

ಹೊಳೆನರಸೀಪುರ: ಪುಷ್ಯ ಮಳೆ ಆರ್ಭಟಕ್ಕೆ ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ದಂಡೆ ಬಳಿಯಿರುವ ಕುವೆಂಪು ಬಡಾವಣೆ, ಯಾಸೀನ್ ನಗರ, ಅಗ್ನಿಶಾಮಕ ಠಾಣೆ ರಸ್ತೆ, ಎಪಿಎಂಸಿ ಆವರಣ, ಸೂರನಹಳ್ಳಿ ರಸ್ತೆ ವ್ಯಾಪ್ತಿಯ ಜನರ ಸಂಕಷ್ಟ ಹೇಳತೀರದಾಗಿದೆ.
ಹೇಮಾವತಿ ಉಕ್ಕಿ ಹರಿದರೆ ಈ ಪ್ರದೇಶ ಜಲಾವೃತವಾಗುವ ಕಾರಣ, ಹೊಳೆ ಬರುವ ಮುನ್ಸೂಚನೆಯಿಂದ ಅಲ್ಲಿ ವಾಸಿಸುವ ಜನರು ಮನೆ ಖಾಲಿ ಮಾಡಿ ಬೇರೆಡೆ ತೆರಳಿದರೆ, ಇನ್ನೂ ಕೆಲವರು ಕೆಳ ಅಂತಸ್ತಿನ ಮನೆ ಖಾಲಿ ಮಾಡಿ ಮೊದಲ ಮಹಡಿಯಲ್ಲಿ ನೆಲೆಸಿದ್ದಾರೆ. ಮಳೆಗಾಲ ಮುಗಿಯುವವರೆಗೂ ಈ ದುಸ್ಥಿತಿ ಅವರಿಗೆ ತಪ್ಪಿದ್ದಲ್ಲ.
ಈ ನಡುವೆ ನೀರಿನ ಪ್ರವಾಹಕ್ಕೆ ಮನೆ ಶಿಥಿಲವಾಗುತ್ತಿರುವುದು ಒಂದೆಡೆಯಾದರೆ, ಮನೆ ಕುಸಿದರೆ ನಮ್ಮ ಜೀವನ ಮುಂದೇನು ಎಂಬ ಭಯ ಮತ್ತೊಂದೆಡೆ. ಕುವೆಂಪು ಬಡಾವಣೆಯ ಸುಮಾರು 25 ಮನೆಗಳು ಜಲಾವೃತ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಹಾಗೂ ನಿತ್ಯ ಜೀವನ ಸಾಗಿಸುವುದು ಹೇಗೆ ಎಂಬ ನೋವಿನಲ್ಲೇ ದಿನದೂಡುವಂತಾಗಿದೆ. ಇನ್ನು ರಿವರ್ ಬ್ಯಾಂಕ್ ರಸ್ತೆಯ ಯಾಸೀನ್ ನಗರದಲ್ಲಿ ಮುಸ್ಲಿಂ ಸಮುದಾಯದ ಸುಮಾರು 30 ಮನೆಗಳಿಗೆ ನೀರು ತುಂಬಿ ಸಂತ್ರಸ್ತರನ್ನು ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು.
ನೆರೆ ಬಂದಾಗ ತಾಲೂಕು ಆಡಳಿತ ಪ್ರಕೃತಿ ವಿಕೋಪ ನಿಧಿಯಡಿ ಚಿಲ್ಲರೆ ಹಣ ನೀಡಿ ಕೈ ತೊಳೆದುಕೊಳ್ಳುತ್ತಿದೆಯೇ ವಿನಾ ಶಾಶ್ವತ ಪರಿಹಾರ ಒದಗಿಸುವ ಕೆಲಸ ಮಾಡುತ್ತಿಲ್ಲ. ಈ ವ್ಯವಸ್ಥೆಯಿಂದಾಗಿ ನಮ್ಮ ಸಮಸ್ಯೆ ಬಗೆಹರಿದಿಲ್ಲ. ನಿರಂತರವಾಗಿ ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಬಡಾವಣೆ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಈ ನಡುವೆ ಹೇಮಾವತಿ ನದಿಗೆ ಪಟ್ಟಣದ ಒಳಚರಂಡಿ ನೀರನ್ನು ನೇರವಾಗಿ ನದಿಗೆ ಹರಿ ಬಿಡಲಾಗುತ್ತಿದೆ. ದೊಡ್ಡ ಚರಂಡಿ ಮೂಲಕ ಪಟ್ಟಣದ ನೀರು ನದಿ ಸೇರುತ್ತಿದೆ. ನದಿ ತುಂಬಿ ಹರಿದು ಪ್ರವಾಹ ಉಂಟಾದಾಗ ಒಳಚರಂಡಿ ನೀರು ಬಡಾವಣೆಗಳಿಗೆ ನುಗ್ಗುತ್ತದೆ. ಕೊಳಚೆ ನೀರು ಹಾಗೂ ಮಲಮಿಶ್ರಿತ ನೀರು ಮನೆಗಳಲ್ಲಿ ಶೇಖರಣೆಯಾಗುತ್ತಿರುವ ಪರಿಣಾಮ ದುರ್ವಾಸನೆ ಹೆಚ್ಚಾಗಿದೆ.
ಹೇಮಾವತಿ ನದಿಯಿಂದ ಒಂದು ಲಕ್ಷಕ್ಕಿಂತ ಹೆಚ್ಚಿನ ಹೊರಹರಿವು ಉಂಟಾದರೆ ಅನಾಹುತ ಕಟ್ಟಿಟ್ಟ ಬುತ್ತಿ. ಈ ವರ್ಷ ಸುಮಾರು 80 ಸಾವಿರ ಕ್ಯೂಸೆಕ್ ನೀರು ಹರಿಸಿದ ಪರಿಣಾಮ ದೊಡ್ಡ ಮಟ್ಟದಲ್ಲಿ ಸಮಸ್ಯೆ ಅನುಭವಿಸುವಂತಾಯಿತು. ಹಾಗಾಗಿ ಅನಾಹುತ ಸಂಭವಿಸುವ ಮೊದಲೇ ತಾಲೂಕು ಆಡಳಿತ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಒಳಿತು.
ಮನೆ ಸಾಮಗ್ರಿಗಳು, ಆಹಾರದ ವಸ್ತುಗಳು ನೀರಿನಿಂದ ಹಾಳಾಗಿದ್ದರೆ ಪುರಸಭೆ ವ್ಯಾಪ್ತಿಯೊಳಗೆ ಸಮೀಕ್ಷೆ ನಡೆಸಿ ಅದರ ಮಾಹಿತಿ ಪಡೆದು ಅಂತಹ ಮನೆಗಳಿಗೆ ಸರ್ಕಾರದ ಮಾರ್ಗಸೂಚಿಯಂತೆ ತಲಾ 6,500 ರೂ.ನಂತೆ ತುರ್ತು ಪರಿಹಾರ ನೀಡಲಾಗುವುದು. ಒಂದು ವೇಳೆ ಹಾನಿಯಾಗಿದ್ದರೆ 43,500 ರೂ.ದೊರಕಿಸಿ ಕೊಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸಂಪೂರ್ಣ ಮನೆ ನಾಶವಾಗಿದ್ದರೆ 1,20,000 ರೂ.ನೊಂದಿಗೆ 1.20 ಲಕ್ಷ ರೂ. ದೊರಕಿಸಿಕೊಡಲು ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು. ಸುಮಾರು 50 ಮನೆಗಳು ನೆರೆ ಸಮಸ್ಯೆ ಅನುಭವಿಸಿದ್ದು, ಎಲ್ಲವನ್ನೂ ಪರಿಶೀಲನೆ ನಡೆಸಿ ಮಾಹಿತಿ ಪಡೆದು ಸರ್ಕಾರದ ಮರಸೂಚಿಯಂತೆ ಕ್ರಮ ಕೈಗೊಳ್ಳಲಾಗುವುದು.
ಕೆ.ಕೆ.ಕೃಷ್ಣಮೂರ್ತಿ ತಹಸೀಲ್ದಾರ್, ಹೊಳೆನರಸೀಪುರ
ಹೊಳೆ ನೀರು ತುಂಬಿ ನಮ್ಮ ಮನೆಯ ಬಾಗಿಲು, ಕಿಟಕಿ, ಬಣ್ಣ ಹಾಳಾಗುತ್ತಿದೆ. ನೀರಿನಲ್ಲಿ ನೆನೆದ ಸಾಮಗ್ರಿಗಳಿಂದ ದುರ್ವಾಸನೆ ಬರುತ್ತಿದೆ. ಮನೆ ಅರ್ಧ ಮುಳುಗಿತ್ತು. ಇದರಿಂದ ಮನೆಯೊಳಗೆ ಹಾವು, ಚೇಳು, ಕಪ್ಪೆಗಳು ತುಂಬಿಕೊಂಡಿತು. ಮನೆ ದುರಸ್ತಿಗೆ ಹಣ ಎಲ್ಲಿಂದ ತರುವುದು ಎಂಬ ಚಿಂತೆ ನಮ್ಮದು. ನೆರೆ ಬಂದಾಗ ಮಾತ್ರ ಅಧಿಕಾರಿಗಳು ಭೇಟಿ ಕೊಡುತ್ತಾರೆ. ಆ ಬಳಿಕ ಒಬ್ಬರೂ ಇತ್ತ ಗಮನಹರಿಸುವುದಿಲ್ಲ. ಕುವೆಂಪು ಬಡಾವಣೆಯನ್ನು ಮುಳುಗಡೆ ಪ್ರದೇಶವಾಗಿ ಘೋಷಣೆ ಮಾಡುವ ಮೂಲಕ ನಮಗೆ ಬದಲಿ ಪರಿಹಾರವನ್ನು ತಾಲೂಕು ಆಡಳಿತ ಮಾಡಿಕೊಡಬೇಕು. ಇಲ್ಲವಾದರೆ ನಮ್ಮ ಬದುಕು ಬೀದಿ ಪಾಲಾಗುತ್ತದೆ.
ಅನ್ನಪೂರ್ಣ ಕುವೆಂಪು ಬಡಾವಣೆ ನಿವಾಸಿ, ಹೊಳೆನರಸೀಪುರ