ಮೀನು ಹಿಡಿಯಲು ಹೋಗಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಪತ್ತೆ

Crime Scene 27 May 20
Published on

ಕಡಬ: ಕುಮಾರಧಾರ ನದಿಯಲ್ಲಿ ಮೀನು ಹಿಡಿಯಲು ಹೋಗಿ ನದಿ ನೀರಿನಲ್ಲಿ ಕಣ್ಮರೆಯಾಗಿದ್ದ ಕೊಯಿಲ ಗ್ರಾಮದ ಪರಪ್ಪು ನಿವಾಸಿ ಮಾಯಿಲ ಮುಗೇರ ಎಂಬವರ ಪುತ್ರ ಆನಂದ ಮುಗೇರ(೨೪ವ.)ರವರ ಮೃತದೇಹ ಮಾ.೧೦ರಂದು ಬೆಳಿಗ್ಗೆ ಪತ್ತೆಯಾಗಿದೆ.

ಆನಂದ ಮುಗೇರ ಅವರು ಮಾ.೯ರಂದು ಬೆಳಿಗ್ಗೆ ಸಂಬಂಧಿಕ ತಾರನಾಥ ಎಂಬವರ ಜೊತೆಗೆ ಕುಮಾರಧಾರ ನದಿಯ ಪರಪ್ಪು ಎಂಬಲ್ಲಿಗೆ ಮೀನು ಹಿಡಿಯಲೆಂದು ಹೋಗಿದ್ದರು. ಬಲೆಹಾಕಿ ಮೀನು ಹಿಡಿದು ಸಂಜೆ ವೇಳೆ ನದಿ ದಾಟಿ ವಾಪಸ್ಸು ಬರುವ ಸಂದರ್ಭ ಆನಂದರವರ ಕಾಲಿನ ಚಪ್ಪಲಿ ಜಾರಿ ನೀರಿನಲ್ಲಿ ಹೋಗಿದ್ದು ಅದನ್ನು ಹಿಡಿಯಲು ಮತ್ತೆ ನೀರಿಗೆ ಇಳಿದ ವೇಳೆ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದರು. ಘಟನೆ ಕುರಿತಂತೆ ದೂರು ಬಂದ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳೀಯರ ನೆರವಿನೊಂದಿಗೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆತಿರಲಿಲ್ಲ. ಮಾ.೧೦ರಂದು ಬೆಳಿಗ್ಗೆ ನೆರೆಕರೆಯ ನಿವಾಸಿಗಳಾದ ಸುರೇಶ್, ಲೋಕೇಶ್ ಹಾಗೂ ಇತರರು ಸೇರಿ ಕುಮಾರಧಾರಾ ನದಿಯ ಬದಿಯಲ್ಲಿ ಹಾಗೂ ನೀರಿನಲ್ಲಿ ಹುಡುಕಾಡಿದ ವೇಳೆ ಆನಂದ ಮುಗೇರರವರು ಮುಳುಗಿದ ಸ್ಥಳದಿಂದ ಸ್ವಲ್ಪ ಕೆಳಗಡೆ ನದಿ ನೀರಿನಲ್ಲಿ ಮೃತ ಶರೀರವು ತೇಲುತ್ತಿರುವುದು ಕಂಡುಬಂದಿದೆ. ನಂತರ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಕಡಬ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತರ ಪತ್ನಿ ಪುಷ್ಪಾವತಿ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net