ಸೈಟ್ ಹಂಚಿಕೆಯಾಗದೆ ಹೊಸ ಲೇಔಟ್ ಏಕೆ?: ಡಿಸಿಎಂಗೆ ಪತ್ರ ಬರೆದ ಶಾಸಕ ಸುರೇಶ್‌ಕುಮಾರ್

bda office
Published on

ಬೆಂಗಳೂರು: ಬಿಡಿಎಯಿಂದ ನಿರ್ಮಾಣವಾಗುತ್ತಿರುವ ಲೇಔಟ್‌ಗಳಲ್ಲಿ ಸಾರ್ವಜನಿಕರಿಗೆ ಸೈಟ್ ಹಂಚಿಕೆ ಮಾಡದೆ ಹೊಸದಾಗಿ ಮತ್ತೆ ಲೇಔಟ್‌ಗಳನ್ನು ರಚಿಸುವ ಅಗತ್ಯತೆ ಕುರಿತು ಬಿಜೆಪಿ ಶಾಸಕ ಎಸ್.ಸುರೇಶ್‌ಕುಮಾರ್ ಅವರು ಡಿಸಿಎಂಗೆ ಪತ್ರ ಬರೆದು ಪ್ರಶ್ನಿಸಿದ್ದಾರೆ.

ಪ್ರಸ್ತುತ ಬಿಡಿಎ ಡಾ.ಶಿವರಾಮ ಕಾರಂತ ಲೇಔಟ್ ನಿರ್ಮಿಸುತ್ತಿದ್ದು, ಕಾಮಗಾರಿ ಪೂರ್ಣಗೊಂಡಿಲ್ಲ. ಒಟ್ಟು 3,546 ಎಕರೆ ವಿಸ್ತೀರ್ಣದಲ್ಲಿ 30 ಸಾವಿರ ಸೈಟ್‌ಗಳನ್ನು ರಚಿಸುತ್ತಿದ್ದು, ಅವುಗಳಲ್ಲಿ 10-12 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವುದು ಬಾಕಿ ಇದೆ. ಆದರೆ, ಈವರೆಗೂ ಸಾರ್ವಜನಿಕರಿಗೆ ಸೈಟ್‌ಗಳನ್ನು ಹಂಚಿಕೆ ಮಾಡಿಲ್ಲ. ಒಂದೆಡೆ ಕಾಮಗಾರಿ ಪೂರ್ಣಗೊಳಿಸದೆ, ಇನ್ನೊಂದೆಡೆ ಜನರಿಗೂ ಸೈಟ್ ನೀಡದಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.

ಈ ಹಿಂದೆಯೂ ಕೂಡ ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ ನಿರ್ಮಿಸಿದ್ದರೂ, ಸೈಟ್ ಹಂಚಿಕೆ ಸಮರ್ಪಕವಾಗಿಲ್ಲದೆ ಸಮಸ್ಯೆಯ ಗೂಡಾಗಿದೆ. ಲೇಔಟ್‌ಗಾಗಿ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ ಪರಿಹಾರದ ರೂಪದ ನಿವೇಶನವನ್ನು ಪೂರ್ಣವಾಗಿ ನೀಡಿಲ್ಲ. ಇದರಿಂದಾಗಿ ಇಂದಿಗೂ ರೈತರು ಬಿಡಿಎ ಕಚೇರಿಗೆ ಅಲೆದಾಡುತ್ತಿದ್ದಆರೆ. ಇತ್ತ ಜನರಿಗೂ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ. ಹಳೆಯ ಲೇಔಟ್‌ಗಳಲ್ಲಿ ಶೇ.30-40 ನಿವೇಶನಗಳು ಖಾಲಿ ಇವೆ. ಹೀಗಿರುವಾಗ ಹೊಸ ಬಡಾವಣೆಗಳ ನಿರ್ಮಾಣದ ಅಗತ್ಯವಿದೆಯೇ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಂವೇದನೆ ಬೇಡವೇ?:

ಸದ್ಯ ಬೆಂಗಳೂರು ಪರಿಷ್ಕೃತ ಮಹಾಯೋಜನೆ - 2015 ಮತ್ತು ವಲಯ ನಿಯಮಾವಳಿ ಅನ್ವಯ ಕಾಯ್ದಿರಿಸಲಾಗಿದ್ದ ಕೃಷಿ ಭೂಮಿಯನ್ನು ಭೂ ಬದಲಾವನೆ ಹೆಸರಿನಲ್ಲಿ ವಸತಿ ಹಾಗೂ ಕೈಗಾರಿಕೆ ಉದ್ದೇಶಕ್ಕೆ ಬದಲಾವಣೆ ಮಾಡಲಾಗಿದೆ. ಇದರಿಂದ ಕೃಷಿ ಭೂಮಿ ಕ್ಷೀಣವಾಗಿದ್ದು ಹಸಿರು ವಲಯವೂ ಕಡಿಮೆಯಾಗಿದೆ. ಇದು ವಾಯು ಮಾಲಿನ್ಯಕ್ಕೆ ಎಡೆಮಾಡಿಕೊಟ್ಟಿದ್ದು ಶುದ್ಧಗಾಳಿಗೆ ಹಣ ತೆರಬೇಕಾದ ಸ್ಥಿತಿ ಬರಲಿದೆ. ಈ ವಿಷಯದ ಕುರಿತು ಡಿಸಿಎಂಗೆ ಸಂವೇದನೆ ಬೇಕಲ್ಲವೇ ಎಂದು ಸುರೇಶ್‌ಕುಮಾರ್ ಖಾರವಾಗಿ ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net