ಅಖಂಡ ಜಿಲ್ಲೆ ವಿಭಜನೆಗೆ ಆಕ್ರೋಶ: ಬಳ್ಳಾರಿಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ

071220 Ballari District Partation Protest
ಜಿಲ್ಲೆ ವಿಭಜನೆ ಬಳ್ಳಾರಿಯ ಬೆಂಗಳೂರು ರಸ್ತೆಯಲ್ಲಿ ವಿವಿಧ ಸಂಘಟನೆಗಳು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು.
Published on

ಬಳ್ಳಾರಿ: ಜಿಲ್ಲೆ ವಿಭಜನೆ ವಿರೋಧಿಸಿ ನಗರದಲ್ಲಿ ಸೋಮವಾರ ಅಖಂಡ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಎನ್.ನಾರಾಯಣ ರಾವ್ ಉದ್ಯಾನದಿಂದ ಆರಂಭವಾದ ಮೆರವಣಿಗೆ ಗಡಿಗಿ ಚನ್ನಪ್ಪ ವೃತ್ತ , ಬೆಂಗಳೂರು ರಸ್ತೆ, ತೇರು ಬೀದಿ, ಬ್ರಾಹ್ಮಣ ಬೀದಿ ಮೂಲಕ ಡಿಸಿ ಕಚೇರಿ ತಲುಪಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು. ಜನರ ಅಭಿಪ್ರಾಯ ಪಡೆಯದೆ ಸರ್ಕಾರ ಅಖಂಡ ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಜಿಲ್ಲೆ ಘೋಷಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ಭಾಷಾ ಸಂಘರ್ಷ, ಸಂಪನ್ಮೂಲಗಳ ಹಂಚಿಕೆ, ಗಡಿ ಸಮಸ್ಯೆ ಸೇರಿ ಇತರ ತೊಂದರೆಗಳು ತಲೆದೋರಲಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ವಿಭಜನೆಯ ಜಿಲ್ಲೆ, ತಾಲೂಕುಗಳಲ್ಲಿ ಅಭಿವೃದ್ಧಿ ಕುಂಠಿತಗೊಂಡಿರುವ ಬಗ್ಗೆ ಸರ್ಕಾರದ ಅಂಕಿ-ಅಂಶಗಳೇ ಸೂಚಿಸುತ್ತವೆ. ಅಭಿವೃದ್ಧಿ ಮಾಡುವಲ್ಲಿ ವಿಫಲಗೊಂಡಿರುವ ಸರ್ಕಾರ ರಾಜಕೀಯ ಸ್ವಾರ್ಥಕ್ಕಾಗಿ ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿದೆ. ಕೂಡಲೇ ಜಿಲ್ಲೆ ವಿಭಜನೆ ನಿರ್ಧಾರ ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮುಖಂಡರಾದ ದರೂರು ಪುರುಷೋತ್ತಮ ಗೌಡ, ಎಸ್.ಪನ್ನರಾಜ್, ಕೆ.ಎರ‌್ರಿಸ್ವಾಮಿ, ಸಿದ್ಮಲ್ ಮಂಜುನಾಥ, ಬಿ.ಎಂ.ಪಾಟೀಲ್, ಕೆ.ಬಸಪ್ಪ, ಅಬ್ದುಲ್ ಕಲಾಂ, ಚಾನಾಳ್ ಶೇಖರ್, ಕೊಳಗಲ್ಲು ಅಂಜಿನಿ ಇತರರಿದ್ದರು. ಪ್ರತಿಭಟನೆಗೆ ಮಂಗಳಮುಖಿಯರು ಬೆಂಬಲ ಸೂಚಿಸಿದ್ದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net