ಸಿಎಸ್​ಆರ್​ ಹಣ ಹೊರರಾಜ್ಯಕ್ಕೆ ಏಕೆ?

DISHA MEETING
Published on

ಕೋಲಾರ: ಜಿಲ್ಲೆಯಲ್ಲಿ ಸಾಕಷ್ಟು ಕಂಪನಿಗಳಿವೆ. ಆದರೆ, ಹಲವು ಕಾರ್ಖಾನೆಗಳು ಇಲ್ಲಿ ಸೌಲಭ್ಯ ಪಡೆದುಕೊಂಡು ಹೊರ ರಾಜ್ಯಕ್ಕೆ ಅನುದಾನ ಕೊಡುತ್ತಿವೆ. ಇನ್ನಾದರೂ ಕಂಪನಿಗಳನ್ನು ವಿಶ್ವಾಸಕ್ಕೆ ಪಡೆದು ಸಿಎಸ್​ಆರ್​ ಅನುದಾನ ಬೇರೆ ರಾಜ್ಯಕ್ಕೆ ಹೋಗದಂತೆ ಎಚ್ಚರ ವಹಿಸಬೇಕು ಎಂದು ಸಂಸದ ಎಂ.ಮಲ್ಲೇಶ್​ ಬಾಬು ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಿಶಾ ಸಭೆಯಲ್ಲಿ ಮಾತನಾಡಿ, ಸಿಎಸ್​ಆರ್​ ಬಗ್ಗೆ ಸಂಸತ್​ನಲ್ಲಿ ಧ್ವನಿ ಎತ್ತಿದ ಕಾರಣ ಕೆಲ ಕಂಪನಿಗಳ ಮುಖ್ಯಸ್ಥರು ಸಂಪರ್ಕಿಸಿದ್ದು, ಈಗಿನಿಂದಲೇ ಪ್ರತಿ ಕ್ಷೇತ್ರಕ್ಕೂ ಅನುದಾನ ಸಮಾನವಾಗಿ ಹಂಚಿಕೆ ಮಾಡಲು ಜಿಲ್ಲಾಧಿಕಾರಿ ಕ್ರಮವಹಿಸಬೇಕು ಎಂದರು.

ಡಿಐಸಿ ಜಂಟಿ ನಿರ್ದೇಶಕ ನಾಗೇಶ್​ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ, ಆರೋಗ್ಯ, ಶಿಕ್ಷಣ ಉದ್ದೇಶಕ್ಕೆ ಸಿಎಸ್​ಆರ್​ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದಕ್ಕೆ ಪ್ರಯಿಕ್ರಿಯಿಸಿದ ಮಲ್ಲೇಶ್​ಬಾಬು, ಮುಗಿದ ಕಥೆ ಬೇಡ, ಮುಂದಿನ ಸಾಲಿನಿಂದ ಆಗಬೇಕಾಗಿರುವ ಕೆಲಸದ ಕಡೆ ಗಮನ ಕೊಡಿ, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಭೆ ಸೇರಿ ಅನುದಾನ ಜಿಲ್ಲೆಗೆ ವಿನಿಯೋಗಿಸಿಕೊಳ್ಳಲು ಮುಂದಾಗಬೇಕು ಎಂದು ಸೂಚಿಸಿದರು.

ಜಿಲ್ಲೆ ವ್ಯಾಲ್ತಿಯಲ್ಲಿ 36 ಕಿಮೀ ಚೆನ್ನೆ$&ಬೆಂಗಳೂರು ಕಾರಿಡಾರ್​ ನಿಮಾರ್ಣದ ನೆಪದಲ್ಲಿ ಕೆರೆಗಳಿಂದ ಹೆಚ್ಚು ಮಣ್ಣು ತೆಗೆಯಲಾಗಿದೆ. ಇದರಿಂದ ರಸ್ತೆಗಳು ಹಾನಿಯಾಗಿವೆ. ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದ್ದು, ಸರಿಪಡಿಸಬೇಕು ಎಂದು ಹೈವೇ ಇಂಜನಿಯರ್​ಗೆ ಸೂಚಿಸಿದರು.

ವಿಧಾನ ಪರಿಷತ್​ ಸದಸ್ಯ ಇಂಚರ ಗೋವಿಂದರಾಜು, ಎಸ್ಪಿ ಶಾಂತಕುಮಾರ್​ ಇದ್ದರು.

ವೀರಗಲ್ಲು ಪಾರ್ಕ್​ ನಿಮಾರ್ಣ

ಆವಣಿ, ಹುನಕುಂದ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ವೀರಗಲ್ಲು ಪಾರ್ಕ್​ ನಿಮಾರ್ಣ ಮಾಡಲಾಗಿದೆ. ಇನ್ನು ಹೆಚ್ಚು ಪಾರ್ಕ್​ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್​ ತಿಳಿಸಿದರು. ಪ್ರತಿ ಗ್ರಾಮದ ಸ್ಮಶಾನಗಳ ಒತ್ತುವರಿ ತೆರವು ಮಾಡಿ ಪಂಚಾಯಿತಿಯಿಂದಲೇ ಕಾಂಪೌಂಡ್​ ನಿಮಾರ್ಣ ಮಾಡಲು ಜಿಪಂನಿಂದ ಸುತ್ತೋಲೆ ಹೊರಡಿಸಿ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಲಹೆ ನೀಡಿದರು.

ಕಚೇರಿಗೆ ಬೀಗ ಹಾಕಿದ್ದು ಏಕೆ?

ತಾಲೂಕು ಅರಣ್ಯ ಅಧಿಕಾರಿ ವರ್ಗಾವಣೆಯಾದರೂ ಕಚೇರಿಗೆ ಬೀಗ ಹಾಕಿಕೊಂಡು ಹೋಗುತ್ತಾರೆ. ಇದರ ಅರ್ಥ ಏನು, ನಾವೆಲ್ಲ ಎಲ್ಲೀದಿವಿ ಎಂದು ಶಾಸಕ ಸಮೃದ್ಧಿ ಮಂಜುನಾಥ್​ ಕಿಡಿಕಾರಿದರು. ಇದಕ್ಕೆ ಉತ್ತರಿಸಿದ ಡಿಸಿಎ್​ ಸರೀನಾ, ಹಿರಿಯ ಅಧಿಕಾರಿಯ ದೂರವಾಣಿ ಕರೆ ಸ್ವೀಕರಿಸುವುದಿಲ್ಲ, ಈ ವಿಚಾರವನ್ನು ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ನಾನು ಹುಚ್ಚಾಸ್ಪತ್ರೆಯಿಂದ ಬಂದಿಲ್ಲ

ಮುಳಬಾಗಿಲು ತಾಲೂಕಿನ ಫಲಾನುಭವಿಗಳಿಗೆ ಯಾವುದೇ ಯೋಜನೆಯಡಿ ಸೌಲಭ್ಯ ನೀಡಿಲ್ಲ ಏಕೆ ಎಂದು ಸಮೃದ್ಧಿ ಮಂಜುನಾಥ್​ ಗರಂ ಆದರು, ಇದಕ್ಕೆ ಪ್ರತಿಕ್ರಿಯಿಸಿದ ಡಿಐಸಿ ಉಪ ನಿರ್ದೇಶಕ ರವೀಚಂದ್ರ, ಫಲಾನುಭವಿಗಳಿಗೆ ವಿತರಣೆ ಮಾಡಿರುವುದಾಗಿ ಹೇಳಿದರು, ಇದಕ್ಕೆ ಮತ್ತಷ್ಟು ಕೋಪಗೊಂಡ ಶಾಸಕರು ನಾನೇನು ಹುಚ್ಚಾಸ್ಪತ್ರೆಯಿಂದ ಬಂದಿಲ್ಲ, ಮನೆಯಿಂದ ಬಂದಿದ್ದೇನೆ, ಸಮರ್ಪಕ ಉತ್ತರ ಕೊಡಿ ಎಂದು ತರಾಟೆಗೆ ತೆಗೆದುಕೊಂಡರು.

ಘೇರಾವ್​ ಎಚ್ಚರಿಕೆ

ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವ ಕಂಪನಿಗಳಲ್ಲಿ ಸ್ಥಳಿಯರಿಗೆ ವಂಚನೆಯಾಗುತ್ತಿದೆ. ಇದರ ಬಗ್ಗೆ ಪ್ರಶ್ನೆ ಮಾಡಲು ಜನಪ್ರತಿನಿಧಿಗಳಿಗೂ ಅವಕಾಶ ಇಲ್ಲದಂತಾಗಿದೆ. ಎಲ್ಲ ಶಾಸಕರನ್ನು ಒಳಗೊಂಡ ಕೈಗಾರಿಕೆ ಮುಖ್ಯಸ್ಥರ ಸಭೆ ಕರೆಯಲು ಹೇಳಲಾಗಿತ್ತು. ಆದರೆ ಇದುವರೆಗೂ ಆ ಕೆಲಸ ಆಗಿಲ್ಲ ಎಂದು ಸಮೃದ್ಧಿ ಮಂಜುನಾಥ್​ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಗೆ ಒಳ್ಳೆಯದಾಗಲಿ ಎಂಬುದು ನಮ್ಮ ಉದ್ದೇಶ, ಸ್ಥಳಿಯರ ಸಮಸ್ಯೆಗೆ ಸ್ಪಂದಿಸದಿದ್ದರೆ ಘೇರಾವ್​ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ಉತ್ತರಿಸಿದ ಡಿಸಿ ಡಾ.ಎಂ.ಆರ್​.ರವಿಕುಮಾರ್​, ಶೀಘ್ರ ಸಭೆ ಕರೆದು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಾಣ ಹೋದಾಗ ಕಥೆ ಹೇಳಿದರೆ ವ್ಯರ್ಥ

ತಂಬಹಳ್ಳಿಯಿಂದ ಮುಳಬಾಗಲು ತನಕ ಸಮರ್ಪಕ ಸರ್ವೀಸ್​ ರಸ್ತೆಯಿಲ್ಲ. ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಹೈವೇ ಅಧಿಕಾರಿಗಳಿಗೇನಾದರೂ ಜವಾಬ್ದಾರಿ ಇದೆಯಾ ಎಂದು ಶಾಸಕ ಸಮೃದ್ಧಿ ಮಂಜುನಾಥ್​ ಪ್ರಶ್ನಿಸಿದರು. ಹೆದ್ದಾರಿಯಲ್ಲಿ ಅನೇಕ ಸಮಸ್ಯೆಗಳಿವೆ, ಆಯ್ದ ಜಾಗದಲ್ಲಿ ಹೆಡ್​ ಲೈಟ್​ ಹಾಕಿಲ್ಲ. ಅಪಘಾತ ಸಂಭವಿಸಿ ಪ್ರಾಣ ಕಳೆದುಕೊಳ್ಳುವವರಿಗೆ ಕಥೆ ಹೇಳಲು ಸಾಧ್ಯವಿಲ್ಲ. ಇದನ್ನು ತಡೆಯಲು ಕ್ರಮವಹಿಸಬೇಕು ಎಂದು ಎಸ್ಪಿ ಬಿ.ನಿಖಿಲ್​ ಸೂಚಿಸಿದರು.

ಕೋಲಾರಮ್ಮ ಕೆರೆ ದುಸ್ಥಿತಿಗೆ ಹೊಣೆ ಯಾರು?

ನಗರದ ಅಮಾನಿ ಕೋಲಾರಮ್ಮ ಕೆರೆಯಲ್ಲಿ ಸಿಎಸ್​ಆರ್​ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದು ಅವೈಜ್ಞಾನಿಕವಾಗಿದೆ. ಇನ್ಫೋಸಿಸ್​ ಸಂಸ್ಥೆ ಕೆರೆ ಅಭಿವೃದ್ಧಿಗೆ 17 ಕೋಟಿ ರೂ. ಅನುದಾನ ನೀಡಿದ್ದು, ಅಭಿವೃದ್ಧಿ ಹೆಸರಿನಲ್ಲಿ ಕೆರೆಯ ಸ್ವರೂಪವನ್ನೇ ನಾಶ ಮಾಡಲಾಗಿದೆ. ಇದಕ್ಕೆ ಹೊಣೆಯಾರು ಎಂದು ಸಂಸದ ಎಂ.ಮಲ್ಲೇಶ್​ ಬಾಬು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್​ ಹರಿಕೃಷ್ಣ, ಆನಂದ್​ ಮಲ್ಲೆಗೆವಾಡ್​ ಸಂಸ್ಥೆ ಕೆಲಸ ಮಾಡುತ್ತಿದ್ದು, ದೂರುಗಳು ಬಂದ ನಂತರ ಕೆಲಸ ನಿಲ್ಲಿಸಲಾಗಿದೆ ಎಂದು ತಿಳಿಸಿದರು. ಸಂಸತ್​ನಲ್ಲಿ ಇನ್ಫೋಸಿಸ್​ ಸಂಸ್ಥೆಯ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನು ಭೇಟಿ ಆದಾಗ ಈ ವಿಚಾರ ಅವರ ಗಮನಕ್ಕೆ ತರಲಾಯಿತು. ಇದಕ್ಕೆ ಅವರು ವಿಷಾದ ವ್ಯಕ್ತಪಡಿಸಿದರು. ಇದರಲ್ಲಿ ಅಧಿಕಾರಿಗಳ ವೈಲ್ಯ ಇದೆ ಎಂದು ಮಲ್ಲೇಶ್​ ಬಾಬು ಕಿಡಿಕಾರಿದರು.

ವಿಧಾನ ಪರಿಷತ್​ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಮಳೆ ಬಂದರೆ ನೀರು ಬಡಾವಣೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗುವ ಸಾಧ್ಯತೆಯಿದೆ. ಈ ಬಗ್ಗೆ ದಿನ ಪತ್ರಿಕೆಗಳಲ್ಲೂ ಸುದ್ದಿ ಪ್ರಕಟಗೊಂಡಿದೆ. ಇದಕ್ಕೆಲ್ಲ ಹೊಣೆ ಯಾರು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲೇಶ್​ ಬಾಬು, ಸ್ಥಳ ಪರಿಶೀಲನೆ ಮಾಡೊಣ, ಲೋಪಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

 ಬೆಳಕು ಚೆಲ್ಲಿದ್ದ ವಿಜಯವಾಣಿ

ಡಿಪಿಆರ್​ಗೆ ಅನುಮೋದನೆ ಇಲ್ಲದೆ ಕಾಮಗಾರಿ ಕುರಿತು "ವಿಜಯವಾಣಿ'ಯಲ್ಲಿ ಬೆಳಕು ಚೆಲ್ಲಲಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಇಲಾಖೆ ಇಂಜಿನಿಯರ್​ಗೆ ಪತ್ರ ಬರೆದು ವರದಿ ನೀಡುವಂತೆ ಸೂಚಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net