ಧರ್ಮಸ್ಥಳದ ಷಡ್ಯಂತ್ರದ ಸೂತ್ರಧಾರಿ ಯಾರು ?

Published on

ಬಳ್ಳಾರಿ : ಧರ್ಮಸ್ಥಳ ಪ್ರಕರಣದ ಷಡ್ಯಂತ್ರ ರೂಪಿಸಿದ ಮೂಲ ಸೂತ್ರಧಾರಿ ಯಾರು ? ಎಂಬ ಪತ್ತೆಗಾಗಿ ತನಿಖೆಯನ್ನು ಕೇಂದ್ರದ ಸಿಬಿಐ ಅಥವಾ ಎನ್‌ಐಎಗೆ ವಹಿಸಬೇಕು ಎಂದು ಮಾಜಿ ಸಚಿವ, ಹಾಲಿ ಶಾಸಕ ಜಿ.ಜನಾರ್ದನರೆಡ್ಡಿ ಒತ್ತಾಯಿಸಿದರು.

ಈ ಪ್ರಕರಣ ಹೊರ ರಾಜ್ಯ ಹಾಗೂ ಹೊರ ದೇಶಗಳಿಗೆ ಹಬ್ಬಿರುವ ಸಂಶಯವಿದೆ. ಆದ್ದರಿಂದ, ರಾಜ್ಯದ ತನಿಖಾ ಸಂಸ್ಥೆಯಾಗಿರುವ ಎಸ್‌ಐಟಿಯೂ ಬೇರೆ ರಾಜ್ಯಗಳಿಗೆ ಒಳಪಟ್ಟಿರುವ ಆರೋಪಿಗಳನ್ನು ವಿಚಾರಣೆ ನಡೆಸುವುದು ಕಷ್ಟ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ವಿಚಾರಣೆ ನಡೆಸಿ ಸತ್ಯಾಂಶ ಹೊರಬಂದಿದೆ. ಆದರೆ, ಎಸ್‌ಐಟಿ ರಾಜ್ಯದ ತನಿಖಾ ಸಂಸ್ಥೆಯಾಗಿದ್ದು, ಷಡ್ಯಂತ್ರದ ಪ್ರಮುಖ ರೂವಾರಿ ಸಸಿಕುಮಾರ ಸೆಂಥಿಲ್ ಕಾಂಗ್ರೆಸ್ ಸಂಸದರಾಗಿವುದರಿಂದ ವಿಚಾರಣೆಗೆ ಕರೆಯುವುದು ಅನುಮಾನವಿದೆ. ಹೀಗಾಗಿ ಸಿಬಿಐಗೆ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಎಡಪಂಥೀಯ ವಿಚಾರಧಾರೆ ಹೊಂದಿರುವ ಸಸಿಕುಮಾರ ಸೆಂಥಿಲ್ ಎಐಸಿಸಿ ನಾಯಕ ರಾಹುಲ್ ಗಾಂಧಿಯ ಬಲಗೈ ಬಂಟನಾಗಿದ್ದೇನೆ. ಅವರ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಎಸ್‌ಐಟಿ ರಚಿಸಿದ್ದಾನೆ ಎಂದು ಕಿಡಿಕಾರಿದರು.

ಕರಾವಳಿ ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಿದ್ದು ಅದನ್ನು ತುಳಿಯುವ ಯತ್ನಕ್ಕೆ ಸೆಂಥಿಲ್ ಕೈ ಹಾಕಿದ್ದಾರೆ. ಈ ಹಿಂದೆ ಈ ಪ್ರಕರಣದಲ್ಲಿ ತಮಿಳುನಾಡು ಸಂಸದ ಸಸಿಕುಮಾರ ಸೆಂಥಿಲ್ ಭಾಗಿಯಾಗಿದ್ದಾರೆ ಎಂಬುದಾಗಿ ಆರೋಪಿಸಿದ್ದರಿಂದ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣವನ್ನೇ ಸಿಬಿಐಗೆ ವಹಿಸಿ ಎಂಬುದಾಗಿ ಸಿಎಂಗೆ ಆಗ್ರಹಿಸಬೇಕಿತ್ತು. ಇಂತಹ ಹಲವು ಪ್ರಕರಣಗಳನ್ನು ಎದುರಿಸಿರುವೆ ಕಾನೂನು ಮೂಲಕ ಹೋರಾಟ ನಡೆಸುವೆ. ತಮಿಳುನಾಡಿನಲ್ಲಿ ಬಿಜೆಪಿ ಬಲಿಷ್ಠವಾಗುತ್ತಿದ್ದು ಇದನ್ನು ಸಹಿಸದೆ ಬಿಜೆಪಿ ನಾಯಕ ಅಣ್ಣಾಮಲೈ ವಿರುದ್ಧ ಸಹ ಸೆಂಥಿಲ್ ಅವರು ಆರೋಪ ಮಾಡುತ್ತಿದ್ದಾರೆ ಎಂದರು. ಮುಖಂಡರಾದ ದಮ್ಮೂರು ಶೇಖರ್, ಹನುಮಂತು, ಮಲ್ಲೇಶಕುಮಾರ, ವೆಂಕಟರಮಣರೆಡ್ಡಿ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net