ಡಿಸಿಎಂ ಇವತ್ತು ಯಾಕೆ ಸಿಟಿ ರೌಂಡ್ಸ್ ಮಾಡಲಿಲ್ಲ?; ಕುಮಾರಸ್ವಾಮಿ ಪ್ರಶ್ನೆ

DKS-HDK
Supporters of Karnataka Congress Senior Leader DK Shivakumar celebrate by bursting crackers and greet him for his appointment as Karnataka Congress president at his residence in Sadashivnagar, in Bengaluru on Wednesday 11th March 2020 Pics: www.pics4news.com
Published on

ಬೆಂಗಳೂರು: ಭಾರೀ ಪ್ರಮಾಣದಲ್ಲಿ ಮಳೆ ಸುರಿದರೂ ಡಿಸಿಎಂ ಸಾಹೇಬರು ಯಾಕೆ ಸಿಟಿ ರೌಂಡ್ಸ್ ಕೈಗೊಂಡಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದರು.

ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆ ಆಗಿದ್ದರೂ ಅವರು ಇನ್ನೂ ಯಾಕೋ ನಗರ ಪ್ರದಕ್ಷಿಣೆಗೆ ಹೋಗಿಲ್ವಾ? ಶೋ ಕೊಡುವುದಕ್ಕೆ ಕಳೆದ ವಾರ ಹೋಗಿದ್ದರಲ್ಲ? ಆಗ ಏನು ಕ್ರಮ ಕೈಗೊಂಡಿದ್ದರು ಇವರು? ಕೆರೆಗಳನ್ನು ನುಂಗಿ ನೀರು ಕುಡಿದರಲ್ಲಾ? ಯಾವ ಪುರುಷಾರ್ಥಕ್ಕೆ ನಗರ ಪ್ರದಕ್ಷಿಣೆ ಮಾಡುತ್ತಾರೆ? ಹೋಲ್ ನೈಟ್ ಓಡಾಡ್ತೀನಿ ಅಂತ ಹೇಳುತ್ತಿದ್ದರು. ಅದೇನು ನಿದ್ದೆ ಮಾಡ್ತಾ ಇದ್ರೊ ಗೊತ್ತಿಲ್ಲ ಎಂದು ಕುಟುಕಿದರು.

ಪ್ರಜ್ವಲ್ ಪ್ರಕರಣ ಸರ್ಕಾರಕ್ಕೆ ಬಿಟ್ಟಿದ್ದು

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣ ವಿಚಾರ ಏನಿದ್ದರೂ ತನಿಖೆ ಮಾಡುತ್ತಿರುವ ಎಸ್ ಐಟಿ ಹಾಗೂ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು.

ವಿದೇಶದಿಂದ ಪ್ರಜ್ವಲ್ ವಾಪಸ್ ಬಂದಿದ್ದಾರೆ. ತನಿಖೆ ನಡೆಯುತ್ತಿದೆ. ಅವರು ಗೆದ್ದ ಮೇಲೆ ಏನೂ ಅಂತ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು. ಭಾವಾನಿ ರೇವಣ್ಣ ಅವರಿಗೆ ನೋಟೀಸ್ ನೀಡಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನು ಪ್ರಕಾರ ಭವಾನಿ ರೆವಣ್ಣ ಅವರಿಗೆ ನೋಟೀಸ್ ಕೊಟ್ಟಿದ್ದಾರೆ. ಅದರ ಬಗ್ಗೆ ನಾನು ಪದೇ ಪದೆ ಮಾತನಾಡುವುದಿಲ್ಲ ಎಂದರು.

ಕಾಂಗ್ರೆಸ್‌ನವರು ನಾಳೆವರೆಗೆ ಖುಷಿಯಾಗಿರಲಿ:

ಇದು ಮೋದಿ ಎಕ್ಸಿಟ್ ಪೋಲ್, ಮೀಡಿಯಾ ಎಕ್ಸಿಟ್ ಪೋಲ್ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅದು ಅವರ ಅಭಿಪ್ರಾಯ. ಮಂಗಳವಾರ ಮಧ್ಯಾಹ್ನದವರೆಗೆ ಅವರು ಸಂತೋಷವಾಗಿರಲಿ. ಅವರ ಸಂತೋಷಕ್ಕೆ ನಾನು ಯಾಕೆ ಅಡ್ಡಿಪಡಿಸಲಿ ಎಂದರು.

ಲೋಕಸಭೆ ಚುನಾವಣೆಯಲ್ಲಿ ನಾವು ರಾಜ್ಯದಲ್ಲಿ ಕೊನೆಪಕ್ಷ 25 ಸೀಟು ಗೆಲ್ಲುತ್ತೇವೆ. ಮತಗಟ್ಟೆ ಸಮೀಕ್ಷೆ ಇದನ್ನೇ ಹೇಳುತ್ತಿದೆ. ಜೆಡಿಎಸ್ ಪಕ್ಷ ಮೂರು ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net