

ಮೈಸೂರು: ಸಿದ್ದರಾಮಯ್ಯನಿಗೆ ಗರ್ವ ಭಂಗವಾಗಲಿದೆ ಎಂಬ ಎಚ್.ಡಿ.ದೇವೇಗೌಡರ ಹೇಳಿಕೆಗೆ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ ಅವರು, ನನಗೆ ಗರ್ವ ಇದ್ದರೆ ತಾನೇ ಭಂಗ ಆಗುವುದು ಎಂದು ತಿರುಗೇಟು ನೀಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದನ್ನೇ ನಾನು ಹೇಳಿದ್ದೇನೆ. ಸತ್ಯ ಹೇಳಿದ್ದಕ್ಕೆ ನನಗೆ ಗರ್ವ ಎನ್ನುತ್ತಾರೆ. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದವರು ಯಾರು? ಮುಂದಿನ ಜನ್ಮ ಇದ್ದರೆ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದವರು ಯಾರು? ಅವರು ಹೇಳಿರುವುದನ್ನೇ ನಾನು ಹೇಳಿದ್ದಕ್ಕೆ ನನಗೆ ಗರ್ವ ಎನ್ನುತ್ತಾರೆ. ನನಗೆ ಗರ್ವ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಮೋದಿಯವರೊಂದಿಗೆ ಅವಿನಾಭಾವ ಸಂಬಂಧವಿದೆ ಎಂದು ದೇವೇಗೌಡರು ಹೇಳಿಕೊಂಡಿದ್ದಾರೆ. ಹಾಗಾದರೆ ಮೇಕೆದಾಟು ಅಣೆಕಟ್ಟು ಮಾಡಿಸಲಿ. ಸುಳ್ಳು ಏಕೆ ಹೇಳುತ್ತಾರೆ? ಎನ್‌ಡಿಎ ಬಂದರೆ ಮಾಡಿಸುತ್ತಾರೆ ಎನ್ನುವವರು ಈಗಲೇ ಮಾಡಿಸಲಿ ಎಂದರು.
ಕೇಂದ್ರ ಸರ್ಕಾರದ ಜನ ವಿರೋಧಿತನ, ನಮ್ಮ ಸರ್ಕಾರದ ಜನಪರ ಆಡಳಿತ ನಮ್ಮ ಕೈ ಹಿಡಿಯುತ್ತದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಎಷ್ಟು ಏರಿದೆ ಎಂಬುದು ಜನಸಾಮಾನ್ಯರಿಗೆ ಗೊತ್ತು.
ಅಚ್ಛೇ ದಿನ್ ಬರಲೇ ಇಲ್ಲ. ಹೀಗಾಗಿ ಬಡ ಜನರು ನಮ್ಮ ಪರ ಮತ ಹಾಕುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2014ರಲ್ಲಿ 47 ರೂ.ಗಳಿದ್ದ ಡೀಸೆಲ್ ಬೆಲೆ ಈಗ 97 ರೂ. ಆಗಿದೆ. 77 ರೂ. ಇದ್ದ ಪೆಟ್ರೋಲ್ ಬೆಲೆ ಈಗ 105 ರೂ. ಆಗಿದೆ. ಅಡುಗೆ ಅನಿಲ ಬೆಲೆಯನ್ನು ಚುನಾವಣೆ ಸಂದರ್ಭದಲ್ಲಿ ಇಳಿಸಿದ್ದಾರೆ. ಈ ಬೆಲೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 414 ರೂ. ಇತ್ತು. ಅದರ ಬೆಲೆ ಈಗ 950 ರೂ. ದಾಟಿದೆ. ನಮ್ಮ ಕಾಲಕ್ಕಿಂತಲೂ ಬಿಜೆಪಿ ಕಾಲದಲ್ಲಿ ಬೆಲೆ ಹೆಚ್ಚಾಗಿದೆ. ಜನರ ಮೇಲೆ ಇದು ಭಾರವಾಗಿಲ್ಲವೆ ಎಂದು ಪ್ರಶ್ನಿಸಿದರು.
ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗ ಕಡಿಮೆಯಾಗಿದೆ. ಆ ಆಧಾರದಲ್ಲಿ ಇಂಧನ ಬೆಲೆ ಕಡಿಮೆಯಾಗಬೇಕಿತ್ತು. ಏಕೆ ಮಾಡಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್ ಜತೆಗೆ ನಾನು ಮಾತನಾಡಿಲ್ಲ. ಅವರನ್ನು ನಾನು ಭೇಟಿಯಾಗಿಲ್ಲ. ದೂರವಾಣಿ ಮೂಲಕವೂ ಅವರೊಂದಿಗೆ ಮಾತನಾಡಿಲ್ಲ. ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಹೋಗಿ ಭೇಟಿ ಮಾಡಿದ್ದಾರೆ. ಅವರಿಗೆ ಏನು ಹೇಳಿದ್ದಾರೆ ಎಂದು ಅವರನ್ನೇ ಕೇಳಿ. ಕಾಂಗ್ರೆಸ್‌ಗೆ ಅನೇಕರು ಬರುತ್ತಾರೆ. ಪಕ್ಷದ ತತ್ವ-ಸಿದ್ಧಾಂತ, ನಾಯಕತ್ವ ಒಪ್ಪಿ ಯಾರೇ ಬಂದರೂ ಸ್ವಾಗತ ಎಂದರು.
ಮೈಸೂರು, ಚಾಮರಾಜನಗರ ಎರಡೂ ಲೋಕಸಭಾ ಕ್ಷೇತ್ರಗಳನ್ನು ನಾವು ಗೆದ್ದೇ ಗೆಲ್ಲುತ್ತೇವೆ. ಮೈಸೂರು ಮಾತ್ರವೇ ನನಗೆ ಮುಖ್ಯವಲ್ಲ. ಎಲ್ಲ ಕ್ಷೇತ್ರಗಳು ನನಗೆ ಬಹಳ ಮುಖ್ಯ. ಎಲ್ಲ ಕ್ಷೇತ್ರಗಳಿಗೂ ಸಾಧ್ಯವಾದಷ್ಟು ಹೋಗುತ್ತೇನೆ ಎಂದು ತಿಳಿಸಿದರು.
*ಜೆಡಿಎಸ್ ಜತೆಗಿನ ಮೈತ್ರಿ ಹೇಗಿರುತ್ತದೆ ಎಂಬುದು ನಮಗೆ ಗೊತ್ತಿದೆ. ಕಳೆದ ಬಾರಿಯೇ ಅದನ್ನು ನಮಗೆ ತೋರಿಸಿದ್ದಾರೆ. ಜೆಡಿಎಸ್-ಬಿಜೆಪಿ ಇವರಿಬ್ಬರ ಮೈತ್ರಿಯೂ ಹೇಗಿರುತ್ತದೆ ಎಂಬುದೂ ಗೊತ್ತಿದೆ.-ಸಿಎಂ ಸಿದ್ದರಾಮಯ್ಯ