ಬ್ರಾಹ್ಮಣರು ರಾಮನಿಗೆ ನೀಡುವಷ್ಟು ಪ್ರಾಮುಖ್ಯತೆ ವಾಲ್ಮೀಕಿಗೆ ಏತಕ್ಕೆ ನೀಡುತ್ತಿಲ್ಲ?

valmiki
Published on

ಮೈಸೂರು: ಬ್ರಾಹ್ಮಣ ಸಮುದಾಯದವರು ರಾಮನಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ರಾಮಾಯಣ ರಚಿಸಿದ ವಾಲ್ಮೀಕಿ ಮಹರ್ಷಿಗೆ ನೀಡುತ್ತಿಲ್ಲ. ಕೋಟ್ಯಾಂತರ ರೂ.ವೆಚ್ಚ ಮಾಡಿ ರಾಮಮಂದಿರ ಕಟ್ಟುವ ಬ್ರಾಹ್ಮಣರು ವಾಲ್ಮೀಕಿ ಜಯಂತಿ ಆಚರಿಸಲು ಏತಕ್ಕೆ ಆಸಕ್ತಿ ತೋರುತ್ತಿಲ್ಲ? ಸತ್ಯವನ್ನು ಹೇಳುವ ಕಾಲ ಬಂದಿದೆ ಎಂದು ನಿವೃತ್ತ ಉಪನ್ಯಾಸಕ ಆರ್. ಮಹದೇವಪ್ಪ ಹೇಳಿದರು.

ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ನಗರದ ನಜರ್‌ಬಾದ್‌ನ ಲೋಕೋಪಯೋಗಿ ಇಲಾಖೆ ಅತಿಥಿಗೃಹದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ರಾಮ ಎಂಬುದು ಮಹಾಕಾವ್ಯದಲ್ಲಿ ಬರುವ ಪಾತ್ರ, ಆ ಪಾತ್ರವನ್ನೇ ದೇವರಾಗಿ ಪರಿವರ್ತಿಸಿದರು. ರಾಮನನ್ನು ದೇವರಾಗಿ ವಾಲ್ಮೀಕಿ ಚಿತ್ರಿಸಿಲ್ಲ. ಇಡೀ ದೇಶವನ್ನು ಸುತ್ತಿ ಕತೆಯನ್ನು ಕಲ್ಪಿಸಿಕೊಂಡು ವಾಲ್ಮೀಕಿ ರಾಮಾಯಣ ರಚಿಸಿದ್ದಾರೆ. ದೇಶದ ಬೆಟ್ಟ ಗುಡ್ಡಗಳು, ನದಿ ತೊರೆಗಳು, ಜನರ ಜೀವನವನ್ನು ನೋಡಿ ಅರ್ಥಮಾಡಿಕೊಂಡು ನಂತರ ರಾಮಾಯಣವನ್ನು ರಚಿಸಿದರು ಎಂದರು.

ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಬರುವ ಪಾತ್ರದಾರಿ ರಾಮನಿಗೆ ನೀಡುವ ಪ್ರಾಮುಖ್ಯತೆಯನ್ನು ವಾಲ್ಮೀಕಿ ಮಹರ್ಷಿಗೆ ನೀಡುತ್ತಿಲ್ಲ. ದೇಶದ ಎಲ್ಲೆಡೆ ರಾಮನನ್ನು ಪೂಜಿಸಲಾಗುತ್ತದೆ. ಅದೇ ರೀತಿ ಎಲ್ಲ ಕಡೆಗಳಲ್ಲಿ ಹನುಮ ಜಯಂತಿ ಆಚರಿಸಲಾಗುತ್ತಿದ್ದು, ಹನುಮ ಜಯಂತಿಯಲ್ಲಿ ಎಲ್ಲ ಸಮುದಾಯದವರು ಭಾಗವಹಿಸುತ್ತಿದ್ದಾರೆ. ಆದರೆ, ವಾಲ್ಮೀಕಿ ಜಯಂತಿಗೆ ಎಲ್ಲ ಸಮುದಾಯಗಳು ಒಟ್ಟಿಗೆ ಸೇರುವುದಿಲ್ಲ. ನಮ್ಮ ಸಮುದಾಯದವರಿಗೆ ಸತ್ಯ ತಿಳಿದರೆ ಅವರು ಹನುಮ ಜಯಂತಿಗೆ ಹೋಗುವುದನ್ನು ನಿಲ್ಲಿಸುತ್ತಾರೆ ಎಂದು ಹೇಳಿದರು.

ರಾಮಾಯಣವನ್ನು ಒಂದು ವರ್ಗದವರು ಮಹಾಕಾವ್ಯವಾಗಿ ನೋಡುತ್ತಿಲ್ಲ. ರಾಮಾಯಣವನ್ನು ಅವರು ಪ್ರಚಾರಕ್ಕೆ ಬಳಸುತ್ತಿದ್ದಾರೆ. ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ವಾಲ್ಮೀಕಿ ಮಹರ್ಷಿಗೆ ಸ್ಥಾನ ದೊರೆಯಬೇಕು. ವಾಲ್ಮೀಕಿ ಪ್ರತಿಮೆಯನ್ನು ಅಯೋಧ್ಯೆಯಲ್ಲಿ ನಿರ್ಮಿಸಿದರೆ ಮಾತ್ರ ವಾಲ್ಮೀಕಿಗೆ ಗೌರವ ನೀಡಿದಂತಾಗುತ್ತದೆ ಎಂದರು.

ಸಂಘದ ಉಪಾಧ್ಯಕ್ಷ ಮಹದೇವ ನಾಯಕ ಮಾತನಾಡಿ, ಗುರುಕುಲವನ್ನು ಕಟ್ಟಿಸಿ, ಮಹಿಳೆ ಮತ್ತು ಮಕ್ಕಳಿಗೆ ಆಶ್ರಯ ನೀಡಿದ ಮೊಟ್ಟ ಮೊದಲ ಮುನಿ ವಾಲ್ಮೀಕಿ. ರಾಮಾಯಣ ಕಾಲದಲ್ಲಿ ಅನ್ಯಾಯಕ್ಕೆ ಒಳಗಾದ ಸೀತೆಗೆ ವಾಲ್ಮೀಕಿ ಮಹರ್ಷಿ ಆಶ್ರಯ ನೀಡಿದರು. ಆಧುನಿಕ ಕಾಲದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೆಣ್ಣುಮಕ್ಕಳಿಗೆ ಸಂವಿಧಾನ ಮೂಲಕ ನ್ಯಾಯ ನೀಡಿದರು ಎಂದರು.

ವೇದಿಕೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಡಾ.ಡಿ. ಚಂದ್ರಶೇಖರ್, ಮಾಜಿ ಅಧ್ಯಕ್ಷ ಹರೀಶ್ ಬಾಬು, ಜಿಲ್ಲಾಧ್ಯಕ್ಷ ಡಾ.ಎಂ.ಡಿ. ಶಿವರಾಮಕೃಷ್ಣ, ಗೌರವ ಸಲಹೆಗಾರರಾದ ಜವರಪ್ಪ, ದ್ಯಾವಪ್ಪನಾಯಕ, ಉಪಾಧ್ಯಕ್ಷ ಮಹದೇವ ನಾಯಕ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net