ಕಾಶ್ಮೀರಿ ಮುಕ್ತಿ ಪ್ಲಕಾರ್ಡ್ ಹಿಡಿದ ಆರುದ್ರಾ ಯಾರು? ಏನಿವಳ ಹಿನ್ನೆಲೆ?

Aarudra with placard 21 FEB 20
Published on

ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ ಯುವತಿ ಅಮೂಲ್ಯ ಲಿಯೋನಾಳ ವರ್ತನೆ ಖಂಡಿಸಿ ಕೆಲವು ಸಂಘಟನೆಗಳವರು ಶುಕ್ರವಾರ ಬೆಳಗ್ಗೆ ಟೌನ್ ಹಾಲ್​ ಎದುರು ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಅಲ್ಲಿ ಆಗಮಿಸಿ ಪ್ರತಿಭಟನಾಕಾರರಿಂದ ಸ್ವಲ್ಪ ದೂರದಲ್ಲಿ ಕುಳಿತಿದ್ದ ಯುವತಿ ಫ್ರೀ ಕಾಶ್ಮೀರ ಪ್ಲಕಾರ್ಡ್ ಹಿಡಿದಿದ್ದಳು. ಇದನ್ನು ಗಮನಿಸಿದ ಪ್ರತಿಭಟನಾಕಾರರು ಆಕೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸರ ಮೇಲೆ ಒತ್ತಡ ಹೇರಿದರು.

ಹೀಗಾಗಿ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದ್ದಾರೆ. ಪ್ಲಕಾರ್ಡ್ ಹಿಡಿದ ಯುವತಿ ಹೆಸರು ಆರುದ್ರಾ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಮನೆ ಇದ್ದು, ಆಕೆಯ ವಿರುದ್ಧ ಸಮುದಾಯಗಳ ನಡುವೆ ದ್ವೇಷ ಹರಡುವ ಮತ್ತು ಶತ್ರುತ್ವ ಹರಡುವ ಕೆಲಸ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋಡ್ ಹೇಳಿದ್ದಾರೆ.

ಆ ಯುವತಿಯ ಅಪ್ಪ- ಅಮ್ಮ ಆಕೆಗೆ ಇಟ್ಟ ಹೆಸರು ಅನ್ನಪೂರ್ಣ. ಆದರೆ, ಆಕೆ ಎಡಪಂಥೀಯ ಚಿಂತನೆಗಳ ಪ್ರಭಾವದಿಂದಾಗಿ ಮನೆಯಿಂದ ದೂರ ಇದ್ದು, ಪಿಜಿಯಲ್ಲಿ ವಾಸವಿದ್ದಳು. ತಂದೆ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದರೆ, ತಾಯಿ ಫ್ಯಾಷನ್​ ಇಂಜಿನಿಯರ್​, ಅಜ್ಜಿ ಕೂಡ ಮನೆಯಲ್ಲೇ ಇದ್ದಾರೆ. ಯುವತಿ ಅನ್ನಪೂರ್ಣ ಮನೆಯಿಂದ ದೂರ ಇದ್ದು, ತನ್ನ ಹೆಸರನ್ನು ಆರುದ್ರಾ ಎಂದು ಬದಲಾಯಿಸಿಕೊಂಡಿದ್ದಳು.

ಸದ್ಯ ಮಲ್ಲೇಶ್ವರಂನಲ್ಲಿರುವ ಆಕೆಯ ಅಪ್ಪ-ಅಮ್ಮನ ಮನೆಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಕೊಪ್ಪದಲ್ಲಿ ಅಮೂಲ್ಯ ಲಿಯೋನಾ ಮನೆಯ ಮೇಲೆ ದಾಳಿ ನಡೆದ ಕಾರಣ ಮುಂಜಾಗ್ರತಾಕ್ರಮವಾಗಿ ಈ ಭದ್ರತೆಯನ್ನು ಆಕೆಯ ಹೆತ್ತವರಿಗೆ ಪೊಲೀಸರು ಒದಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net