

ಮಂಜುನಾಥ ತಿಮ್ಮಯ್ಯ ಮೈಸೂರು
ಈಗಾಗಲೇ ಕುತೂಹಲ ಕೆರಳಿಸಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎದುರಾಳಿ ಯಾರು?
ಹೀಗೊಂದು ಪ್ರಶ್ನೆ ಕ್ಷೇತ್ರಾದ್ಯಂತ ಪಿಸುಗುಟ್ಟುತ್ತಿದೆ. ಸದ್ಯಕ್ಕೆ ಉತ್ತರ ಸಿಗುತ್ತಿಲ್ಲ. ಪ್ರಬಲ ಅಭ್ಯರ್ಥಿಗಾಗಿ ಕಾಂಗ್ರೆಸ್ ಇನ್ನೂ ಹುಡುಕಾಟ ನಡೆಸುತ್ತಿದೆ. ಹೀಗಾಗಿ, ಯದುವೀರ ವಿರುದ್ಧ ಯಾರು ಕಣಕ್ಕಿಳಿಯುತ್ತಾರೆ ಎಂಬ ಕೌತುಕ ಮೂಡಿಸಿದೆ.
2 ಸಲ ಜಯ ಗಳಿಸಿ, 3 ಸಲ ಸಂಸತ್ ಪ್ರವೇಶಿಸಲು ಕನಸು ಕಾಣುತ್ತಿದ್ದ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪಿಸಿರುವ ಬಿಜೆಪಿ, ಹೊಸಮುಖ ಯದುವೀರ ಅವರಿಗೆ ಈ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಅವಕಾಶ ಕಲ್ಪಿಸಿಕೊಟ್ಟಿದೆ. ಇದರೊಂದಿಗೆ ಪ್ರತಿಸ್ಪರ್ಧಿ ಕಾಂಗ್ರೆಸ್‌ಗೆ ಚೆಕ್‌ಮೇಟ್ ಕೊಟ್ಟಿದ್ದು, ಇದರಿಂದ ಕೈ ಪಡೆ ಗಲಿಬಿಲಿಗೊಂಡಿದೆ.
ಕಳೆದ 4-5 ದಿನಗಳ ಹಿಂದೆಯಷ್ಟೇ ಯದುವೀರ ಹೆಸರು ಸದ್ದು ಮಾಡಿತು. ಈ ಹಿಂದೆ 2014, 2019ರಲ್ಲೂ ಅವರ ಹೆಸರು ಈ ರೀತಿ ಮುನ್ನೆಲೆಗೆ ಬಂದಿತ್ತು. ಆದರೆ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಬಹಿರಂಗವಾಗಿ ಅನೇಕ ಬಾರಿ ಹೇಳಿದ್ದರು. ಈ ಸಲವೂ ಅವರ ಹೆಸರು ಪ್ರಸ್ತಾಪ ಆಯಿತು. ಇದು ನೇಪಥ್ಯಕ್ಕೆ ಸರಿಯಲಿದೆ ಎಂದು ಬಹಳಷ್ಟು ಜನರು ಅಂದುಕೊಂಡಿದ್ದರು.
ಆದರೆ ದಿನ ಕಳೆದಂತೆ ಇವರ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಈ ಸಂಬಂಧ ರಾಜಕೀಯ ಪಡಸಾಲೆಯಲ್ಲೂ ಬಿರುಸಿನ ಚಟುವಟಿಕೆಗಳು ನಡೆದವು. ಈ ನಡುವೆ, ಈ ಸುದ್ದಿಯನ್ನು ಅಲ್ಲಗೆಳೆಯದ ಯದುವೀರ ಸಹ ಜಾಣಮೌನ ವಹಿಸಿದರು. ಬಿಜೆಪಿ ಚುನಾವಣೆಯ 2ನೇ ಪಟ್ಟಿಯಲ್ಲಿ ನಿರೀಕ್ಷೆಯಂತೆ ಅವರು ಹೆಸರು ಘೋಷಣೆ ಆಯಿತು. ಬಳಿಕವೇ ಅವರು ಸಾಮಾಜಿಕ ಜಾಲತಾಣದಲ್ಲಿ ಮೊದಲ ಪ್ರತಿಕ್ರಿಯೆ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ.
ರಾಜಮನೆತನದ ಯದುವೀರ ಹೆಸರು ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್‌ಗೆ ದೊಡ್ಡ ಶಾಕ್ ಕೊಟ್ಟಂತಾಗಿದೆ. ಜನಮಾಸದಲ್ಲಿ ಮೈಸೂರು ಒಡೆಯರ್ ಹೆಸರಿಗೆ ಬಹಳ ತೂಕವಿದೆ. ಇಂತಹ ರಾಜಮನೆತನದ ಯದುವೀರ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕೆಂದು ಇದೀಗ ಕಾಂಗ್ರೆಸ್ ಚಿಂತೆಗೀಡಾಗಿದೆ.
14 ಆಕಾಂಕ್ಷಿಗಳಲ್ಲಿ ಗಟ್ಟಿ ಕಾಣುತ್ತಿಲ್ಲ
ಸದ್ಯಕ್ಕೆ ಕಾಂಗ್ರೆಸ್ ತನ್ನ ರಣತಂತ್ರ ಬದಲಾಯಿಸಲು ಮುಂದಾಗಿದೆ. ಪ್ರಬಲ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಲು ಯೋಜನೆ ರೂಪಿಸುತ್ತಿದೆ. ಆದರೆ ಸದ್ಯಕ್ಕೆ ಅಂತಹ ಅಭ್ಯರ್ಥಿ ಮಾತ್ರ ಇನ್ನೂ ಸಿಕ್ಕಿಲ್ಲ. ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ 14 ಆಕಾಂಕ್ಷಿಗಳಲ್ಲಿ ಪ್ರಬಲ ಅಭ್ಯರ್ಥಿಗಳೇ ಇಲ್ಲ. ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಚಂದ್ರಮೌಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮುಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ವೈದ್ಯ ಶುಶ್ರುತ್ ಗೌಡ, ಎಂಎಲ್‌ಸಿ ವಿಶ್ವನಾಥ್ ಅವರ ಪುತ್ರ ಅಮಿತ್, ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, ಉಪಾಧ್ಯಕ್ಷ ಸೂರಜ್ ಹೆಗಡೆ, ಜೆ.ಜೆ.ಆನಂದ್, ವರುಣ ಮಹೇಶ್ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳು. ಈ ಪೈಕಿ ಮಾಜಿ ಶಾಸಕ ವಾಸು ಇತ್ತೀಚೆಗೆ ನಿಧನರಾಗಿದ್ದಾರೆ.
ಉಳಿದಂತೆ ಗೆಲ್ಲುವ ಕುದುರೆ ಕಾಣುತ್ತಿಲ್ಲ. ಈ ಕ್ಷೇತ್ರದ ಮಾಜಿ ಸಂಸದ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸಹ ಟಿಕೆಟ್ ಕೇಳಿದ್ದಾರೆ. ಮುಖ್ಯಮಂತ್ರಿ ಪುತ್ರ, ಮಾಜಿ ಶಾಸಕ ಡಾ.ಯತೀಂದ್ರ ಹೆಸರು ಸಹ ಪ್ರಸ್ತಾಪವಾಗಿದೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮನಸ್ಸು ಇದೀಗ ಅವರಿಗೂ ಇಲ್ಲ.
ಪಿರಿಯಾಪಟ್ಟಣ ಕ್ಷೇತ್ರದ ಶಾಸಕ, ಪಶುಸಂಗೋಪನೆ, ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರಿಗೆ ಸ್ಪರ್ಧೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರೂ ಹಿಂದೇಟು ಹಾಕುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹಾಲಿ ಶಾಸಕ ಎಸ್.ಟಿ. ಸೋಮಶೇಖರ್ ಸಹ ಮೈಸೂರು ಕಡೆಗೆ ಬರಲು ತಯಾರಿಲ್ಲ. ಹೀಗಾಗಿ ಸಮರ್ಥ ಹುರಿಯಾಳು ದೊರೆಯುತ್ತಿಲ್ಲ. ಈಗಿರುವ ಆಕಾಂಕ್ಷಿಗಳಲ್ಲಿ ಪ್ರಬಲ ಅಭ್ಯರ್ಥಿಯೂ ಸಿಗುತ್ತಿಲ್ಲ. ಆದ್ದರಿಂದ ಏನು ಮಾಡಬೇಕು ಎಂಬ ಯೋಚನೆ ಕೈ ನಾಯಕರಿಗೆ ಕಾಡುತ್ತಿದೆ.
ಬದಲಾದ ಚಿತ್ರಣ, ಲೆಕ್ಕಾಚಾರ
ಬಿಜೆಪಿ ಅಭ್ಯರ್ಥಿ ಘೋಷಣೆಗೂ ಮುನ್ನವೇ ಕೆಪಿಸಿಸಿ ಅರ್ಜಿ ಸಲ್ಲಿಸಿರುವ 14 ಆಕಾಂಕ್ಷಿಗಳ ಪೈಕಿ ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್, ಚಂದ್ರಮೌಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ.ವಿಜಯಕುಮಾರ್ ಹೆಸರನ್ನು ಅಂತಿಮ ಸುತ್ತಿಗೆ ಪರಿಗಣಿಸಲಾಗಿತ್ತು. ಯಾರು ಸಿಗದಿದ್ದರೆ ಎಂ.ಲಕ್ಷ್ಮಣ್ ಅವರನ್ನು ಅಖಾಡಕ್ಕಿಳಿಸಿ ಒಂದು ಕೈ ನೋಡಲು ಕಾಂಗ್ರೆಸ್ ಸಹ ಆಲೋಚಿಸಿತ್ತು. ಇದು ಸಂಸದ ಪ್ರತಾಪ್ ಸಿಂಹ ವಿರುದ್ಧದ ಕಾರ್ಯತಂತ್ರವಾಗಿತ್ತು. ಆದರೀಗ ರಾಜಕೀಯ ಚಿತ್ರಣ ಬದಲಾಗಿದೆ. ರಾಜಕೀಯ ಲೆಕ್ಕಾಚಾರ ತಿರುವುಮುರುವು ಆಗಿದೆ. ಕೈ ಪಡೆಯಿಂದ ಯಾರು ಅಖಾಡಕ್ಕಿಳಿಯುತ್ತಾರೆ ಎಂದು ನೋಡಬೇಕಿದೆ.
ಅರಸು ಸಮುದಾಯದ ಯದುವೀರ ವಿರುದ್ಧ ಪ್ರತಿಸ್ಪರ್ಧಿಯಾಗಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಅವರ ಮೊಮ್ಮಗ, ಅದೇ ಸಮುದಾಯದ ಸೂರಜ್ ಹೆಗ್ಡೆ ಹೆಸರು ಮುನ್ನಲೆಗೆ ಬಂದಿದೆ. ಇವರು ಕೆಪಿಸಿಸಿ ಉಪಾಧ್ಯಕ್ಷರು, ಕರ್ನಾಟಕ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು. ರಾಷ್ಟ್ರೀಯ ಕಾಂಗ್ರೆಸ್ ಚುನಾವಣಾ ಸ್ಕ್ರೀನಿಂಗ್ ಸಮಿತಿ ಸದಸ್ಯರು. ಆದಾಗ್ಯೂ ಇವರು ಕ್ಷೇತ್ರದ ಮತದಾರರಿಗೆ ಪರಿಚಿತರಲ್ಲ. ಯದುವೀರಗೆ ಇವರು ಸರಿಸಾಟಿ ಆಗುವುದಿಲ್ಲ ಎಂಬ ಮಾತುಗಳು ಕೈ ಪಾಳಯದಲ್ಲೇ ವ್ಯಕ್ತವಾಗಿದೆ.
ನಾಯಕ ನಟ ‘ಡಾಲಿ’ ಧನಂಜಯ್ ಸೆಳೆಯಲು ಕಾಂಗ್ರೆಸ್ ಈಗಲೂ ಪ್ರಯತ್ನ ಮುಂದುವರಿಸಿದೆ. ಕೆಲ ದಿನಗಳ ಹಿಂದೆ ಇವರ ಹೆಸರು ಪ್ರಸ್ತಾವನೆ ಆಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಧನಂಜಯ್ ‘ನಾನು ರಾಜಕೀಯಕ್ಕೆ ಬರಲ್ಲ. ಚುನಾವಣೆಗೆ ಸ್ಪರ್ಧೆ ಮಾಡಲ್ಲ’ ಎಂದು ಸ್ಪಷ್ಟಪಡಿಸಿದ್ದರು.
ಯದುವೀರ ಬಿಜೆಪಿ ಅಭ್ಯರ್ಥಿ ಆಗುತ್ತಿದ್ದಂತೆ ‘ಡಾಲಿ’ ಅವರನ್ನು ಪಕ್ಷಕ್ಕೆ ಎಳೆದುಕೊಳ್ಳಲು ಕೈ ಪಡೆ ತೀವ್ರ ಕಸರತ್ತು ನಡೆಸಿದೆ. ಹಣ್ಣು ಬುಟ್ಟಿಗೆ ಬೀಳುತ್ತದೆಯೋ ಇಲ್ಲವೋ ಕಾಯ್ದು ನೋಡಬೇಕು.