ನುಡಿದಂತೆ ನಡೆದರೆ ಗೃಹಲಕ್ಷ್ಮೀ ಹಣ ವಿಳಂಬ ಏಕೆ? ನಿಖಿಲ್ ಕುಮಾರಸ್ವಾಮಿ ಪ್ರಶ್ನೆ|Gruhalakshmi's money

NIKHIL DASARAHALLI
Published on

ಬೆಂಗಳೂರು: ನುಡಿದಂತೆ ನಡೆಯುವುದಾಗಿ ಹೇಳಿದ ಸರ್ಕಾರ ಮೂರು ತಿಂಗಳಿಂದ ಗೃಹಲಕ್ಷ್ಮಿ ಹಣ ಏಕೆ ಬಿಡುಗಡೆ ಮಾಡಿಲ್ಲ(why is Gruhalakshmi's money delayed?) ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ವಾಗ್ದಾಳಿ ನಡೆಸಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚೊಕ್ಕಸಂದ್ರದ ಮಹಿಮಪ್ಪ ಮೈದಾನದಲ್ಲಿ ಆಯೋಜಿಸಿದ್ದ ಜೆಡಿಎಸ್ ಸದಸ್ಯತ್ವ ನೊಂದಣಿ ಮತ್ತು ಬೂತ್ ಸಮಿತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಎರಡು ಮೂರು ತಿಂಗಳ ಆ ಕಡೆ ಈ ಕಡೆ ಆಗಬಹುದು ಎಂದು ಸಿಎಂ, ಡಿಸಿಎಂ ಹೇಳುತ್ತಾರೆ. ಮಾತು ಕೊಟ್ಟಿದ್ದು ಯಾರು? ನುಡಿದಂತೆ ನಡೆಯುವುದು ಕಣ್ಣ ಮುಂದೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.

ಮೆಟ್ರೋ ಪ್ರಯಾಣ ದರ ಶೇ.45 ಏರಿಕೆ ಮಾಡಿದ್ದಾರೆ. ಸಾರ್ವಜನಿಕರ ಸಂಚಾರಕ್ಕೆ ಮಾಡಿರುವ ಯೋಜನೆ ಹಳ್ಳ ಹಿಡಿಯುತ್ತಿದೆ. 25 ಸಾವಿರ ರೂ. ಸಂಬಳ ಪಡೆಯುವ ವ್ಯಕ್ತಿ ಪ್ರತಿನಿತ್ಯ ಮೆಟ್ರೋ ಪ್ರಯಾಣ ಮಾಡಿದರೆ 10 ಸಾವಿರ ರೂ. ಮೆಟ್ರೋ ಸಂಚಾರಕ್ಕೆ ಕೋಡಬೇಕು. ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂದು ಹರಿಹಾಯ್ದರು.

ಈಗಾಗಲೇ ನೀರಿನ ದರ, ಹಾಲಿನ ದರ ಜೊತೆಯಲ್ಲಿ ತೈಲದ ಬೆಲೆ ಏರಿಕೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಇದು ರಾಜ್ಯದ ಪರಿಸ್ಥಿತಿ. ರಾಜ್ಯದ ಉಪ ಮುಖ್ಯಮಂತ್ರಿಗಳು ಭಗವಂತೆ ಧರೆಗೆ ಇಳಿದು ಬಂದರೂ ಕೂಡ ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಅಂತಹ ಪರಿಸ್ಥಿತಿಯನ್ನು ಸರ್ಕಾರ ಸೃಷ್ಟಿ ಮಾಡಿದೆ ಎಂದು ಟೀಕಿಸಿದರು.

ವೈಟ್ ಟ್ಯಾಪಿಂಗ್‌ನಲ್ಲಿ ಕೋಟಿ ಕೋಟಿ ಲೂಟಿ ಆಗುತ್ತಿದೆ. ಒಂದು ರಸ್ತೆ ಗುಂಡಿ ಮುಚ್ಚಿಸುವ ಕೆಲಸ ಆಗುತ್ತಿಲ್ಲ. ಬೆಂಗಳೂರು ನಗರದಲ್ಲಿ ಹೆಚ್ಚು ತೆರಿಗೆ ವಸೂಲಿ ಮಾಡುತ್ತಿರುವ ಸರ್ಕಾರ ಇಲ್ಲಿನ ಜನರಿಗೆ ಯಾವುದೇ ಮೂಲ ಸೌಕರ್ಯ ಕಲ್ಪಿಸುತ್ತಿಲ್ಲ. ಐಟಿ ಕಂಪನಿಗಳಿಗೆ ಬೆಂಗಳೂರಿನಲ್ಲಿ ಅಗತ್ಯ ಸೌಲಭ್ಯ ನೀಡುತ್ತಿಲ್ಲ. ಹೀಗಾಗಿ ಕೈಗಾರಿಕೆಗಳು ಬೇರೆ ರಾಜ್ಯದತ್ತ ಮುಖ ಮಾಡುತ್ತಿವೆ ಎಂದು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯಬೇಕು. ಬೆಂಗಳೂರು ನಗರ ಭಾಗದಲ್ಲಿ ಜೆಡಿಎಸ್‌ನ್ನು ಬೇರು ಮಟ್ಟದಿಂದ ಬಲಪಡಿಸಬೇಕು. ಈ ನಿಟ್ಟಿನಲ್ಲಿ ಈ ಸದಸ್ಯತ್ವ ಅಭಿಯಾನ ಮಹತ್ವದಾಗಿದೆ. ನಗರ ಭಾಗದಲ್ಲಿ ಈ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸುವಂತೆ ಕಾರ್ಯಕರ್ತರು ಮತ್ತು ಮುಖಂಡರಿಗೆ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಬೆಂಗಳೂರು ಜೆಡಿಎಸ್ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ದಾಸರಹಳ್ಳಿ ನಗರಸಭೆ ಮಾಜಿ ಅಧ್ಯಕ್ಷ ಡಾ.ಅಂದಾನಪ್ಪ, ದಾಸರಹಳ್ಳಿ ಜೆಡಿಎಸ್ ಘಟಕದ ಅಧ್ಯಕ್ಷ ಮುನಿಸ್ವಾಮಿ, ಬೆಂಗಳೂರು ನಗರ ವಿಭಾಗದ ಉಸ್ತುವಾರಿ ಜಗದೀಶ್ ನಾಗರಾಜಯ್ಯ, ಮಹಿಳಾ ವಿಭಾಗದ ಅಧ್ಯಕ್ಷೆ ಛಾಯಾ, ಮುಖಂಡರಾದ ಕೆ.ಹನುಮಂತರಾಯಪ್ಪ, ಮಂಜೇಗೌಡ, ಭರತ್ ಗುಂಡಪ್ಪ, ಬಿ. ಬಲರಾಮ್, ರಾಜ್ಯ ಸಾಮಾಜಿಕ ಜಾಲತಾಣದ ಅಧ್ಯಕ್ಷ ಚಂದನ್ ದೊರೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net