

ಶಿವಮೊಗ್ಗ: ಅಲ್ಲಮಪ್ರಭು (ಅಲ್ಲ, ಅಮ್ಮ, ಪ್ರಭು) ಹೆಸರಲ್ಲಿನ ಮೂರು ಧರ್ಮಗಳೂ ಸೇರಿದ್ದು ಬಳ್ಳಿಗಾವಿಯಲ್ಲಿರುವ ಅಲ್ಲಮಪ್ರಭು ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವುದಕ್ಕೆ ನಮ್ಮ ಸರ್ಕಾರ ಸಿದ್ಧವಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಜಿಲ್ಲೆಯಲ್ಲಿ ಕೆಲವರು ವೈಯಕ್ತಿಕವಾಗಿ ಅಭಿವೃದ್ಧಿ ಆಗಿದ್ದಾರೆ. ಹಲವಾರು ಮಠ, ಮಂದಿರಗಳ ಅಭಿವೃದ್ಧಿಯೂ ಆಗಿದೆ. ಆದರೆ ಶಿಕಾರಿಪುರ ಕ್ಷೇತ್ರದಲ್ಲಿರುವ ಬಳ್ಳಿಗಾವಿಯಂಥ ಧಾರ್ಮಿಕ ಕ್ಷೇತ್ರ ಯಾಕೆ ಅಭಿವೃದ್ಧಿ ಆಗಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪುರಾತತ್ವ ಇಲಾಖೆ ವ್ಯಾಪ್ತಿಯಡಿ ಬಂದರೂ ಕ್ಷೇತ್ರವನ್ನು ಅಭಿವೃದ್ಧಿ ಮಾಡಿಲ್ಲ. ಮಹಾನ್ ವ್ಯಕ್ತಿಯ ಕ್ಷೇತ್ರವನ್ನು ನಿರ್ಲಕ್ಷೃ ಮಾಡಿದ್ದು ಸರಿಯಲ್ಲ. ಈಗ ನಮ್ಮ ಸರ್ಕಾರ ಅಧಿಕಾರದಲ್ಲಿರುವ ಕಾರಣ ಆ ಕ್ಷೇತ್ರವನ್ನು ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬುದರ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಆಗ ನೋವಾಗಲಿಲ್ವಾ: ರಾಘವೇಂದ್ರ ಕಿಡಿ
ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಬಳ್ಳಿಗಾವಿಯ ಅಲ್ಲಮಪ್ರಭುವಿನ ಜನ್ಮಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿ ನೋಡಿ ಮನಸ್ಸಿಗೆ ನೋವಾಗಿದೆ ಎಂದಿದ್ದಾರೆ. ಸೊರಬ ಕ್ಷೇತ್ರದಿಂದ ಎರಡು ಬಾರಿ ಗೆದಿದ್ದು ಅದೇ ರಸ್ತೆಯಲ್ಲಿ ಹೋಗುವಾಗ ನೋವಾಗಿರಲಿಲ್ಲ. ಇದೀಗ ಅವರಿಗೆ ನೋವಾಗಿದೆ ಎಂದು ರಾಘವೇಂದ್ರ ಕಿಡಿಕಾರಿದರು. ನಾನು ಪುರಾತತ್ವ ಇಲಾಖೆಯಿಂದ ಅಭಿವೃದ್ಧಿಗೆ ಸಹಕರಿಸಿದ್ದೇನೆ. 3 ಕೋಟಿ ರೂ. ಅನುದಾನ ಕೊಡಿಸಿದ್ದೇನೆ. ಮೊದಲ ಕಂತಿನ 50 ಲಕ್ಷ ರೂ. ಈ ವಿರಕ್ತಮಠಕ್ಕೆ ಜಮವಾಗಿದೆ. 2ನೇ ಕಂತು ಬಿಡುಗಡೆಯಾಗುವ ವೇಳೆ ಕಾಂಗ್ರೆಸ್ ತಡೆಹಾಕಿ ಕೊಟ್ಟ ಅನುದಾನವನ್ನೂ ವಾಪಸ್ ನೀಡಲು ಸೂಚಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.