ಸೂರಜ್ ಬಂಧನದಿಂದ ಪಕ್ಷಕ್ಕೇಕೆ ಮುಜುಗರ?

mysore
Published on

ಮೈಸೂರು: ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಎಂಎಲ್‌ಸಿ ಸೂರಜ್ ರೇವಣ್ಣ ಬಂಧನದಿಂದ ಪಕ್ಷಕ್ಕೆ ಏಕೆ ಮುಜುಗರವಾಗುತ್ತದೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ, ಶಾಸಕ ಜಿ.ಟಿ.ದೇವೇಗೌಡ ಪ್ರಶ್ನಿಸಿದರು.


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಯಾರೋ ಒಬ್ಬ ತಪ್ಪು ಮಾಡಿದರೆ ಅದು ಆರೂವರೆ ಕೋಟಿ ಜನರು ಕಾರಣವೇ? ಅಲ್ಲ ತಾನೇ? ಇದು ಕೂಡ ಹಾಗೇ. ಸೂರಜ್ ವಿರುದ್ಧ ಕ್ರಮದ ಕುರಿತು ಪಕ್ಷದೊಳಗೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ ಎಂದರು.


ಸೂರಜ್ ರೇವಣ್ಣ ಬಂಧನದ ಬಗ್ಗೆ ನನಗೆ ಮಾಹಿತಿ ಇಲ್ಲ. ನಿನ್ನೆಯಿಂದ ನಾನು ಹಲವು ಕಾರ್ಯಕ್ರಮಗಳಲ್ಲಿ ಬಿಜಿಯಾಗಿದ್ದೆ. ಬೆಳಗ್ಗೆ ಪತ್ರಿಕೆ, ಟಿ.ವಿ ನೋಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.


ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಚಾರದಲ್ಲೂ ನಮ್ಮ ಹಸ್ತಕ್ಷೇಪ ಇರಲಿಲ್ಲ. ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ತಪ್ಪು ಮಾಡಿದವರ ಪರ ನಾವು ಯಾವತ್ತೂ ನಿಲ್ಲುವುದಿಲ್ಲ. ನನ್ನ ಮಗನೇ ಇರಲಿ, ನನ್ನ ಸಂಬಂಧಿಗಳೇ ಇರಲಿ, ಯಾರೇ ತಪ್ಪು ಮಾಡಿದರೂ ತಪ್ಪೇ. ಜನತದಾಳ ಯಾವತ್ತು ತಪ್ಪು ಮಾಡಿದವರ ಪರ ನಿಲ್ಲುವುದಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net