ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಕೆ ಪ್ರಕರಣ, ಸಬ್ ರಿಜಿಸ್ಟ್ರಾರ್ ಮೇಲೆ ಕ್ರಮ ಏಕಿಲ್ಲ?

APPU PATTANASHETTI
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸುದ್ದಿಗೋಷ್ಠಿ ನಡೆಸಿದರು.
Published on

ವಿಜಯಪುರ: ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದರೂ ಉಪ ನೋಂದಣಾಧಿಕಾರಿ ಮೇಲೆ ಕ್ರಮ ಏಕಿಲ್ಲ? ಇವರ ಬೆನ್ನಿಗೆ ಇರುವ ರಾಜಕಾರಣಿಗಳು ಯಾರು? ಇಂಡಿ ಉಪ ನೋಂದಣಾಧಿಕಾರಿ ಮೇಲೆ ಕ್ರಮವಾದರೂ ವಿಜಯಪುರ ಉಪ ನೋಂದಣಾಧಿಕಾರಿ ಮೇಲೆ ಕ್ರಮ ಕೈಗೊಳ್ಳದಿರಲು ಕಾರಣವೇನು? ಈತ ಯಾರ ಸಂಬಂಧಿ ಗೊತ್ತಿಲ್ಲ, ಆದರೆ, ಈ ಅಧಿಕಾರಿಯನ್ನು ಸಮಗ್ರ ತನಿಖೆಗೆ ಒಳಪಡಿಸಿದಾಗ ಮಾತ್ರ ಹಗರಣಗಳು ಬಯಲಾಗಲಿವೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆಗ್ರಹಿಸಿದರು.

ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸುವ ಪ್ರಕರಣ ತಡೆಗೆ ಮತ್ತು ಸಮಗ್ರ ತನಿಖೆಗೆ ತಂಡ ರಚಿಸಲು ಜಿಲ್ಲಾ ಉಸ್ತುವಾರಿ ಸಚಿವರೇ ಆದೇಶಿಸಿದರೂ ಅದಕ್ಕೆ ಕಿಮ್ಮತ್ತು ಇಲ್ಲದಾಗಿದೆ. ಹೀಗಾಗಿ ಈ ಉಪ ನೋಂದಣಿ ಅಧಿಕಾರಿ ಮತ್ತು ಭೂಗಳ್ಳರನ್ನು ತಡೆಯುತ್ತಿರುವ ಶಕ್ತಿ ಯಾವುದು? ಎಂಬುದು ತಿಳಿಯದಾಗಿದೆ. ಶಾಸಕರು, ಶಾಸಕರ ಜೊತೆಗಾರರು, ವಿಧಾನ ಪರಿಷತ್ ಸದಸ್ಯರು ಹೀಗೆ ಬೇರೆ ಬೇರೆ ರಾಜಕಾರಣಿಗಳ ಮೇಲೆ ಸಂಶಯ ಇದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ವರ್ಗಾವಣೆ ಬೇಡ-ತನಿಖೆ ಆಗಲಿ

ಈಗಾಗಲೇ ಪ್ರಕರಣವೊಂದರಲ್ಲಿ ಇಂಡಿ ಉಪ ನೋಂದಣಾಧಿಕಾರಿ ಮೇಲೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಆದರೆ, ವಿಜಯಪುರ ಉಪ ನೋಂದಣಾಧಿಕಾರಿ ಮೇಲೆ ಸಾಕಷ್ಟು ಆರೋಪಗಳಿದ್ದರೂ ಕ್ರಮ ಕೈಗೊಂಡಿಲ್ಲವೇಕೆ? ಸಾಕಷ್ಟು ಪ್ರಕರಣಗಳಲ್ಲಿ ಉಪ ನೋಂದಣಾಧಿಕಾರಿ ಹೆಸರು ಕೇಳಿ ಬಂದಿದೆ. ಸಾಯಿ ಪಾರ್ಕ್‌ನಲ್ಲಿ 18 ಪ್ಲಾಟ್‌ಗಳು ಪರಭಾರೆ ಮಾಡದಂತೆ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಉಪ ನೋಂದಣಿ ಅಧಿಕಾರಿ ಪರಭಾರೆ ಮಾಡಿದರು. ಈ ಉಪ ನೋಂದಣಾಧಿಕಾರಿ ಹೆಸರು ಹಾಕಿಕೊಂಡೇ ಅವರು ದೂರು ನೀಡಿದರೂ ಕ್ರಮ ಆಗಿಲ್ಲ. ಹೀಗಾಗಿ ಇವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡದೇ ಸಮಗ್ರ ತನಿಖೆಗೆ ಒಳಪಡಿಸಬೇಕು. ಅದಕ್ಕಾಗಿ ವಿಶೇಷ ತಂಡ ರಚಿಸಬೇಕು. ವಾರದೊಳಗೆ ತಂಡ ರಚಿಸಿ ಸಮಗ್ರ ತನಿಖೆ ಕೈಗೊಳ್ಳದೇ ಹೋದರೆ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರಲ್ಲದೇ, ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಯಾವುದೇ ಒತ್ತಡಕ್ಕೂ ಮಣಿಯಲ್ಲ. ಜಿಲ್ಲಾ ಮಟ್ಟದಲ್ಲಿ ಸಮಸ್ಯೆ ಬಗೆ ಹರಿಯದೇ ಹೋದಲ್ಲಿ ರಾಜಧಾನಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದೆಂದರು.

ಭೂಗಳ್ಳರು ರಾಜಾರೋಷ ತಿರಗುತ್ತಿದ್ದಾರೆ

ಪೊಲೀಸ್ ಇಲಾಖೆ ಕೆಲವರನ್ನು ಬಂಧಿಸಿ ಫೋಸು ಕೊಟ್ಟಿದ್ದು ಸರಿಯಾಗಿದೆ. ಅದಕ್ಕೆ ಸ್ವಾಗತ. ಆದರೆ, ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ರಾಜಾರೋಷವಾಗಿ ಹೊರಗಡೆ ತಿರುಗಾಡುತ್ತಿದ್ದಾರೆ. ಕೆಲವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಹೀಗಾಗಿ ಭೂಗಳ್ಳರಿಗೆ ಯಾವುದೇ ಭಯ ಇಲ್ಲದಂತಾಗಿದೆ.

ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಅವರು ಭೂ ಮಾಫಿಯಾ ಬಗ್ಗೆ ಸದನದಲ್ಲಿ ಪ್ರಶ್ನಿಸಿದ್ದಾರೆ. ಅದಕ್ಕೆ ಗೃಹ ಸಚಿವ ಜಿ. ಪರಮೇಶ್ವರ ಅವರು ಉತ್ತರಿಸುತ್ತಾ, ಕಳೆದ 2 ವರ್ಷಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಇಂಥ 19 ಪ್ರಕರಣಗಳು ದಾಖಲಾಗಿರುವುದಾಗಿ ತಿಳಿಸಿದ್ದಾರೆ. 2023ರಲ್ಲಿ 9 ಪ್ರಕರಣಗಳು ದಾಖಲಾಗಿದ್ದು, 22 ಆರೋಪಿಗಳನ್ನು ಬಂಧಿಸಲಾಗಿದೆ. 2024ರಲ್ಲಿ ಈವರೆಗೆ 10 ಪ್ರಕರಣ ದಾಖಲಾಗಿದ್ದು, 13 ಆರೋಪಿಗಳನ್ನು ಬಂಧಿಸಲಾಗಿದೆ ಎಂದಿದ್ದಾರೆ. ಆದರೆ, ನಾನೇ ಈವರೆಗೆ ಸಂಗ್ರಹಿಸಿದ ಮಾಹಿತಿ ಪ್ರಕಾರ 50 ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಇನ್ನೂ ಬರುತ್ತಲೇ ಇವೆ ಎಂದರು.

ಖೊಟ್ಟಿ ದಾಖಲೆ ಸೃಷ್ಠಿಸುವವರು ಯಾರು? ಗುರುತಿನ ಚೀಟಿ ನಕಲಿಯಾಗಿ ಎಲ್ಲಿ ತಯಾರಿಸಲಾಗುತ್ತಿದೆ? ನಕಲಿ ಸೀಲ್‌ಗಳ ತಯಾರಿಕೆ ಯಾರು ಮಾಡುತ್ತಿದ್ದಾರೆ? ಎಂಬುದರ ಬಗ್ಗೆ ಆಳವಾಗಿ ತನಿಖೆಯಾಗಬೇಕಿದೆ. ಈಗಾಗಲೇ ಓರ್ವನನ್ನು ಹಿಡಿದು ರಾಜಕೀಯ ಒತ್ತಡದ ಕಾರಣಕ್ಕೆ ಪೊಲೀಸರು ಬಿಟ್ಟಿದ್ದಾರೆಂಬ ಮಾಹಿತಿ ಕೇಳಿ ಬಂದಿದೆ. ಹೀಗಾಗಿ ಇಲಾಖೆ ಭೂ ಮಾಫಿಯಾ ಮಟ್ಟ ಹಾಕಲು ಉನ್ನತ ತಂಡ ರಚಿಸುವುದು ಅನಿವಾರ್ಯ ಎಂದರು.

ಇನ್ನು ಮಹಾನಗರ ಪಾಲಿಕೆಯಲ್ಲಿಯೂ ಫಾರ್ಮ್ ನಂ.2ರ ಹಂಚಿಕೆಯಲ್ಲಿ ಗೋಲ್‌ಮಾಲ್ ಕಂಡು ಬಂದಿದೆ. ನಕಲಿ ಸೀಲ್ ಮತ್ತು ಸಹಿ ಬಳಸಿ ಫಾರ್ಮ್‌ಗಳನ್ನು ನೀಡಲಾಗುತ್ತಿದೆ. ಆದಷ್ಟು ಬೇಗ ಪ್ರಕರಣಗಳ ಮೂಲ ಕೆದಕಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net