ಸಿಎಂ ಅವರೇ ಧಾರವಾಡ ಜಿಲ್ಲೆಯ ಬಗ್ಗೆ ತಾತ್ಸಾರ ಏಕೆ ?

New Joshi
Published on

ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ಬಗ್ಗೆ ತಾತ್ಸಾರ ಏಕೆ ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಪ್ರಲ್ಹಾದ ಜೋಶಿ, ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿರುವ ಮರಮುಟ್ಟು ಸಂಗ್ರಹಾಗಾರವನ್ನು ರದ್ದುಗೊಳಿಸಿ, ಯಲ್ಲಾಪೂರ ತಾಲೂಕಿನ ಕಿರವತ್ತಿಗೆ ಸ್ಥಳಾಂತರಿಸುವ ಆದೇಶ ಮಾಡಿರುವ ಕ್ರಮ ಸರಿ ಅಲ್ಲ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ, ಅಳ್ನಾವರ ಪಟ್ಟಣ ವ್ಯಾಪ್ತಿಯ ಅರಣ್ಯ ಇಲಾಖೆಯನ್ನು ಹಳಿಯಾಳ ತಾಲೂಕಿನ ವ್ಯಾಪ್ತಿಗೆ ಸೇರ್ಪಡೆ ಮಾಡಲು ಆದೇಶ ಮಾಡಲಾಗಿದೆ. ಅಳ್ನಾವರ ಪಟ್ಟಣದಲ್ಲಿ 15ಕ್ಕಿಂತ ಹೆಚ್ಚು ಕಟ್ಟಿಗೆ ಕೊರೆಯುವ (ಸಾ ಮಿಲ್) ಕೈಗಾರಿಕೆಗಳಿವೆ. ಕರ್ನಾಟಕ ಮತ್ತು ದೇಶದ ವಿವಿಧ ಭಾಗಗಳಿಗೆ ಇಲ್ಲಿಂದ ಉತ್ಕೃಷ್ಟ ಮರಮುಟ್ಟುಗಳು ಮಾರಾಟವಾಗುತ್ತವೆ.

ಧಾರವಾಡ ಜಿಲ್ಲಾ ಭೌಗೋಳಿಕ ವ್ಯಾಪ್ತಿಯ ಅರಣ್ಯ ಇಲಾಖೆಯ ಆಡಳಿತ ಮತ್ತು ಹುಟ್ಟುವಳಿ ಮಾರಾಟ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಇರುವುದು ಸೂಕ್ತ ಮತ್ತು ಸಮಂಜಸ. ಆದರೆ, ಬೇರೆ ಜಿಲ್ಲೆಗೆ ಸೇರ್ಪಡೆ ಮಾಡುತ್ತಿರುವ ಮುಖ್ಯಮಂತ್ರಿ ಅವರ ನಡೆ ಧಾರವಾಡ ಜಿಲ್ಲೆಯ ಬಗ್ಗೆ ತಾತ್ಸಾರ ಬಿಂಬಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ, ಅಳ್ನಾವರ ತಾಲೂಕುಗಳು ಮಲೆನಾಡ ಸೆರಗಿನಲ್ಲಿಯೇ ಬರುವ ಕಾರಣ ಜಿಲ್ಲೆಯ ಗಡಿ ಭಾಗದಲ್ಲಿ ದಟ್ಟ ಕಾಡನ್ನು ಕಾಣಬಹುದು. ಕಲಘಟಗಿ ಕ್ಷೇತ್ರದ ಶಾಸಕರೇ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವುದರಿಂದ ಈ ಕುರಿತು ಪುನಃ ಆದೇಶ ಮಾಡಿಸಿ, ಧಾರವಾಡ ಜಿಲ್ಲೆಯ ವ್ಯಾಪ್ತಿಗೆ ಅರಣ್ಯ ಇಲಾಖೆಯ ವ್ಯಾಪ್ತಿಯನ್ನು ಉಳಿಸಿಕೊಳ್ಳಲು ಯಥಾ ಪ್ರಕಾರ ಮುಂದುವರೆಯಲು ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಅವರು ತಮ್ಮ ಆದೇಶ ತಿದ್ದುಪಡಿ ಮಾಡದೇ ಇದ್ದರೆ ಧಾರವಾಡ ಜಿಲ್ಲಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ವಿಷಯದಲ್ಲಿ ಸುಮ್ಮನಿದ್ದರೆ ಧಾರವಾಡ ಜಿಲ್ಲೆಯನ್ನೇ ತುಂಡಾಗಿಸಿ, ಬೇರೆ ಬೇರೆ ಜಿಲ್ಲೆಗಳಿಗೆ ಹಂಚಿದರೂ ಆಶ್ಚರ್ಯಪಡಬೇಕಿಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಆತಂಕ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net