ತಬೇಕು. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಹಳೆಯ ಕಟ್ಟಡ ಕೆಡವಿ ನೂತನ ಕಟ್ಟಡ ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

"ಏನಿಗದಲೆ ಪ್ರಮುಖ ಗ್ರಾಪಂ ಕೇಂದ್ರವಾಗಿದ್ದು, ಇಲ್ಲಿಯ ಬಸ್ ನಿಲ್ದಾಣ ಕಟ್ಟಡ ಹಳೆಯದಾಗಿದೆ. ಇದನ್ನು ಉರುಳಿಸಿ, ಹೊಸ ಕಟ್ಟಡ ನಿರ್ಮಾಣ ಮಾಡಿ ಪ್ರಯಾಣಿಕರಿಗೆ ಅನೂಕೂಲವಾಗುವಂತೆ ಮಾಡಬೇಕಾಗಿದೆ." - ನೀಲೇಗೌಡ ಚಿಲಕಲನೇರ್ಪು ಗ್ರಾಮ "ಏನಿಗದಲೆ ಬಸ್ ನಿಲ್ದಾಣ ಕಟ್ಟಡ ಬಹಳ ವರ್ಷಗಳದ್ದು. ಇಲ್ಲಿ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಜಿಪಂ ಸಿಇಒ ಅವರ ಗಮನಕ್ಕೆ ತರಲಾಗಿದೆ. ಅವಘಡಕ್ಕೆ ಮುನ್ನ ಹೊಸ ತಂಗುದಾಣ ನಿರ್ಮಾಣ ಮಾಡಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ." - ಜಿ.ವಿ.ರಮೇಶ್, ತಾಪಂ ಪ್ರಭಾರ ಇಒ, ಚೇಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net