ಜಗದೀಶ ಶೆಟ್ಟರ್ ಮೌನವೇಕೆ?: ಮಾಜಿ ಮೇಯರ್ ಪ್ರಶ್ನೆ

3 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಲಿಂಗಾಯತರಿಗೆ ರಾಜ್ಯದಲ್ಲಿ ಅನ್ಯಾಯವಾಗಿದೆ ಎಂದು ಹೇಳಿಕೆ ನೀಡಿದ ಕಾಂಗ್ರೆಸ್ ಹಿರಿಯ ನಾಯಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಈ ಭಾಗದ ಸ್ವಯಂ ಘೋಷಿತ ಕಾಂಗ್ರೆಸ್ ನಾಯಕ ಜಗದೀಶ ಶೆಟ್ಟರ್ ಮೌನವೇಕೆ..? ಎಂದು ಮಾಜಿ ಮೇಯರ್ ಈರೇಶ ಅಂಚಟಗೇರಿ ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರದಲ್ಲಿ ಲಿಂಗಾಯತ ಶಾಸಕರು ಹಾಗೂ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಶಾಮನೂರು ಹೇಳಿದ್ದಾರೆ. ಈ ಸಮಯದಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಪಕ್ಷ ತೊರೆದು ಕಾಂಗ್ರೆಸ್ ಪಡಸಾಲೆ ಸೇರಿಕೊಂಡಿರುವ ಈ ಭಾಗದ ಸ್ವಯಂ ಘೋಷಿತ ನಾಯಕ ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಜಾಣಮೌನ ವಹಿಸಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ 31 ಜಿಲ್ಲೆಗಳಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸ್ಥಾನಮಾನವಿಲ್ಲ. ಕಾಂಗ್ರೆಸ್ ಲಿಂಗಾಯತ ಶಾಸಕರ ಮಾತಿಗೆ ಕಿಮ್ಮತ್ತಿಲ್ಲ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಜಿಲ್ಲೆಯಲ್ಲಿ ಸಹ ಯಾವುದೇ ಲಿಂಗಾಯತ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಪ್ರಾತಿನಿಧ್ಯವಿಲ್ಲ. ಆದಾಗ್ಯೂ ಜಗದೀಶ ಶೆಟ್ಟರ್ ಯಾವುದೇ ಖಂಡನಾ ಹೇಳಿಕೆ ನೀಡಿದಿರುವುದನ್ನು ಗಮನಿಸಿದರೆ, ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ ಎಂದು ಟೀಕಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದ ವೀರಶೈವ ಲಿಂಗಾಯತ ಸಮುದಾಯದ ನೋವು ನಲಿವುಗಳಿಗೆ ಸ್ಪಂದನೆ ನೀಡದ ಕಾಂಗ್ರೆಸ್ ಪಕ್ಷದ ಈ ಭಾಗದ ಸ್ವಯಂ ಘೋಷಿತ ನಾಯಕರಾದ ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ತಮ್ಮ ಭಾಗದ ಲಿಂಗಾಯತರಿಗೆ ಅನ್ಯಾಯವಾದರೂ ಕಾಂಗ್ರೆಸ್‌ನ ಕೈಗೊಂಬೆಗಳಾಗಿ ವರ್ತಿಸುತ್ತಿದ್ದು ಅಕ್ಷೇಪಣೀಯ. ಜಗದೀಶ ಶೆಟ್ಟರ್ ಅವರ ಬೀಗರಾದ ಶಾಮನೂರು ಶಿವಶಂಕ್ರಪ್ಪ ಹೇಳಿಕೆ ಅಕ್ಷರಶಃ ಸತ್ಯವಾಗಿದೆ. ಇನ್ನಾದರೂ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕ್ಷುಲ್ಲಕ ರಾಜಕಾರಣ, ಬಿಜೆಪಿ ಟೀಕಿಸುವುದನ್ನು ಬಿಟ್ಟು ಲಿಂಗಾಯತ ಅಧಿಕಾರಿಗಳಿಗೆ ಹಾಗೂ ನಾಯಕರಿಗೆ ಆದ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net