

ಮಧುಗಿರಿ: ಸಾಮಾನ್ಯ ಕ್ಷೇತ್ರವಾಗಿ ಬದಲಾದ ನಂತರ ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ದಿನೇದಿನೆ ಬಲ ಕಳೆದುಕೊಳ್ಳಲಾರಂಭಿಸಿದೆ. ಕಳೆದಷ್ಟು ವರ್ಷಗಳಿಂದ ಸಮರ್ಥ ನಾಯಕನಿಲ್ಲದೆ ಬಲಿಷ್ಠ ಕಾಂಗ್ರೆಸ್ ವಿರುದ್ಧ ಸೆಣಸಲು ಕಾರ್ಯಕರ್ತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಡಿ.ಸಿ.ಗೌರಿಶಂಕರ್ ಆಪರೇಷನ್ ಕಮಲದ ಮೂಲಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಖುದ್ದು ಅನಿತಾ ಕುಮಾರಸ್ವಾಮಿ ಅವರೇ ಕಣಕ್ಕಿಳಿದು ಕ್ಷೇತ್ರದಲ್ಲಿ ಜೆಡಿಎಸ್ ಉಳಿಸಿಕೊಳ್ಳಲು ಪಣತೊಟ್ಟಿದ್ದರು. ಅಂತಹ ಕ್ಷೇತ್ರದಲ್ಲಿ ಪ್ರಸ್ತುತ ಕಾಂಗ್ರೆಸ್ ವಿರುದ್ಧ ತೊಡೆತಟ್ಟಲು ಸಮರ್ಥ ನಾಯಕರ ಅಭಾವ ಸೃಷ್ಟಿಯಾಗಿದೆ.
ಕಳೆದ 20 ವರ್ಷದಲ್ಲಿ ಜೆಡಿಎಸ್‌ನಿಂದ ಮೂವರು ಶಾಸಕರು ಆಯ್ಕೆಯಾಗಿದ್ದರೂ ಯಾರೊಬ್ಬರೂ ಕ್ಷೇತ್ರದಲ್ಲಿ ಉಳಿದು ಕಾರ್ಯಕರ್ತರಿಗೆ ಶಕ್ತಿ ತುಂಬಲು ಸಾಧ್ಯವಾಗಿಲ್ಲ. ಡಿ.ಸಿ.ಗೌರಿಶಂಕರ್ ಪಕ್ಷ, ಕ್ಷೇತ್ರವನ್ನು ಬಿಟ್ಟು ತುಮಕೂರು ಗ್ರಾಮಾಂತರದಲ್ಲಿ ಗುರುತಿಸಿಕೊಂಡರು. ಅನಿತಾ ಕುಮಾರಸ್ವಾಮಿ ಚುನಾವಣೆ ಗೆದ್ದ ಬಳಿಕ ಕ್ಷೇತ್ರವನ್ನು ಮರೆತರು, ಎಂ.ವಿ.ವೀರಭದ್ರಯ್ಯ ಎಂದೂ ಚುನಾವಣಾ ರಾಜಕೀಯ ಮಾಡಲೇ ಇಲ್ಲ. ಒಟ್ಟಾರೆ ದಳ ನಾವಿಕನಿಲ್ಲದ ದೋಣಿಯಂತಾಗಿದೆ ಎಂಬ ಅಳಲು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರದ್ದಾಗಿದೆ.
ಕಾರ್ಯಕರ್ತರಲ್ಲಿ ಆತಂಕ: 2023ರ ವಿಧಾನಸಭಾ ಚುನಾವಣೆಯಲ್ಲಿ ವೀರಭದ್ರಯ್ಯ ಸೋತ ನಂತರ ಇದುವರೆಗೂ ಕ್ಷೇತ್ರದ ಕಡೆ ರಾಜಕೀಯವಾಗಿ ಮುಖ ವಾಡಿಲ್ಲ. ತುಮುಲ್, ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗಳ ಸಂದರ್ಭದಲ್ಲಿಯೂ ಕೆ.ಎನ್.ರಾಜಣ್ಣ ಅವರಿಗೆ ಸೆಡ್ಡು ಹೊಡೆಯಲು ಕಾರ್ಯಕರ್ತರಿಗೆ ಶಕ್ತಿ ನೀಡಲೇ ಇಲ್ಲ. ಕೆಲವೇ ದಿನಗಳಲ್ಲಿ ಎದುರಾಗಲಿರುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪಕ್ಷದ ನೇತೃತ್ವ ವಹಿಸುವವರು ಯಾರು ಎಂಬ ಆತಂಕ ಜೆಡಿಎಸ್ ಪಾಳಯದಲ್ಲಿ ಮೂಡಲಾರಂಭಿಸಿದೆ. ಜೆಡಿಎಸ್‌ನ ತಾಲೂಕು ಮುಖಂಡರು ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಅವರ ಬಗ್ಗೆ ಮೃದುವಾಗಿ ಮಾತನಾಡಲಾರಂಭಿಸಿದ್ದು, ಭವಿಷ್ಯದಲ್ಲಿ ಸಾಕಷ್ಟು ಮುಖಂಡರು ವಲಸೆ ಹೋದರೂ ಆಶ್ಚರ್ಯ ಪಡುವಂತಿಲ್ಲ.
ಮಧುಗಿರಿಯಲ್ಲಿ ‘ಓಡುವ ಕುದುರೆ’ಯಾರು?: ನೋಂದಣಿ ಅಭಿಯಾನಕ್ಕೆ ಮಧುಗಿರಿಗೆ ಆಗಮಿಸಿದ್ದ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರ ಅಳಲು ಆಲಿಸಿ, ಮಧುಗಿರಿ ಕ್ಷೇತ್ರಕ್ಕೆ ಓಡುವ ಕುದುರೆ ನೀಡುವುದಾಗಿ ಹೇಳುವ ಮೂಲಕ ಕಾರ್ಯಕರ್ತರಲ್ಲಿ ಭರವಸೆ ಮೂಡಿಸುವ ಮಾತುಗಳನ್ನಾಡಿದ್ದರು. ಆದರೆ, ಕ್ಷೇತ್ರದಲ್ಲಿ ಈ ‘ಓಡುವ ಕುದುರೆ’ ಯಾರು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.
ಈ ನಡುವೆ ಕಾಂಗ್ರೆಸ್ ತೊರೆದ ನಂತರ ಯಾವುದೇ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲದ ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ 2028ರ ಚುನಾವಣೆಯಲ್ಲಿ ನಾನು ಜೆಡಿಎಸ್‌ನಿಂದ ಸ್ಪರ್ಧಿಸುತ್ತೇನೆ ಎಂದು ಸ್ವಯಂ ಘೋಷಿಸಿಕೊಂಡಿದ್ದಾರೆ.
ವಾಸಣ್ಣ ಜತೆ ವೀರಭದ್ರಯ್ಯ!: ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ 2023ರ ವಿಧಾನಸಭೆ ಚುನಾವಣೆಯಲ್ಲಿ ಕೊನೇ ಕ್ಷಣದಲ್ಲಿ ಒಲ್ಲದ ಮನಸ್ಸಿನಿಂದಲೇ ಸ್ಫರ್ಧೆಗಳಿದು ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ವಿರುದ್ಧ ಸೋತ ನಂತರ ಸಕ್ರಿಯ ರಾಜಕಾರಣದಿಂದಲೇ ದೂರ ಉಳಿದಿದ್ದಾರೆ ಎಂಬ ಆರೋಪ ಜೆಡಿಎಸ್ ಪಾಳಯದಲ್ಲಿಯೇ ಕೇಳಿಬರುತ್ತಿದೆ.
ಜತೆಗೆ ಕಾಂಗ್ರೆಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಜತೆಗೆ ಪದೇ ಪದೆ ಕಾಣಿಸಿಕೊಳ್ಳುತ್ತಿರುವ ವೀರಭದ್ರಯ್ಯ ಅವರ ರಾಜಕೀಯ ನಡೆ ಕುತೂಹಲ ಮೂಡಿಸಿದೆ. ಶ್ರೀನಿವಾಸ್ ಫ್ಯಾನ್ಸ್ ಕ್ಲಬ್ ಫೇಸ್‌ಬುಕ್ ಖಾತೆಯಲ್ಲಿಯೂ ಇಬ್ಬರು ಜತೆಗಿರುವ ಫೋಟೋ ಹಾಕಿ ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬರುವ ಮುಖಂಡರಿಗೆ ಸ್ವಾಗತ ಎಂದು ಇತ್ತೀಚೆಗಷ್ಟೇ ಪೋಸ್ಟ್ ಹಾಕಲಾಗಿದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇತ್ತೀಚೆಗೆ ಮಧುಗಿರಿಗೆ ಆಗಮಿಸಿದ್ದಾಗಲೂ ಇದೇ ವಿಷಯವನ್ನಿಟ್ಟುಕೊಂಡು ಕಾರ್ಯಕರ್ತರು ದೂರು ಹೇಳಿದ್ದಾರೆ. ಇದೆಲ್ಲದರ ನಡುವೆ ಜೆಡಿಎಸ್‌ನಿಂದ ಹಿಂದೊಮ್ಮೆ ಗೆದ್ದಿದ್ದ ಪ್ರಸ್ತುತ ಕಾಂಗ್ರೆಸ್‌ನಲ್ಲಿರುವ ತುಮಕೂರು ಮೂಲದ ಮಾಜಿ ಶಾಸಕರೊಬ್ಬರು ಮತ್ತೆ ಜೆಡಿಎಸ್‌ಗೆ ಬಂದು ಮಧುಗಿರಿಯಿಂದ ಸ್ಪರ್ಧಿಸಬಹುದು ಎಂಬ ಗುಸುಗುಸು ಕೇಳಿಬರುತ್ತಿದೆ.