

ಪ್ರಶಾಂತ ಭಾಗ್ವತ, ಉಡುಪಿ
ದೇಶಾದ್ಯಂತ 7 ಹಂತಗಳಲ್ಲಿ ಸುದೀರ್ಘ 87 ದಿನಗಳ ಕಾಲ ಲೋಕಸಭಾ ಚುನಾವಣೆ ನಡೆದಿದ್ದು, ಮತ ಎಣಿಕೆ ಕಾರ್ಯ ಇಂದು ನಡೆಯಲಿದೆ. ಉಡುಪಿ ಬ್ರಹ್ಮಗಿರಿಯಲ್ಲಿರುವ ಸೇಂಟ್ ಸಿಸಿಲಿ ಇಂಗ್ಲಿಷ್ ಮೀಡಿಯಂ ಹೈಯರ್ ಪ್ರೈಮರಿ ಸ್ಕೂಲ್ನಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಹಣೆಬರಹ ಅನಾವರಣಗೊಳ್ಳಲಿದೆ.
ಬಿಜೆಪಿಯ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಇಬ್ಬರೂ ಸಹ ಗೆಲುವು ನನ್ನದೇ ಎಂಬ ಅಚಲ ವಿಶ್ವಾಸ, ನಂಬಿಕೆ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಏ.26ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿಯೇ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿದೆ. ಹೀಗಾಗಿ ತಿಂಗಳ ಕಾಲ (37 ದಿನ) ಈ ಎರಡೂ ಜಿಲ್ಲೆಯಲ್ಲಿ ಗೆಲ್ಲೋರು ಯಾರು? ಸೋಲೋರು ಯಾರು ಎಂಬ ಚರ್ಚೆಯೂ ಸುದೀರ್ಘರ್ವಾಗಿಯೇ ನಡೆದಿದೆ. ಈ ಕ್ಷೇತ್ರ ದಶಕದಿಂದ ಬಿಜೆಪಿಯ ಭದ್ರಕೋಟೆಯಾಗಿದ್ದು, ಕೈಯಲ್ಲಿ ಕಮಲ ಹಿಡಿದು ಕೋಟ ಶ್ರೀನಿವಾಸ ಪೂಜಾರಿ ಕೋಟೆ ಏರುತ್ತಾರೆಯೇ ಎಂಬ ಕುತೂಹಲಕ್ಕೆ ಇಂದು ಮಧ್ಯಾಹ್ನ ತೆರೆ ಬೀಳಲಿದೆ.
ಹಿಂದಿನ ಮೂರು ಚುನಾವಣೆಯಲ್ಲಿ ಒಮ್ಮೆ ಗೆಲುವು, ಎರಡು ಬಾರಿ ಸೋಲು ಕಂಡಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಈ ಬಾರಿ ಜಯದ ನಿರೀಕ್ಷೆಯಲ್ಲಿದ್ದಾರೆ. ಅನುಭವಿ ರಾಜಕಾರಣಿಯಾಗಿರುವ ಅವರು ಬಿಜೆಪಿಯ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಿ, ಬಿಜೆಪಿ ಭದ್ರಕೋಟೆಯನ್ನು "ಕೈ'ವಶ ಮಾಡಿಕೊಳ್ಳುತ್ತಾರೆಯೇ ಎಂಬ ಕರಾವಳಿ-ಮಲೆನಾಡಿನ ಜನರ ಇನ್ನೊಂದು ಕುತೂಹಲಕ್ಕೂ ಇಂದಿನ ಫಲಿತಾಂಶ ತೆರೆ ಎಳೆಯಲಿದೆ.
ಕ್ಷೇತ್ರ ಮತಗಟ್ಟೆ ಟೇಬಲ್ ಕೊಠಡಿ ಗರಿಷ್ಠ ಸುತ್ತು
ಕುಂದಾಪುರ 222 -- 14 -- 01 -- 16
ಉಡುಪಿ 226 -- 7+7 -- 02 -- 17
ಕಾಪು 209 -- 7+7 -- 02 -- 15
ಕಾರ್ಕಳ 209 -- 14 -- 01 -- 15
ಶೃಂಗೇರಿ 256 -- 14 -- 01 -- 19
ಮೂಡಿಗೆರೆ 231 -- 7+7 -- 02 -- 17
ಚಿಕ್ಕಮಗಳೂರು 261 -- 7+7 -- 02 -- 19
ತರೀಕೆರೆ 228 -- 14 -- 01 -- 17
ಒಟ್ಟು 1,842 -- 112 -- 12 -- 135
ಮತ ಎಣಿಕೆ ಕೇಂದ್ರದ ಒಳಗೆ ಹಾಗೂ ಸುತ್ತ 400 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಇದಲ್ಲದೆ, ಇದಲ್ಲದೆ, 4 ಕೆಎಸ್ಆರ್ಪಿ, 5 ಡಿಎಆರ್ ಬೀಡುಬಿಟ್ಟಿದೆ. ಜಿಲ್ಲೆಯ ವಿವಿಧ ಸೂಕ್ಷ್ಮ ಪ್ರದೇಶ, ಅಭ್ಯರ್ಥಿಗಳ ವಾಸ್ತವ್ಯದ ಮನೆ ಸೇರಿದಂತೆ ಇನ್ನಿತರ ಅಗತ್ಯತೆಯ ಪ್ರದೇಶಗಳಲ್ಲಿ 300ರಷ್ಟು ಸಿಬ್ಬಂದಿ ಭದ್ರತಾ ಕಾರ್ಯಗಳಿಗಾಗಿ ನೇಮಿಸಲಾಗಿದೆ. ಮತ ಎಣಿಕೆ ಕೇಂದ್ರದ ಹೊರಗೆ, ಒಳಗೆ ಹಾಗೂ ಟೇಬಲ್ಗಳಿಗೂ ಸಹ ಕ್ಯಾಮರಾ ಅಳವಡಿಸಲಾಗಿದೆ. ಮೊದಲಿಗೆ ಪೋಸ್ಟ್ಲ್ ಬ್ಯಾಲೆಟ್ಗಳ ಎಣಿಕೆ ನಡೆಯಲಿದೆ. ಮತಯಂತ್ರದಲ್ಲಿ ಎಣಿಕೆಯಾದ ಬಳಿಕ ಚಿಕ್ಕಮಗಳೂರು ಜಿಲ್ಲೆಯ 976 ಇವಿಎಂ ಸೇರಿ ಒಟ್ಟು 1,842 ಮತಯಂತ್ರಗಳನ್ನು ಮುಂದಿನ 45 ದಿನಗಳ ಕಾಲ ಡಿಸಿ ಕಚೇರಿಯ ಸ್ಟ್ರಾಂಗ್ ರೂಮ್ನಲ್ಲಿ ಕಾದಿಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠ ಡಾ.ಕೆ.ಅರುಣಕುಮಾರ್ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕೆಂಬ ಜನರ ಆಶಯ, ಬೂತ್ ಮಟ್ಟದ ಕಾರ್ಯಕರ್ತರ ಶ್ರಮ, ಸಚಿವನಾಗಿ ಮತ್ತು ವಿಪಕ್ಷದ ನಾಯಕನಾಗಿ ನಾನು ಮಾಡಿರುವ ಜನಪರ ಕೆಲಸ ಈ ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಗೊಂಡು ನನ್ನ ಪತ್ತು ಪಕ್ಷದ ಗೆಲುವಿಗೆ ಖಂಡಿತ ಕಾರಣವಾಗುತ್ತದೆ. ಆ ನಂಬಿಕೆ ನನಗಿದ್ದು, ಗೆಲ್ಲುವ ಅಚಲ ವಿಶ್ವಾಸವಿದೆ. ಕೋಟ ಶ್ರೀನಿವಾಸ್ ಪೂಜಾರಿ. ಬಿಜೆಪಿ ಅಭ್ಯರ್ಥಿ
ಚುನಾವಣೆ ಸಂದರ್ಭದಲ್ಲಿ ದಶಕದ ಬಳಿಕ ರಾಜ್ಯ-ದೇಶದಲ್ಲಿ ಕಾಂಗ್ರೆಸ್ ಪರವಾದ ಅಲೆ ಇತ್ತು. ಇದೇ ವೇಳೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ, ಈ ಹಿಂದೆ ನಾನು ಸಂಸದನಾಗಿದ್ದಾಗ ಮಾಡಿರುವ ಅನೇಕ ಜನಪರ ಕೆಲಸ ನನ್ನ ಕೈ ಹಿಡಿಯಲಿದ್ದು, ಖಂಡಿತ ಗೆಲ್ಲುವ ಭರವಸೆಯೇ ಇದೆ. ಕೆ.ಜಯಪ್ರಕಾಶ್ ಹೆಗ್ಡೆ. ಕಾಂಗ್ರೆಸ್ ಅಭ್ಯರ್ಥಿ