

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ದೀಪಾವಳಿ ನಂತರ ಎಲ್ಲ ತರಕಾರಿಗಳ ಹೋಲ್ಸೇಲ್ ದರ ಏರಿಕೆಯಾಗುತ್ತಿದ್ದು ರೈತರ ಮೊಗದಲ್ಲಿ ಹರ್ಷ ತಂದಿದೆ.
ದಾವಣಗೆರೆ ತರಕಾರಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಪ್ರತಿ 23 ಕೆಜಿ ಬಾಕ್ಸ್ಗೆ 350 ರಿಂದ 400 ರೂ.ಗೆ ಖರೀದಿಯಾಗುತ್ತಿದೆ. ಕಳೆದ ವಾರ ಟೊಮ್ಯಾಟೊ, ಮೆಣಸಿನಕಾಯಿ, ಹೀರೆ, ಜವಳಿ, ಬೀನ್ಸ್ ದರ ಕುಸಿತ ಕಂಡಿದ್ದವು. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಹೋಲ್ ಸೇಲ್ ದರ ಹೆಚ್ಚಾಗುತ್ತಿವೆ ಎನ್ನುತ್ತಾರೆ ತರಕಾರಿ ವರ್ತಕರು.
ದಾವಣಗೆರೆ ತಾಲೂಕಿನ ಆನಗೋಡು, ಮಾಯಕೊಂಡ, ಅಣಜಿ ಹೋಬಳಿಗಳ ಹಲವು ಗ್ರಾಮಗಳ ಕೃಷಿಕರು ಬೋರ್ವೆಲ್ ನೀರಾವರಿಗೆ ಟೊಮ್ಯಾಟೊ ಬೆಳೆದಿದ್ದು, ಇದರ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 15 ರಿಂದ 20 ರೂ.ಗೆ ಮಾರಾಟವಾಗುತ್ತಿದೆ. ಈ ಬೆಳವಣಿಗೆಯಿಂದ ಇನ್ನೂ ದರದಲ್ಲಿ ಏರಿಕೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ರೈತರು.
ಸಸಿ ನಾಟಿ, ಗೂಟ ಹಾಕುವುದು, ವಯರ್ ಹುರಿಕಟ್ಟುವುದು, ಕಳೆ ಕೀಳುವುದು, ರಸಗೊಬ್ಬರ, ಕೀಟನಾಶಕ, ಕೂಲಿ ಕಾರ್ವಿುಕರ ಖರ್ಚು ಸೇರಿ ಕಟಾವಿನವರೆಗೆ ಒಂದು ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆಯಲು 90 ಸಾವಿರದಿಂದ ಒಂದು ಲಕ್ಷ ರೂ. ಖರ್ಚಾಗುತ್ತದೆ.
ಹಾಗಾಗಿ ತರಕಾರಿ, ಹಣ್ಣು, ಹೂವು ಬೆಳೆಗೆ ಸರ್ಕಾರ ಬೆಂಬಲ ಬೆಲೆ ನಿಗದಿಗೊಳಿಸುವ ಮೂಲಕ ರೈತರಿಗೆ ನೆರವಾಗಬೇಕು. ಜತೆಗೆ ಅತಿ ಹೆಚ್ಚು ತರಕಾರಿ, ಹಣ್ಣು, ಹೂವು ಬೆಳೆಯುತ್ತಿರುವ ಆನಗೋಡು, ಮಾಯಕೊಂಡ, ಅಣಜಿ ಹೋಬಳಿಗಳಲ್ಲಿ ಕೋಲ್ಡ್ ಸ್ಟೋರೇಜ್ ಘಟಕಗಳನ್ನು ನಿರ್ಮಾಣ ಮಾಡಬೇಕು ಎನ್ನುವುದು ಈ ಭಾಗದ ಕೃಷಿಕರ ಬಹುದಿನದ ಬೇಡಿಕೆಯಾಗಿದೆ.
ಒಂದು ಎಕರೆ ಜಮೀನಿನಲ್ಲಿ 10 ಸಾವಿರ ಟೊಮ್ಯಾಟೊ ಸಸಿ ನಾಟಿ ಮಾಡಿದ್ದು ಪ್ರಸ್ತುತ ಕಟಾವಿಗೆ ಬಂದಿದೆ. 600 ರಿಂದ 700 ಬಾಕ್ಸ್ ಟೊಮ್ಯಾಟೊ ಇಳುವರಿ ಬರಬಹುದು. ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುತ್ತಿದ್ದು ಉತ್ತಮ ಆದಾಯ ಬರುವ ನಿರೀಕ್ಷೆ ಇದೆ. | ನಿಂಗರಾಜ್, ಟೊಮ್ಯಾಟೊ ಬೆಳೆಗಾರ, ಹೆದ್ನೇ. ದಾವಣಗೆರೆ ಜಿಲ್ಲೆಯಲ್ಲಿ 250 ಹೆಕ್ಟೇರ್ಗಿಂತ ಹೆಚ್ಚಿನ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆದಿದ್ದು ಈಗಾಗಲೇ ಕಟಾವಿಗೆ ಬಂದಿದೆ. ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಏರಿಕೆಯಾಗುತ್ತಿರುವುದರಿಂದ ರೈತರು ಹೆಚ್ಚಿನ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ. ಹೊಸದಾಗಿ 300 ಹೆಕ್ಟೇರ್ಗಿಂತ ಹೆಚ್ಚಿನ ಪ್ರದೇಶದಲ್ಲಿ ಟೊಮ್ಯಾಟೊ ಸಸಿ ನಾಟಿ ಮಾಡಿರುವ ಅಂದಾಜಿಸಲಾಗಿದೆ. | ರಾಘವೇಂದ್ರ ಪ್ರಸಾದ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ, ದಾವಣಗೆರೆ ತಾಲೂಕು. ದೀಪಾವಳಿ ನಂತರ ಮಾರುಕಟ್ಟೆಗೆ ಅಷ್ಟೇನೂ ತರಕಾರಿ ಬರುತ್ತಿಲ್ಲ. ಬೇರೆಡೆಯಿಂದ ಹೋಲ್ಸೇಲ್ ವರ್ತಕರು ಮಾರುಕಟ್ಟೆಗೆ ಬರುತ್ತಿದ್ದು, ತರಕಾರಿಗಳ ಬೆಲೆ ಕೊಂಚ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. | ಸಿದ್ದಣ್ಣ, ತರಕಾರಿ ವ್ಯಾಪಾರಿ, ದಾವಣಗೆರೆ.