ತೀರ್ಥಹಳ್ಳಿ: ಜನರ ಕತ್ತಲಲ್ಲಿಟ್ಟು ಬಹುಗ್ರಾಮ ಕುಡಿಯುವ ನೀರು ಯೋಜನೆ ಜಾರಿ ಏಕೆ?

14 tth 01
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿರೋಧಿಸಿ ತೀರ್ಥಹಳ್ಳಿ ತಾಲೂಕು ಕಚೇರಿ ಮುಂಭಾಗ ಭೀಮೇಶ್ವರ ಸಂಗಮ ಹೋರಾಟ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಮೇಗರವಳ್ಳಿ ವೆಂಕಟೇಶ ಹೆಗ್ಡೆ, ಶಂಕರಮನೆ ಅರುಣ್, ಕೋಡ್ಲು ವೆಂಕಟೇಶ್ ಇತರರಿದ್ದರು.
Published on

ತೀರ್ಥಹಳ್ಳಿ: ತಾಲೂಕಿನ ಹೊಸಳ್ಳಿ ಗ್ರಾಪಂ ವ್ಯಾಪ್ತಿಯ ಕೋಡ್ಲು ಗ್ರಾಮದಲ್ಲಿ ಮಾಲತಿ ನದಿ ನೀರನ್ನು ಬಳಸಿ 344 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಗುರುವಾರ ತಾಲೂಕು ಕಚೇರಿ ಮುಂಭಾಗ ಭೀಮೇಶ್ವರ ಸಂಗಮ ಹೋರಾಟ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಹೊಸಳ್ಳಿ, ಹೆಗ್ಗೋಡು, ಮೇಗರವಳ್ಳಿ ಗ್ರಾಪಂ ವ್ಯಾಪ್ತಿಯ ಮಹಿಳೆಯರೂ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು. ಯೋಜನೆ ಈ ಭಾಗದ ರೈತರ ಮರಣ ಶಾಸನದಂತಿದ್ದು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾನಿರತರು ಘೋಷಣೆ ಕೂಗಿದರು.
ಕರವೇ ಮುಖಂಡ ಮೇಗರವಳ್ಳಿ ವೆಂಕಟೇಶ ಹೆಗ್ಡೆ ಮಾತನಾಡಿ, ಶುದ್ಧ ಕುಡಿಯುವ ನೀರಿನ ಯೋಜನೆ ಅತ್ಯಂತ ಉತ್ತಮವಾದ ಯೋಜನೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಇದೊಂದು ಅತ್ಯಂತ ಅವೈಜ್ಞಾನಿಕವಾಗಿರುವ ಮತ್ತು ಹಣ ಹೊಡೆಯುವ ಉದ್ದೇಶದಿಂದಲ್ಲೇ ಮಾಡುತ್ತಿರುವ ಯೋಜನೆಯಾಗಿದೆ. ಗ್ರಾಮಸ್ಥರಿಗೆ ಮಾಹಿತಿಯನ್ನೇ ನೀಡದೇ ಜನರನ್ನು ಕತ್ತಲಲ್ಲಿಟ್ಟು ಮಾಡಲು ಹೊರಟಿರುವ ಈ ಯೋಜನೆಗೆ ವಿರೋಧವಿದ್ದು ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಜಲಜೀವನ ಮಿಷನ್ ಹೆಸರಿನ ಯೋಜನೆಯೇ ಅವೈಜ್ಞಾನಿಕ. ಎಲ್ಲರ ಮನೆ ಮುಂದೆ ನೀರು ಬರದಿರುವ ನಲ್ಲಿ ಕಟ್ಟೆಗಳು ಮಾತ್ರ ಇವೆ. ನೂರಾರು ಕೋಟಿ ರೂ. ವೆಚ್ಚದ ಈ ಯೋಜನೆಯ ಬದಲಿಗೆ ಇದೇ ಅನುದಾನವನ್ನು ಬಳಸಿ ಪ್ರತಿ ಗ್ರಾಪಂ ಮಟ್ಟದಲ್ಲಿ ಕುಡಿಯುವ ನೀರಿನ ಯೋಜನೆ ಮಾಡುವುದು ಸೂಕ್ತ. ಗಾಡ್ಗೀಳ್ ವರದಿ, ಕಸ್ತೂರಿ ರಂಗನ್ ವರದಿ ಸೇರಿದಂತೆ ಮಲೆನಾಡನ್ನು ನಿರ್ಮೂಲನೆ ಮಾಡುವ ಯೋಜನೆಗೆ ವಿರೋಧವಿದೆ ಎಂದರು.
ಹೊಸಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶಂಕರಮನೆ ಅರುಣ್ ಮಾತನಾಡಿ, ಈಚಿನ ವರ್ಷಗಳಲ್ಲಿ ತುಂಗಾ ಮತ್ತು ಮಾಲತಿ ನದಿಗಳು ಬೇಸಿಗೆಯ ಆರಂಭದಲ್ಲೇ ನೀರಿಲ್ಲದೆ ಹರಿವನ್ನೇ ನಿಲ್ಲಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ 36 ಗ್ರಾಪಂ ವ್ಯಾಪ್ತಿಯ ಮನೆಗಳಿಗೆ ನೀರು ಸರಬರಾಜು ಮಾಡುವ ಈ ಯೋಜನೆ ಕಾರ್ಯ ಸಾಧುವಲ್ಲ. 150 ಎಚ್‌ಪಿ ಪಂಪ್‌ನಿಂದ ದಿನದ 22 ಗಂಟೆ ನೀರೆತ್ತಿದರೆ ಈ ನದಿ ಕೆಳಭಾಗದ ಜನರಿಗೆ ಒಂದು ಹನಿ ಕೂಡಾ ನೀರು ಸಿಗುವುದು ಅಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಲೆ ಸರಿ ಇಲ್ಲದ ಸರ್ಕಾರಗಳ ಇಂತಹ ಯೋಜನೆಯನ್ನು ನಿಯಂತ್ರಿಸುವ ಶಕ್ತಿ ನಮಗಿದೆ ಎಂದು ಅಬ್ಬರಿಸಿದ ರೈತ ಮುಖಂಡ ಕೊರೋಡಿ ಕೃಷ್ಣಪ್ಪ, ಈ ಯೋಜನೆ ಮುಂದುವರಿದರೆ ಯಾವ ಬೆಲೆಯನ್ನಾದರೂ ತೆತ್ತು ಇದನ್ನು ನಿಯಂತ್ರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಕೋಡ್ಲು ವೆಂಕಟೇಶ್, ಹೆಗೋಡು ಗ್ರಾಪಂ ಸದಸ್ಯ ಭಾರತೀಶ್, ಹೊಸಳ್ಳಿ ಗ್ರಾಪಂ ಸದಸ್ಯ ಈಚಲುಬೈಲು ರಾಜೇಶ್, ಪ್ರಮುಖರಾದ ತೋರಳಿ ಪ್ರಸನ್ನ, ಶಂಕೇಶ್, ತಲುಬಿ ರಾಘವೇಂದ್ರ, ಮೀನುಗುಂದ ಸಂತೋಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net