

ಪ್ರಮುಖ ಮುಖ್ಯಾಂಶಗಳು
ಮಂಗಳೂರು: ನಗರದಲ್ಲಿ ಅಂಬೇಡ್ಕರ್ ವೃತ್ತ ನಿರ್ಮಾಣ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ದಲಿತ ಮುಖಂಡರು ಮಂಗಳೂರಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಂಗಳೂರು ಮತ್ತು ಉಳ್ಳಾಲ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಮುಖಂಡ ದಿನೇಶ್ ಮೂಳೂರು ಅವರು ವಿಷಯವನ್ನು ಪ್ರಸ್ತಾಪಿಸಿ, ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ನಿರ್ಮಾಣ ಸಾಧ್ಯವಾಗುತ್ತಿಲ್ಲ ಎಂದಾದರೆ ನಾವೇ ನಿರ್ಮಾಣ ಮಾಡುತ್ತೇವೆ ಎಂದರು.
ಚಿನ್ನಪ್ಪ ಬಂಗೇರ ಅವರು ಮಾತನಾಡಿ, ಅಂಬೇಡ್ಕರ್ ವೃತ್ತದಲ್ಲಿ ಈ ಹಿಂದೆ ಇದ್ದ ಪೊಲೀಸ್ ಚೌಕಿಯಲ್ಲಿ ಅಂಬೇಡ್ಕರ್ ವೃತ್ತ ಎಂದು ಬರೆದಿತ್ತು. ಆ ಚೌಕಿಯನ್ನು ತೆಗೆದು ಹೊಸ ಚೌಕಿಯನ್ನು ಇಡಲಾಗಿದೆ. ಆದರೆ ಇದರಲ್ಲಿ ಅಂಬೇಡ್ಕರ್ ವೃತ್ತ ಎಂದು ಬರೆದಿಲ್ಲ ಎಂದರು. ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಅಧಿಕಾರಿಗಳು ಉತ್ತರಿಸಿದರು.
ರಘುರಾಜ್ ಕದ್ರಿ ಅವರು, ಹಾಸ್ಟೆಲ್ ಕೊರತೆಯನ್ನು ಪ್ರಸ್ತಾಪಿಸಿದರು. ಅರ್ಜಿ ಸಲ್ಲಿಸಿದ ಪ.ಜಾ./ಪ.ಪಂಗಡದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುರೇಶ್ ಅಡಿಗ ಅವರು ಪ್ರತಿಕ್ರಿಯಿಸಿ, ಮಂಗಳೂರಿನಲ್ಲಿ ಹಾಸ್ಟೆಲ್‌ಗಳ ಕೊರತೆ ಇದೆ. ಬಾಡಿಗೆ ಕಟ್ಟಡಗಳು ಸಿಗುತ್ತಿಲ್ಲ. ಇತ್ತೀಚೆಗೆ ಕದ್ರಿಯಲ್ಲಿ ಹಾಸ್ಟೆಲ್ ಉದ್ಘಾಟನೆಯಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಬಳಿ 500 ವಿದ್ಯಾರ್ಥಿಗಳ ಸಾಮರ್ಥ್ಯದ ಕಟ್ಟಡ ನಿರ್ಮಾಣವಾಗುತ್ತಿದ್ದು, ಈ ವರ್ಷದೊಳಗೆ ಅದು ಪೂರ್ಣಗೊಳ್ಳಬಹುದು. ಆನಂತರ ಸಮಸ್ಯೆ ಬಗೆಹರಿಯಬಹುದು ಎಂದರು.
ಕಿಡ್ನಿ, ಹೃದಯ ಕಾಯಿಲೆ ಮೊದಲಾದ ಗಂಭೀರ ಕಾಯಿಲೆಗಳಿಂದ ನಮ್ಮವರು ಬಳಲುತ್ತಿದ್ದಾರೆ. ಆರೋಗ್ಯ ಕಾರ್ಡ್ ಕೂಡ ಅವರಲ್ಲಿಲ್ಲ. ಅಧಿಕಾರಿಗಳು ನಮ್ಮವರ ಕಾಲೋನಿಗಳಿಗೆ ಭೇಟಿ ನೀಡಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ ಈ ಮೂಲಕ ಮಾಹಿತಿಯನ್ನು ನೀಡಬೇಕೆಂದು ಅನಿಲ್ ಕುಮಾರ್ ಮತ್ತು ಇತರ ಮುಖಂಡರು ಆಗ್ರಹಿಸಿದರು. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿ ಉತ್ತರಿಸಿದರು.
ಜೂ. 29ರಂದು ಕುದುಮುಲ್ ರಂಗರಾವ್ ಅವರ ಜನ್ಮದಿನ. ಕಳೆದ ವರ್ಷ ಯಾವುದೇ ಕಾರ್ಯಕ್ರಮ ನಡೆಸಲಾಗಿಲ್ಲ. ಈ ವರ್ಷವಾದರೂ ಜಿಲ್ಲಾಡಳಿತ ಮತ್ತು ಇತರ ಸಂಬಂಧಪಟ್ಟ ಇಲಾಖೆಯವರು ಪುರಭವನದಲ್ಲೇ ಕಾರ್ಯಕ್ರಮ ಆಯೋಜಿಸಬೇಕು ಎಂದು ಅಖಿಲ ಭಾರತ ಮುಂಡಾಲ ಯುವ ವೇದಿಕೆ ಅಧ್ಯಕ್ಷ ರಘುವೀರ್ ಬಾಬುಕಟ್ಟೆ ಅವರು ಆಗ್ರಹಿಸಿದರು.
ಮಂಗಳೂರು ತಹಶೀಲ್ದಾರ್ ರಮೇಶ್ ಬಾಬು, ಉಳ್ಳಾಲ ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಉಪಸ್ಥಿತರಿದ್ದರು. ದಲಿತ ಸಂಘಟನೆಗಳ ವಿವಿಧ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.