ಮೈಸೂರು ಪಾಲಿಕೆ ಬಜೆಟ್ ಮಂಡಿಸುವವರು ಯಾರು?

mcca
Published on
  • ಇನ್ನೂ ರಚನೆಯಾಗದ ಸ್ಥಾಯಿ ಸಮಿತಿ
  • ಲೇಖಾನುದಾನ ಮಂಡನೆಗೆ ಚಿಂತನೆ

ಸದೇಶ್ ಕಾರ್ಮಾಡ್ ಮೈಸೂರು
ನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆದು ಅರ್ಧ ವರ್ಷ ಸಮೀಪಿಸುತ್ತಿದ್ದರೂ ಇನ್ನೂ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರುಗಳ ಆಯ್ಕೆ ನಡೆದಿಲ್ಲ. ಅಧ್ಯಕ್ಷರುಗಳ ಆಯ್ಕೆ ವಿಚಾರ ಇದೀಗ ಸರ್ಕಾರದ ಅಂಗಳದಲ್ಲಿದ್ದು, ಸ್ಥಾಯಿ ಸಮಿತಿ ಅಧ್ಯಕ್ಷರು ಇಲ್ಲದೆ ಬಜೆಟ್ ಮಂಡಿಸುವವರು ಯಾರು ಎಂಬ ಗೊಂದಲ ಸೃಷ್ಟಿಯಾಗಿದೆ.

ಬಜೆಟ್‌ಅನ್ನು ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರು ಮಂಡಿಸಬೇಕು. ಆದರೆ, ಪ್ರಸ್ತುತ ಪಾಲಿಕೆಯಲ್ಲಿ ಸ್ಥಾಯಿ ಸಮಿತಿಗಳಿಗೆ ಸದಸ್ಯರುಗಳು ಆಯ್ಕೆಗೊಂಡರೂ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಬಜೆಟ್ ಯಾರು ಮಂಡಿಸಬೇಕು ಎಂಬ ಕುರಿತು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಕೋರಿ ಪಾಲಿಕೆ ಆಯುಕ್ತರು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದು, ಸರ್ಕಾರದ ಉತ್ತರಕ್ಕಾಗಿ ನಿರೀಕ್ಷೆ ಮಾಡಲಾಗುತ್ತಿದೆ.

ಬಜೆಟ್ ಮಂಡನೆ ವಿಚಾರದ ಜತೆಗೆ ಸ್ಥಾಯಿ ಸಮಿತಿಗೆ ಅಧ್ಯಕ್ಷರುಗಳ ಆಯ್ಕೆ ವಿಚಾರವೂ ಸಹ ಇದೀಗ ಸರ್ಕಾರದ ಅಂಗಳದಲ್ಲಿದೆ. ಸದ್ಯದಲ್ಲಿಯೇ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರುಗಳ ಆಯ್ಕೆ ಹಾಗೂ ಬಜೆಟ್ ಮಂಡನೆ ಕುರಿತು ಸರ್ಕಾರ ಶೀಘ್ರ ತನ್ನ ನಿರ್ಧಾರ ಪ್ರಕಟಿಸಿದರೆ ಉತ್ತಮ. ಇಲ್ಲವಾದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳ ಚುನಾವಣೆ ಮತ್ತೆ ಮೂರ‌್ನಾಲ್ಕು ತಿಂಗಳು ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

ಸಭೆ ಮುಂದೂಡಿಕೆ: ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲು ಫೆ.2 ರಂದು ಮೇಯರ್ ಶಿವಕುಮಾರ್ ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಸಭೆ ಹಮ್ಮಿಕೊಂಡಿದ್ದರು. ಆದರೆ, ಅಂದಿನ ಸಭೆಯನ್ನು ಮುಂದೂಡುವಂತೆ ಜೆಡಿಎಸ್ ಸದಸ್ಯರು ಮೇಯರ್‌ಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮೇಯರ್ ದಿಢೀರಾಗಿ ಸಭೆ ಮುಂದೂಡಿದರು. ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಹಳೇ ಕೌನ್ಸಿಲ್ ಸಭಾಂಗಣಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದರು. ನಂತರ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ. ಪ್ರಕಾಶ್ ಅವರನ್ನು ಕಾಂಗ್ರೆಸ್ ಸದಸ್ಯರು ಭೇಟಿಯಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಚುನಾವಣೆಯನ್ನು ಶೀಘ್ರ ನಡೆಸಲು ಮೇಯರ್‌ಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದ್ದರು. ಈ ಕುರಿತು ಸೂಕ್ತ ನಿರ್ದೇಶನ ನೀಡುವಂತೆ ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದು, ಸರ್ಕಾರದಿಂದ ಇದುವರೆಗೆ ಉತ್ತರ ಬಂದಿಲ್ಲ. ಸ್ಥಾಯಿ ಸಮಿತಿಗೆ ಅಧ್ಯಕ್ಷರುಗಳು ನೇಮಕವಾಗದ ಹಿನ್ನೆಲೆಯಲ್ಲಿ ಬಜೆಟ್ ಮಂಡಿಸುವುದು ಹೇಗೆ ಎಂಬ ಗೊಂದಲ ಸೃಷ್ಟಿಯಾಗಿದೆ.

ಲೇಖಾನುದಾನ ಮಂಡನೆಗೆ ಚಿಂತನೆ?
ನಗರ ಪಾಲಿಕೆ ಮಾರ್ಚ್ 31ರೊಳಗೆ ಬಜೆಟ್ ಮಂಡಿಸಬೇಕು. ಅಷ್ಟರೊಳಗೆ ಸರ್ಕಾರದಿಂದ ಬಜೆಟ್ ಯಾರು ಮಂಡಿಸಬೇಕು ಎಂಬ ಕುರಿತು ಸೂಕ್ತ ನಿರ್ದೇಶನ ಬಾರದೆ ಇದ್ದರೆ ಲೇಖಾನುದಾನ (ಮಧ್ಯಂತರ ಬಜೆಟ್) ಮಂಡಿಸಿ ನಂತರ ಸರ್ಕಾರದಿಂದ ನಿರ್ದೇಶನ ಬಂದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಪಾಲಿಕೆ ಚಿಂತನೆ ನಡೆಸುತ್ತಿದೆ. ಇನ್ನು 15 ರಿಂದ 20 ದಿನಗಳ ಒಳಗೆ ಈ ಕುರಿತು ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ. ಈ ನಡುವೆ ಬಜೆಟ್‌ಗೆ ಬೇಕಾದ ಎಲ್ಲ ತಯಾರಿಯನ್ನು ಪಾಲಿಕೆ ಕೈಗೊಳ್ಳುತ್ತಿದೆ.

ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ನಡೆಸಲು ನನ್ನದೇನು ಅಭ್ಯಂತರವಿಲ್ಲ. ಈ ಹಿಂದೆ ಸಭೆ ಕರೆದಾಗ ಜೆಡಿಎಸ್ ಸದಸ್ಯರ ಮನವಿ ಮೇರೆಗೆ ಮುಂದೂಡಲಾಯಿತು. ಆ ನಂತರ ನನ್ನ ವಿರುದ್ಧ ಕಾಂಗ್ರೆಸ್ ಸದಸ್ಯರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದರು. ಇದೀಗ ಚುನಾವಣೆ ವಿಚಾರ ಸರ್ಕಾರದ ಹಂತದಲ್ಲಿದ್ದು, ಸರ್ಕಾರದ ನಿರ್ದೇಶನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಬಜೆಟ್‌ಅನ್ನು ನಾನು ಮಂಡಿಸುವುದಿಲ್ಲ, ಇದಕ್ಕೂ ಸರ್ಕಾರದ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ. ಒಂದುವೇಳೆ ಸೂಕ್ತ ಸಮಯದಲ್ಲಿ ಸರ್ಕಾರದಿಂದ ನಿರ್ದೇಶನ ಬಾರದೆ ಇದ್ದರೆ ಲೇಖಾನುದಾನ ಮಂಡಿಸಲಾಗುವುದು.
ಶಿವಕುಮಾರ್, ಮೇಯರ್

ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಗೆ ಅಧ್ಯಕ್ಷರು ಆಯ್ಕೆಗೊಳ್ಳದ ಹಿನ್ನೆಲೆಯಲ್ಲಿ ಬಜೆಟ್‌ಅನ್ನು ಯಾರು ಮಂಡಿಸಬೇಕು ಎಂಬ ಗೊಂದಲ ಇದ್ದು, ಈ ಗೊಂದಲ ಪರಿಹರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರ ನೀಡುವ ನಿರ್ದೇಶನದ ಪ್ರಕಾರ ಬಜೆಟ್ ಮಂಡಿಸಲು ಕ್ರಮ ವಹಿಸಲಾಗುವುದು.
ಲಕ್ಷ್ಮೀಕಾಂತ್ ರೆಡ್ಡಿ, ಆಯುಕ್ತ

ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆಸಲು ಮೇಯರ್ ಆಸಕ್ತಿ ತೋರುತ್ತಿಲ್ಲ. ಮೇಯರ್ ಚುನಾವಣೆ ನಡೆದು ಆರು ತಿಂಗಳು ಸಮೀಪಿಸುತ್ತಿದ್ದರೂ ಇನ್ನೂ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರುಗಳನ್ನು ಆಯ್ಕೆ ಮಾಡದೆ ಇರುವುದು ಸರಿಯಲ್ಲ. ಮೇಯರ್ ನಡೆಯ ಕುರಿತು ಈಗಾಗಲೇ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಲಾಗಿದೆ. ಕೆಲವೇ ದಿನಗಳಲ್ಲಿ ಈ ಕುರಿತು ಮತ್ತೆ ಹೋರಾಟ ನಡೆಸಲು ಚಿಂತನೆ ನಡೆಸಲಾಗಿದೆ. ನಗರ ಪಾಲಿಕೆ ಸದಸ್ಯರ ಅಧಿಕಾರವನ್ನು ಮೇಯರ್ ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಅಯೂಬ್ ಖಾನ್, ಪಾಲಿಕೆ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net