ಆರ್​ಆರ್ ನಗರ ಏರಿಳಿತ: ಮತದಾರ ಯಾರಿಗೆ ಜೈ ಎನ್ನುತ್ತಾನೆ?

RR Nagara
Published on

ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತದಾನಕ್ಕೆ ಕೇವಲ 48 ಗಂಟೆಗಳಷ್ಟೇ ಬಾಕಿ. ಎರಡೂ ಕ್ಷೇತ್ರದಲ್ಲಿ ಮೂರೂ ಪಕ್ಷಗಳ ನಡುವೆ ಬಿರುಸಿನ ಪೈಪೋಟಿ ಇದ್ದರೂ, ಮತದಾರ ಯಾವ ಪಕ್ಷದ ಅಭ್ಯರ್ಥಿಗೆ ಜೈ ಎನ್ನುತ್ತಾನೆ ಎಂಬುದು ಕುತೂಹಲವಾಗಿಯೇ ಉಳಿದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

| ಶ್ರೀಕಾಂತ್ ಶೇಷಾದ್ರಿ, ಬೆಂಗಳೂರು

ಚುನಾವಣೆ ಕಾವು ತೀವ್ರವಾಗಿರುವ ರಾಜರಾಜೇಶ್ವರಿ ನಗರದ ಉಪಚುನಾವಣೆ ಮತದಾನಕ್ಕೆ 48 ಗಂಟೆ ಬಾಕಿ ಇರುವ ಸಂದರ್ಭದಲ್ಲಿ ಯಾವುದೇ ಪಕ್ಷ ಕ್ಷೇತ್ರದ ಮೇಲೆ ಪೂರ್ಣ ಹಿಡಿತ ಸಾಧಿಸಿರುವ ಲಕ್ಷಣ ಕಾಣಿಸುತ್ತಿಲ್ಲ. ಕ್ಷೇತ್ರದೊಳಗೆ ಸುತ್ತಾಡಿದರೆ ಮತದಾರರನ ನಾಡಿಮಿಡಿತ ಅಷ್ಟು ಸುಲಭವಾಗಿ ಕಂಡುಕೊಳ್ಳಲಾಗದ ಸ್ಥಿತಿಇದೆ.

ಕ್ಷೇತ್ರ ಪೂರ್ಣ ಒಂದೇ ರೀತಿಯಾಗಿಲ್ಲ. ಸ್ಲಂಗಳನ್ನೂ ತನ್ನೊಡಲಲ್ಲಿಟ್ಟುಕೊಂಡಿದೆ. ಕಾರ್ವಿುಕರು ಹೆಚ್ಚಾಗಿರುವ ಕಾಲನಿಗಳಿವೆ. ಸ್ಟಾರ್​ಗಿರಿ ಹೊಂದಿದವರಿಗೂ ನೆಲೆಗೊಟ್ಟಿದೆ. ಸದ್ಯದ ಪರಿಸ್ಥಿತಿಯಲ್ಲಿ ಕ್ಷೇತ್ರದ ತುಂಬೆಲ್ಲ ಕಾಮಗಾರಿ ನಡೆದ ಕುರುಹು ಎದ್ದು ರಾಚುತ್ತದೆ. ಕಾಂಗ್ರೆಸ್ ಸರ್ಕಾರದ ಅವಧಿ ಯಲ್ಲಿ ಮಂಜೂರಾಗಿದ್ದ 2,000 ಕೋಟಿ ರೂ.ಗಳ ಕಾಮಗಾರಿಗಳು ಇನ್ನೂ ನಡೆಯುತ್ತಿವೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಮುನಿರತ್ನರಿಗೆ ಈ ಸರ್ಕಾರ ಪರೋಕ್ಷವಾಗಿ ನೆರವಾಗಿದೆ. ಈ ಸರ್ಕಾರ ಬಂದ ನಂತರವೇ 270 ಕೋಟಿ ರೂ.ಕಾಮಗಾರಿ ಮಂಜೂರು ಮಾಡಿದೆ. ಹೀಗಾಗಿ ಪೈಪ್​ಲೈನ್ ಮತ್ತು ಒಳಚರಂಡಿ ಕಾಮಗಾರಿಗಾಗಿ ಅಗೆದ ಗುಂಡಿಗಳು ಎಲ್ಲೆಂದರಲ್ಲಿ ಕಾಣಸಿಗುತ್ತದೆ. ಈ ಕಾಮಗಾರಿಗಳ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿಗೆ ರಾಜಕೀಯ ವಿಷಯವೂ ಹೌದು. ಮೂಲ ಸೌಕರ್ಯ ಸರಿಯಿಲ್ಲ ಎಂದು ಕಾಂಗ್ರೆಸ್ ಪ್ರಚಾರದುದ್ದಕ್ಕೂ ಆರೋಪಿಸಿದರೆ, ನಾವು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇವೆ, ಎಲ್ಲವೂ ಸರಿಯಾಗುತ್ತದೆ ಎಂಬುದು ಬಿಜೆಪಿಯವರ ಉತ್ತರವಾಗಿದೆ.

ಹೈಪ್ರೋಪೈಲ್ ಕ್ಷೇತ್ರ: ರಾಜಕೀಯವಾಗಿ ಹೈಪ್ರೊಫೈಲ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ರಾಜ್ಯದ ಉದ್ದಗಲಕ್ಕೂ ರಾಜರಾಜೇಶ್ವರಿ ನಗರದಲ್ಲೇ ಏನಾಗುತ್ತೆ ರಿಸಲ್ಟ್ ಚರ್ಚೆಯಲ್ಲಿದೆ. ಇದಕ್ಕೆ ಕಾರಣ ಅಭ್ಯರ್ಥಿಗಳು. ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ರಾಜಕೀಯ ಭವಿಷ್ಯದ ಪ್ರಶ್ನೆಯಾದರೆ, ಕುಸುಮಾರನ್ನು ಕಣಕ್ಕಿಳಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ವೈಯಕ್ತಿಕವಾಗಿ ಪ್ರತಿಷ್ಠೆಯ ವಿಚಾರ. ಇವರಿಬ್ಬರು ಹೊರತು ಒಕ್ಕಲಿಗರೇ ಹೆಚ್ಚಿರುವ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಕೃಷ್ಣಮೂರ್ತಿಯನ್ನು ಗೆಲ್ಲಿಸಿಕೊಂಡು ಬರುವ ಮೂಲಕ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವ ಯತ್ನ ಎಚ್.ಡಿ.ಕುಮಾರಸ್ವಾಮಿ ಅವರದ್ದು. ಈ ಕಾರಣಕ್ಕೆ ಎಲ್ಲರೂ ನಿದ್ದೆಗೆಟ್ಟು ಬೆವರು ಹರಿಸುತ್ತಿದ್ದಾರೆ. ತಮ್ಮೆಲ್ಲ ಚಟುವಟಿಕೆ ಬದಿಗಿಟ್ಟು ಕ್ಷೇತ್ರದಲ್ಲಿ ತಮ್ಮ ಪರ ವಾತಾವರಣ ಬದಲಿಸಿಕೊಳ್ಳಲು ಹೆಣಗುತ್ತಿದ್ದಾರೆ.

ತಂತ್ರಗಾರಿಕೆ ಹೇಗೆ?

ಈ ಹಿಂದಿನ ಎರಡು ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬೂತ್​ವಾರು ಮತಗಳಿಕೆಯನ್ನು ವಿಶ್ಲೇಷಿಸಿ ಕಾಂಗ್ರೆಸ್ ಮತ ಗಳಿಕೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದೆ. ಕಾಂಗ್ರೆಸ್ ಮತಗಳು ಎಲ್ಲಿವೆ, ಮುನಿರತ್ನ ಮತಬ್ಯಾಂಕ್ ಯಾವುದೆಂದು ವಿಭಜಿಸಿ ಮತ ಕ್ರೋಡೀಕರಣಕ್ಕೆ ಕೈಹಾಕಿದೆ. ಇದೇ ರೀತಿ ಮುನಿರತ್ನ ಕೂಡ ಬಿಜೆಪಿ ಮೂಲ ಮತಗಳು ಮತ್ತು ತಮ್ಮ ಹಿಡಿತವಿರುವ ಪ್ರದೇಶಗಳ ಮತ ನಂಬಿಕೊಂಡು ಪ್ರಯತ್ನಶೀಲರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆಲವು ಸ್ಲಂ ಹಾಗೂ ಕಾರ್ವಿುಕರು ಹೆಚ್ಚಿರುವ ಪ್ರದೇಶದಲ್ಲಿ ಎರಡು ತಿಂಗಳ ಕೇಬಲ್ ಚಂದಾದಾರಿಕೆ ಮನ್ನಾ ಮಾಡಿರುವುದು ಹಾಗೂ ಸೆಟ್​ಟಾಪ್ ಬಾಕ್ಸ್ ಉಚಿತವಾಗಿ ನೀಡಿದ್ದಾರೆಂಬುದರ ಪರಿಣಾಮವನ್ನು ಕಾಂಗ್ರೆಸ್ ಲೆಕ್ಕಹಾಕುತ್ತಿದೆ.

ಅಂಕಿಸಂಖ್ಯೆ ಲೆಕ್ಕಾಚಾರ

4.62 ಸಾವಿರ ಮತದಾರರು ಮತದಾನದ ಹಕ್ಕು ಹೊಂದಿದ್ದು, ಇವರ ಪೈಕಿ 6581 ಹೊಸ ಮತದಾರರು ಎಂಬುದು ವಿಶೇಷ. 2008, 2013, 2018ರ ಚುನಾವಣೆಯಲ್ಲಿ ಗೆಲುವಿನ ಅಂತರ ಸರಾಸರಿ 20 ಸಾವಿರದಷ್ಟೇ ಇದೆ. ಅಂದಹಾಗೆ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಮೊದಲ ಬಾರಿಗೆ ಬಿಜೆಪಿ ಗೆದ್ದಿದ್ದು ಬಿಟ್ಟರೆ ಬಳಿಕ ನಡೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ 20 ಸಾವಿರ ಮತಗಳ ಅಂತರದಲ್ಲೇ ಗೆಲುವು ಸಾಧಿಸಿದೆ. ಕ್ಷೇತ್ರದಲ್ಲಿ ಶೇ.88ಕ್ಕಿಂತ ಹೆಚ್ಚು ಸಾಕ್ಷರತೆ ಇದ್ದರೂ, ಮತದಾನ ಪ್ರಮಾಣ ಮಾತ್ರ ಶೇ. 55 ಇದೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಿಕೊಂಡು ಗೆಲ್ಲುವ ತವಕ ರಾಜಕೀಯಪಕ್ಷಗಳದ್ದಾಗಿದೆ.

ಏನು ಮಾಡುತ್ತಿದ್ದಾರೆ ಮುನಿರಾಜು ಗೌಡ

ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಫಲಿತಾಂಶದ ಬಗ್ಗೆ ತಕರಾರು ತೆಗೆದು ಸುಪ್ರೀಂಕೋರ್ಟ್ ತನಕ ಹೋಗಿದ್ದ ತುಳಸಿ ಮುನಿರಾಜುಗೌಡ ಅವರು ಪ್ರಚಾರದಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳದೇ ಇರುವುದು ಮುನಿರತ್ನ ಪಾಲಿಗೆ ಆತಂಕವನ್ನು ತಂದಿದೆ.

ಪ್ರಯೋಗವಾದ ಅಸ್ತ್ರಗಳು

1. ಡಿ.ಕೆ.ರವಿ ಕಾರಣಕ್ಕೆ ಅನುಕಂಪದ ಮತ ಸಿಗಬಹುದೆಂದು ಕಾಂಗ್ರೆಸ್ ಕುಸುಮಾರನ್ನು ಕಣಕ್ಕಿಳಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕುಸಮಾ ಬಗ್ಗೆ ಡಿ.ಕೆ.ರವಿ ತಾಯಿ ಆಡಿದ ಮಾತುಗಳು ಒಂದಷ್ಟು ಸಂಚಲನ ಸೃಷ್ಟಿಸಿತು. ಆದರೆ ಮತದಾರರ ಮೇಲೆ ಆ ಮಾತು ಪರಿಣಾಮ ಬೀರಲಿಲ್ಲ.

2. ಪ್ರತಿಪಕ್ಷಗಳಿಂದ ಡಿ.ಕೆ.ರವಿ ಹೆಸರು ಪ್ರಸ್ತಾಪವಾಗ ಬೇಕೆಂದು ಕಾಂಗ್ರೆಸ್ ಬಯಸಿದಂತೆ ನಡೆಯಿತು. ಅದನ್ನಿಟ್ಟುಕೊಂಡು ಕೈ ನಾಯಕಿಯರು ಹರಿಹಾಯ್ದರು. ಆ ಮೂಲಕ ಮಹಿಳಾ ಮತದಾರರನ್ನು ಆಕರ್ಷಿಸುವ ಪ್ರಯತ್ನ ನಡೆಯಿತು.

3. ಬಿಜೆಪಿ ಅಭ್ಯರ್ಥಿ ಮುನಿರತ್ನ ಬಾಯಲ್ಲಿ ವಿವಾದಾತ್ಮಕ ಹೇಳಿಕೆ ಹೊರಬರುವಂತೆ ಮಾಡುವ ಕಾಂಗ್ರೆಸ್ ನಾಯಕರ ಪ್ರಯತ್ನ ಫಲಕೊಡದಾಯಿತು. ಕೈ ನಾಯಕರ ಕೆಣಕು ಮಾತಿಗೆ ಮುನಿರತ್ನರೇ ಕಣ್ಣೀರು ಹಾಕಿ, ಮಾತನಾಡಿದವರೇ ಸ್ಪಷ್ಟೀಕರಣ ಕೊಡುವಂತೆ ಮಾಡಿದರು.

4. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಚಾರದ ವೇಳೆ ಮುನಿರತ್ನ ಬೆಂಬಲಿಗರು ಧರಣಿ ನಡೆಸಿದ ವಿಚಾರವನ್ನು ಬಳಸಿಕೊಳ್ಳುವ ಮೂಲಕ ನಿರ್ಣಾಯಕರಾಗಿರುವ ಹಿಂದು ಳಿದ ವರ್ಗಗಳನ್ನು ಸೆಳೆಯುವ ಪ್ರಯತ್ನ ಕಾಂಗ್ರೆಸ್​ನದ್ದು.

5. ಕುಸುಮಾ ಪರವಾಗಿ ಹೆಣ್ಣು ಮಕ್ಕಳು, ಯುವ ಸಮುದಾಯ ವನ್ನು ಸೆಳೆಯುವ ಪ್ರಯತ್ನ ನಡೆದಿದೆ.

6. ದರ್ಶನ್, ಅಮೂಲ್ಯರನ್ನು ಕರೆತಂದು ಮತದಾರರನ್ನು ಆಕರ್ಷಿಸುವ ಪ್ರಯತ್ನವನ್ನು ಮುನಿರತ್ನ ಮಾಡಿದ್ದು, ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದುನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net