ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೊಳಿಸಲ್ಲವೇಕೆ?, ಸಿಎಂ ಸಿದ್ಧರಾಮಯ್ಯ ಅಹಿಂದ ವಿರೋಧಿ ಸಂಸದ ರಮೇಶ ಜಿಗಜಿಣಗಿ

ramesh jigajinagi
Published on

ವಿಜಯಪುರ: ನ್ಯಾ.ಸದಾಶಿವ ಆಯೋಗದ ವರದಿ ಬದಿಗಿರಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ದಲಿತ ಬಾಂಧವರಿಗೆ ನ್ಯಾಯ ಕೊಡಿಸುವ ನೈಜ ಇಚ್ಛಾಶಕ್ತಿ ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದ್ದಾರೆ.

ಅಹಿಂದ ನಾಯಕ ಎಂದು ಹೇಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಹಿಂದ ಪರವಾದ ಯಾವ ಕಾಳಜಿಯೂ ಇಲ್ಲ. ತಾನು ಮಾಡುತ್ತಿರುವ ತಪ್ಪುಗಳನ್ನು ಮುಚ್ಚಿಹಾಕಲು ಈಗ ಜಾತಿ ಜನಗಣತಿ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ದಲಿತ ಬಾಂಧವರ ಮೇಲೆ ನೈಜವಾದ ಕಾಳಜಿ ಇದ್ದಿದ್ದರೆ ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುತ್ತಿದ್ದರು, 2012-13 ರಲ್ಲಿಯೇ ನ್ಯಾ.ಸದಾಶಿವ ಆಯೋಗ ವರದಿಯನ್ನು ಸರ್ಕಾರಕ್ಕೆ ನೀಡಿದೆ. ಆದರೂ ಅನುಷ್ಟಾನಕ್ಕೆ ಮುಂದಾಗಿಲ್ಲ. ಅಂಥದರಲ್ಲಿ 2015 ರ ಕಾಂತರಾಜ್ ಆಯೋಗದ ವರದಿಯನ್ನು ಜಾರಿಗೊಳಿಸಲು ತರಾತುರಿ ಮಾಡುತ್ತಿದೆ. ಇದಕ್ಕಿಂತಲೂ ಎಷ್ಟೋ ವರ್ಷ ಪೂರ್ವ ಒಳಮೀಸಲಾತಿ ಶಿಫಾರಸ್ಸುಳ್ಳ ನ್ಯಾ.ಸದಾಶೀವ ಆಯೋಗದ ವರದಿಯನ್ನು ಏಕೆ ಜಾರಿಗೊಳಿಸಲಿಲ್ಲ ಎಂದು ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಲಿತರಿಗೆ ನ್ಯಾಯ ಕೊಡಿಸುವುದನ್ನು ಬಿಟ್ಟು ನ್ಯಾ.ಸದಾಶಿವ ಆಯೋಗದ ವರದಿಯನ್ನು ಬದಿಗಿರಿಸಿಕೊಂಡಿದ್ದಾರೆ, ನಂತರ ರಚನೆಯಾದ ಕಾಂತರಾಜ್ ಆಯೋಗದ ವರದಿ ಜಾರಿ ಮಾಡಲು ಮುಂದಾಗಿದ್ದಾರೆ. 2015 ರಿಂದಲೂ ನ್ಯಾ.ಸದಾಶೀವ ಆಯೋಗದ ವರದಿ ಜಾರಿಗೆ ಆಸಕ್ತಿ ವಹಿಸುತ್ತಿಲ್ಲ, ಈ ರೀತಿ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಸಿದ್ಧರಾಮಯ್ಯ ಅವರಿಗೆ ಅಹಿಂದ ನಾಯಕ ಎಂಬ ಪಟ್ಟ ಕಟ್ಟುವ ಅಗತ್ಯವಿಲ್ಲ ಎಂದಿದ್ದಾರೆ.

ಅಹಿಂದ ವಿರೋಧಿ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಅಹಿಂದ ವರ್ಗಕ್ಕೆ ಯಾವ ರೀತಿಯಿಂದಲೂ ನ್ಯಾಯ ದೊರಕಿಲ್ಲ ಹೀಗಾಗಿ ಅವರನ್ನು ಅಹಿಂದ ನಾಯಕ ಎಂದು ಬಿಂಬಿಸುವುದು ಸರಿಯಲ್ಲ. ಮುಖ್ಯಮಂತ್ರಿಗಳು ಆಡಳಿತ ನಡೆಸಲು ವೈಫಲ್ಯವಾಗಿದ್ದಾರೆ, ಬೆಲೆ ಏರಿಕೆ ಮೊದಲಾದ ಜನವಿರೋಧಿ ಕ್ರಮ ಹಾಗೂ ಮುಡಾ ಹಗರಣ, ಗಣಿ ನವೀಕರಣ ಹಗರಣ ಹೀಗೆ ಸಾಲು ಸಾಲು ಹಗರಣಗಳಿಂದ ಜನರಿಗೆ ಸಿದ್ಧರಾಮಯ್ಯ ಅವರಿಗೆ ವಿಶ್ವಾಸ ಸಂಪೂರ್ಣ ಕಡಿಮೆಯಾಗಿದೆ. ಹೀಗಾಗಿ ಅವರೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net