ಕರಾವಳಿ-ಮಲೆನಾಡಿನಲ್ಲಿ ಗೆಲ್ಲೋರ್ಯಾರು? ಸೋಲೋರ್ಯಾರು?

Kota-Hegde
ಕಾಂಗ್ರೆಸ್​ ಅಭ್ಯರ್ಥಿ ಕೆ.ಜಯಪ್ರಕಾಶ ಹೆಗ್ಡೆ, ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್​ ಪೂಜಾರಿ.
Published on

ಭದ್ರಕೋಟೆಯಲ್ಲಿ ಕಂಗೊಳಿಸುವರೇ ಕೋಟ? -- ಸಾಧಿಸುವರೇ ಹೆಗ್ಡೆ ಗೆಲುವಿನ ಓಟ?

ಪ್ರಶಾಂತ ಭಾಗ್ವತ, ಉಡುಪಿ
ರಾಜ್ಯದಲ್ಲಿ ಏ.26ರಂದು ಮೊದಲ ಹಂತದ ಚುನಾವಣೆ ಮುಗಿದಿದ್ದು, ಈಗ ಸೋಲು-ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಗೆಲ್ಲೋರು ಯಾರು? ಸೋಲೋರು ಯಾರು ಎಂಬ ಚರ್ಚೆ ಎರಡೂ ಜಿಲ್ಲೆಯಲ್ಲಿ ನಡೆದಿದೆ.

ದಶಕದಿಂದ ಬಿಜೆಪಿ ಭದ್ರಕೋಟೆಯಾದ ಈ ಕ್ಷೇತ್ರದಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಕಮಲ ಅರಳಿಸುತ್ತಾರೋ? ಅಥವಾ ಅನುಭವಿ ರಾಜಕಾರಣಿಯಾದ ಕೈ (ಕಾಂಗ್ರೆಸ್​) ಅಭ್ಯರ್ಥಿ ಕೆ.ಜಯಪ್ರಕಾಶ್​ ಹೆಗಡೆ ಅವರು ಬಿಜೆಪಿ ಕೋಟೆಯನ್ನು ಛಿದ್ರಗೊಳಿಸುತ್ತಾರೋ ಎಂಬ ಕುತೂಹಲ ಕರಾವಳಿ-ಮಲೆನಾಡಿನಲ್ಲಿ ಜನರ ಮನದಲ್ಲೀಗ ಕಾಡತೊಡಗಿದೆ.

ಪೂಜಾರಿಗೆ ಪ್ರಥಮ ಚುನಾವಣೆ

ಈ ಮೊದಲು ವಿಧಾನಸಭೆ ಅಥವಾ ಲೋಕಸಭೆಗೆ ಸ್ಪರ್ಧಿಸಿದ ಅನುಭವ ಇಲ್ಲದ ಬಿಜೆಪಿ ಅಭ್ಯರ್ಥಿ ಕೋಟ ಪೂಜಾರಿ ಎದುರಿಸಿದ ಪ್ರಥಮ ಚುನಾವಣೆ ಇದು. ಗ್ರಾಪಂನಿಂದ ಸಂಸತ್​ ಮೆಟ್ಟಿಲು ಏರಲು ಹೊರಟಿರುವ ಅಪರೂಪದ ರಾಜಕಾರಣಿ. ನೇರವಾಗಿ ಯಾವುದೇ ಚುನಾವಣೆ ಎದುರಿಸದಿದ್ದರೂ ವಿಧಾನ ಪರಿಷತ್​ ಸದಸ್ಯರಾಗಿ ನೇಮಕಗೊಂಡು, ಎರಡು ಇಲಾಖೆಗಳ ಸಚಿವರಾಗಿ ಉತ್ತಮ ಆಡಳಿತ ನಡೆಸಿದ ಹೆಗ್ಗಳಿಕೆ ಇವರ ಬೆನ್ನಿಗಿದೆ. ವಿಧಾನ ಪರಿಷತ್​ನ ಪ್ರಸ್ತುತ ವಿರೋಧ ಪಕ್ಷದ ನಾಯಕನೂ ಆಗಿರುವ ಶ್ರೀನಿವಾಸ್​ ಪೂಜಾರಿ, ಸಂಸತ್​ ಚುನಾವಣೆಯ ಸತ್ವ ಪರೀಕ್ಷೆ ಬರೆದಿದ್ದು, ರಿಸಲ್ಟ್​ಗೆ ಕಾಯುತ್ತಿದ್ದಾರೆ.

ಒಮ್ಮೆ ಗೆಲುವು, 2 ಬಾರಿ ಸೋಲು

ಕ್ಷೇತ್ರ ಪುನರ್​ ವಿಂಗಡಣೆ ಬಳಿಕ 2009ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಬಿಜೆಪಿಯ ಡಿ.ವಿ. ಸದಾನಂದ ಗೌಡ ಅವರ ವಿರುದ್ಧ ಕಾಂಗ್ರೆಸ್​ನ ಕೆ.ಜಯಪ್ರಕಾಶ್​ ಹೆಗ್ಡೆ ಸೋಲು ಕಂಡಿದ್ದರು. ಆದರೆ, 2012ರಲ್ಲಿ ರಾಜ್ಯದಲ್ಲಿ ನಡೆದ ರಾಜಕೀಯ ವಿದ್ಯಮಾನದಲ್ಲಿ ಸದಾನಂದ ಗೌಡ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರಿಂದ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ಉಪಚುನಾವಣೆಯಲ್ಲಿ ಜಯಪ್ರಕಾಶ್​ ಹೆಗ್ಡೆ ಅವರು ಬಿಜೆಪಿಯ ವಿ.ಸುನೀಲಕುಮಾರ್​ ಅರನ್ನು ಸೋಲಿಸಿದ್ದರು. ಆದರೆ, 2014ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶೋಭಾ ಕರಂದ್ಲಾಜೆ ವಿರುದ್ಧ ಸೋಲನುಭವಿಸಿದ್ದರು. ಒಮ್ಮೆ ಗೆಲುವು, 2 ಬಾರಿ ಸೋಲು ಕಂಡಿರುವ ಹೆಗ್ಡೆ, ಈ ಬಾರಿ ಜಯದ ನಿರೀಕ್ಷೆಯಲ್ಲಿದ್ದಾರೆ.

ಗೆಲ್ಲೋರ್ಯಾರು? ಸೋಲೋರ್ಯಾರು ಎಂದು ತಿಳಿಯಲು ಫಲಿತಾಂಶದ ದಿನವಾದ ಜೂ.4ರ ವರೆಗೂ ಕಾಯಲೇಬೇಕು.

2009ರ ಲೋಕಸಭಾ ಚುನಾವಣೆ ಫಲಿತಾಂಶ

ಡಿ.ವಿ. ಸದಾನಂದ ಗೌಡ (ಬಿಜೆಪಿ)- 4,01,441 (ಶೇ.48.09)
ಕೆ.ಜಯಪ್ರಕಾಶ್​ ಹೆಗ್ಡೆ (ಕಾಂಗ್ರೆಸ್​)- 3,74,423 (ಶೇ.44.86)
ರಾಧಾ ಸುಂದರೇಶ್​ (ಸಿಪಿಐ)- 24,991 (ಶೇ.2.99)
ಒಟ್ಟು ಮತದಾನ- 8,34,728 (ಶೇ.68.18)
ಗೆಲುವಿನ ಅಂತರ- 27,018 (ಶೇ.3.23)


2012ರ ಲೋಕಸಭಾ ಚುನಾವಣೆ ಫಲಿತಾಂಶ

ಕೆ.ಜಯಪ್ರಕಾಶ್​ ಹೆಗ್ಡೆ (ಕಾಂಗ್ರೆಸ್​)- 3,98,723 (ಶೇ.46.75)
ವಿ.ಸುನೀಲಕುಮಾರ್​ (ಬಿಜೆಪಿ)- 3,52,999 (ಶೇ.41.39)
ಎಸ್​.ಎಲ್​. ಬೋಜೇಗೌಡ (ಜೆಡಿಎಸ್​) -72,080 (ಶೇ.8.45)
ಒಟ್ಟು ಮತದಾನ- 8,52,824 (ಶೇ.68.06)
ಗೆಲುವಿನ ಅಂತರ- 45,724 (ಶೇ.5.36)

2014ರ ಲೋಕಸಭಾ ಚುನಾವಣೆ ಫಲಿತಾಂಶ

ಶೋಭಾ ಕರಂದ್ಲಾಜೆ (ಬಿಜೆಪಿ)- 5,81,168 (ಶೇ.56.20)
ಕೆ.ಜಯಪ್ರಕಾಶ್​ ಹೆಗ್ಡೆ (ಕಾಂಗ್ರೆಸ್​)- 3,99,525 (ಶೇ.38.63)
ವಿ.ಧನಂಜಯಕುಮಾರ್​ (ಜೆಡಿಎಸ್​)-14,895 (ಶೇ.1.44)
ಒಟ್ಟು ಮತದಾನ- 10,34,108 (ಶೇ.74.54)
ಗೆಲುವಿನ ಅಂತರ- 1,81,643 (ಶೇ.17.57).

2019ರ ಲೋಕಸಭಾ ಚುನಾವಣೆ ಫಲಿತಾಂಶ

ಶೋಭಾ ಕರಂದ್ಲಾಜೆ (ಬಿಜೆಪಿ)- 7,18,916 (ಶೇ.62.43)
ಪ್ರಮೋದ್​ ಮಧ್ವರಾಜ್​ (ಜೆಡಿಎಸ್​)- 3,69,317 (ಶೇ.32.07)
ಪಿ.ಪರಮೇಶ್ವರ್​ (ಬಿಎಸ್ಪಿ)-15,947 (ಶೇ.1.38)
ಒಟ್ಟು ಮತದಾನ- 11,51,623 (ಶೇ.76.07)
ಗೆಲುವಿನ ಅಂತರ- 3,49,599 (ಶೇ.30.37)

ಈ ಬಾರಿಯೂ ಮತದಾರರ ಒಲವು ಬಿಜೆಪಿ ಪರವೇ ಇದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಮಲ ಅರಳಲಿದೆ. ಮತದಾರರು ಭಾರತದ ಭವಿಷ್ಯ ರೂಪಿಸುವವರ ಪರವಾಗಿ ಸ್ವಯಂ ಪ್ರೇರಣೆಯಿಂದ ಹಕ್ಕು ಚಲಾಯಿಸಿದ್ದಾರೆ. ಹೀಗಾಗಿ ಪ್ರಜ್ಞಾವಂತ ಮತದಾರರು ನನ್ನ ಕೈ ಬಿಡಲಾರರು ಎಂಬ ಅಚಲ ನಂಬಿಕೆಯಿದೆ. ದೊಡ್ಡ ಅಂತರದಿಂದ ಗೆಲುವು ಸಾಧಿಸುತ್ತೇನೆ. ಕೋಟ ಶ್ರೀನಿವಾಸ್​ ಪೂಜಾರಿ. ಬಿಜೆಪಿ ಅಭ್ಯರ್ಥಿ

ದಶಕದ ಬಳಿಕ ರಾಜ್ಯ-ದೇಶದಲ್ಲಿ ಕಾಂಗ್ರೆಸ್​ ಪರವಾದ ಅಲೆ ಆರಂಭಗೊಂಡಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ನನ್ನ ಗೆಲುವಿಗೆ ಪೂರಕವಾದ ವಾತಾವರಣವಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ, ಈ ಹಿಂದೆ ಸಂಸದನಾಗಿದ್ದಾಗ ಮಾಡಿರುವ ಕೆಲಸ ನನ್ನ ಕೈ ಹಿಡಿಯಲಿದೆ. ಅಲ್ಲದೆ, ಕ್ಷೇತ್ರದ ಜನರಿಗೆ ನನ್ನ ವ್ಯಕ್ತಿತ್ವ ಏನೆಂಬ ಅರಿವೂ ಸಹ ಇದ್ದು, ಗೆಲ್ಲುವ ವಿಶ್ವಾಸವಿದೆ. ಕೆ.ಜಯಪ್ರಕಾಶ ಹೆಗ್ಡೆ. ಕಾಂಗ್ರೆಸ್​ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net