ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಮಲ-ದಳ ಮೈತ್ರಿ ಅಭ್ಯರ್ಥಿ ಯಾರು?

BJP JDS alliance
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು..?
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ ಇದು..!
ರಾಜಕೀಯ, ಸಾರ್ವಜನಿಕ ವಲಯದಲ್ಲಿ ಉಭಯ ಪಕ್ಷಗಳ ಪರವಾಗಿ ಯಾರು ಕಣಕ್ಕಿಳಿಯುತ್ತಾರೆ ಎಂಬ ಕುತೂಹಲ ಮೂಡಿದೆ. ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ಆಗುತ್ತಿದೆ. ಅಭಿಪ್ರಾಯ ಮಂಡನೆ, ಅದಕ್ಕೆ ಪ್ರತಿಕ್ರಿಯೆ ಪಡೆದುಕೊಳ್ಳುವ ಮೂಲಕ ಜನರ ನಾಡಿಮಿಡಿತ ಅರಿತುಕೊಳ್ಳಲು ಪ್ರಯತ್ನಿಸಲಾಗುತ್ತಿದೆ.

ಕಳೆದ ಬಾರಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಏರ್ಪಟ್ಟಿತ್ತು. ಉಭಯ ಪಕ್ಷಗಳ ಪರವಾಗಿ ಕಾಂಗ್ರೆಸ್‌ನ ಸಿ.ಎಚ್.ವಿಜಯಶಂಕರ್ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದರು. ಇದೀಗ ರಾಜಕೀಯ ಚಿತ್ರಣ ಬದಲಾಗಿದೆ. ಈ ಸಲ ಜೆಡಿಎಸ್- ಬಿಜೆಪಿ ಒಂದಾಗಿ ಲೋಕಸಭಾ ಚುನಾವಣೆಯನ್ನು ರಾಜ್ಯದಲ್ಲಿ ಎದುರಿಸುತ್ತಿವೆ. ಇನ್ನೂ ಅಭ್ಯರ್ಥಿಗಳ ಹೆಸರು ಅಂತಿಮವಾಗಿಲ್ಲ.


ಮೈತ್ರಿಕೂಟದಲ್ಲಿ ಇಬ್ಬರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಬಿಜೆಪಿಯಿಂದ ಮೊದಲ ಹೆಸರು ಹಾಲಿ ಸಂಸದ ಪ್ರತಾಪ್ ಸಿಂಹ. ಜೆಡಿಎಸ್‌ನಿಂದ ಇನ್ನೊಂದು ಹೆಸರು ಮಾಜಿ ಶಾಸಕ ಸಾ.ರಾ.ಮಹೇಶ್. ಉಭಯ ಆಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂಬ ಸಮಾಲೋಚನೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ. ಈ ಇಬ್ಬರ ಪೈಕಿ ಯಾರಿಗೆ ಟಿಕೆಟ್ ಕೊಟ್ಟರೆ ಹೇಗೆ ಅನುಕೂಲ- ಅನನಕೂಲ, ಸಾಧಕ-ಬಾಧಕ ಕುರಿತು ತುರುಸಿನ ವಿಶ್ಲೇಷಣೆಗಳು ನಡೆಯುತ್ತಿವೆ. ಇದು ಕೌತುಕವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.

ಯಾರಿಗೆ ಬಿಟ್ಟುಕೊಡಬೇಕು ಎಂಬುದು ನಿರ್ಧಾರವಾಗಿಲ್ಲ


ಬಿಜೆಪಿ ಮತ್ತು ಜೆಡಿಎಸ್ ಪೈಕಿ ಮೈಸೂರು-ಕೊಡಗು ಕ್ಷೇತ್ರವನ್ನು ಯಾರಿಗೆ ಬಿಟ್ಟುಕೊಡಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ಸಂಬಂಧ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಇತ್ತೀಚೆಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದ್ದಾರೆ. ಅ.22ರಂದು ಅಯೋಧ್ಯೆದಲ್ಲಿ ರಾಮಮಂದಿರ ಉದ್ಘಾಟನೆ ಬಳಿಕ ಎರಡು ಪಕ್ಷಗಳು ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಲಿದ್ದು, ಈ ತಿಂಗಳ ಅಂತ್ಯದೊಳಗೆ ಅಂತಿಮ ನಿರ್ಧಾರ ಹೊರ ಬೀಳುವ ನಿರೀಕ್ಷೆ ಇದೆ.


ಮೈಸೂರು-ಕೊಡಗು ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣು ಹಾಕಿದೆ. ಇದಕ್ಕಿಂತ ಹೆಚ್ಚಾಗಿ ಹಾಸನ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೇಲೆ ಹೆಚ್ಚಿನ ಒಲವು ತೋರುತ್ತಿದೆ. ಈ ಕ್ಷೇತ್ರಗಳಲ್ಲೇ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಜೆಡಿಎಸ್ ಹೆಚ್ಚಿನ ಆಸಕ್ತಿ ತೋರುತ್ತಿದೆ. ಮೈಸೂರು ಕ್ಷೇತ್ರದ ಕಡೆಗೆ ಜಾ.ದಳ ನಾಯಕರು ಹೆಚ್ಚಿನ ಉತ್ಸುಕತೆ ತೋರುತ್ತಿಲ್ಲ. ಹೀಗಾಗಿ, ಜೆಡಿಎಸ್‌ಗೆ ಈ ಕ್ಷೇತ್ರ ಒಲಿಯಲಿದೆಯೋ…ಇಲ್ಲವೋ ಎಂಬ ಗೊಂದಲ ಮೂಡಿದೆ.


ಬಿಜೆಪಿ ಸಹ ಈ ಕ್ಷೇತ್ರವನ್ನು ಬಿಟ್ಟುಕೊಡಲು ತಯಾರಿಲ್ಲ. ಜೆಡಿಎಸ್-ಕಾಂಗ್ರೆಸ್ ಪ್ರಾಬಲ್ಯ ಇರುವ ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಸತತವಾಗಿ ಎರಡು ಸಲ ಸುಲಭವಾಗಿ ಜಯ ಸಾಧಿಸಿದೆ. ಇದು ಈ ಭಾಗದಲ್ಲಿ ಭದ್ರ ಬುನಾದಿ ಕಂಡುಕೊಳ್ಳಲು ಸಾಧ್ಯವಾಗಿದೆ. ಇದನ್ನು ಹೀಗೆ ಉಳಿಸಿಕೊಂಡು ಹೋಗಲು ಅದು ಕಾರ್ಯತಂತ್ರ ರೂಪಿಸಿದೆ. ಒಂದು ವೇಳೆ, ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟರೆ ಹಳೇ ಮೈಸೂರು ಪ್ರಾಂತ್ಯದಲ್ಲೇ ಪ್ರಾತಿನಿಧ್ಯ ಇಲ್ಲದಂತಾಗುತ್ತದೆ. ಹೀಗಾಗಿ, ಜೆಡಿಎಸ್‌ಗೆ ಈ ಕ್ಷೇತ್ರ ದಕ್ಕುವ ಸಾಧ್ಯತೆ ಕಡಿಮೆ ಎಂಬ ಬಿಜೆಪಿ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಹಳೇ ಮೈಸೂರು ಪ್ರಾಂತ್ಯದಲ್ಲಿ ಹಾಸನ, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲು ಬಿಜೆಪಿ ಮುಂದಾಗಿದೆ. ಇದುವೇ ಅಂತಿಮವಾದರೆ ಮೈಸೂರು ಕ್ಷೇತ್ರ ಮೇಲಿನ ಒಳಾಸೆಯನ್ನು ದಳ ನಾಯಕರು ಕೈಬಿಡಬೇಕಾಗುತ್ತದೆ.

ಸಾ.ರಾ.ಮಹೇಶ್ ಅಭ್ಯರ್ಥಿ ಆಗಬಹುದೇ?


ಕೊನೆ ಘಳಿಗೆಯಲ್ಲಿ ರಾಜಕೀಯ ಲೆಕ್ಕಾಚಾರ ಅದಲು-ಬದಲು ಸಹ ಆಗಬಹುದು. ಬಿಜೆಪಿ ಮೇಲೆ ಒತ್ತಡ ಹಾಕಿ ಈ ಕ್ಷೇತ್ರವನ್ನು ಜೆಡಿಎಸ್ ಪಡೆದುಕೊಳ್ಳಬಹುದು. ಇದು ಕಾರ್ಯಗತವಾದರೆ ಮಾಜಿ ಸಚಿವ ಸಾ.ರಾ.ಮಹೇಶ್ ಅಭ್ಯರ್ಥಿ ಆಗುವ ಸಾಧ್ಯತೆ ಇದೆ. ಇವರನ್ನು ಹೊರತುಪಡಿಸಿ ಪಕ್ಷದಲ್ಲಿ ಪ್ರಬಲ ಅಭ್ಯರ್ಥಿಗಳು ಗೋಚರವಾಗುತ್ತಿಲ್ಲ. ಸಾ.ರಾ. ಅವರು ‘ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಟಿಕೆಟ್ ಆಕಾಂಕ್ಷಿ ಸಹ ಅಲ್ಲ’ ಎಂದು ಬಹಿರಂಗವಾಗಿ ಹೇಳಿದ್ದಾರೆ. ಆದಾಗ್ಯೂ, ಆ ಪಕ್ಷ ವಲಯದಲ್ಲಿ ಇವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.
‘ಮೈಸೂರು ಕ್ಷೇತ್ರವನ್ನು ಬಿಜೆಪಿಗೆ ಬಿಡಲು ಜೆಡಿಎಸ್ ತಯಾರಿಲ್ಲ. ಈ ಕ್ಷೇತ್ರದಿಂದ ಸಾ.ರಾ.ಮಹೇಶ್ ಅವರಿಗೆ ಟಿಕೆಟ್ ಕೊಡಿಸಲು ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದು, ಈ ಮೂಲಕ ಪ್ರತಾಪ್ ಸಿಂಹ ಟಿಕೆಟ್ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಸಾ.ರಾ.ಮಹೇಶ್ ಅವರು ಸ್ಪರ್ಧಿಸುವುದಿಲ್ಲ ಎಂಬ ಮಾತಿನಲ್ಲಿಯೇ ಸ್ಪರ್ಧೆ ಬಗ್ಗೆ ಸುಳಿವಿದೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ಪ್ರತಾಪ್ ಸಿಂಹಗೆ ಟಿಕೆಟ್ ಸಿಗ್ತಾ?


ಒಂದು ವೇಳೆ ಈ ಕ್ಷೇತ್ರವು ಜೆಡಿಎಸ್ ಪಾಲಾದರೆ, 3ನೇ ಬಾರಿ ಸ್ಪರ್ಧೆ ಮಾಡಲು ತಯಾರಿ ನಡೆಸಿರುವ ಪ್ರತಾಪ್ ಸಿಂಹ ಅತಂತ್ರರಾಗಲಿದ್ದಾರೆ. ಅವರ ಮುಂದಿನ ರಾಜಕೀಯ ಭವಿಷ್ಯ ಏನು ಎಂಬ ಪ್ರಶ್ನೆ ಮೂಡುತ್ತದೆ. ಈ ಆತಂಕದಿಂದ ಇತ್ತೀಚೆಗೆ ಪ್ರತಾಪ್ ಸಿಂಹ ಅವರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಅಡೆತಡೆ ನಿವಾರಣೆಗೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಡಾ.ಯತೀಂದ್ರ ಸ್ಪರ್ಧಿಸುತ್ತಾರೆಯೇ?


ಕಾಂಗ್ರೆಸ್‌ನಿಂದಲೂ ಅಭ್ಯರ್ಥಿ ಅಂತಿಮವಾಗಿಲ್ಲ. ಕಾಂಗ್ರೆಸ್ ಟಿಕೆಟ್ ಬಯಸಿ 14 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ, ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೆಸರನ್ನು ತೇಲಿ ಬಿಡಲಾಗಿದೆ. ಆದರೆ, ಇವರು ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿಯನ್ನೇ ಹಾಕಿಲ್ಲ. ಜತೆಗೆ, ‘ನಾನು ಟಿಕೆಟ್ ಕೇಳಿಲ್ಲ. ಪಕ್ಷ ಬಯಸಿದರೆ ಲೋಕಸಭಾ ಚುನಾವಣೆಗೆ ಸಿದ್ಧ’ ಎಂಬ ಸಂದೇಶವನ್ನು ಡಾ.ಯತೀಂದ್ರ ಅನೇಕ ಸಲ ನೀಡಿದ್ದಾರೆ. ಇವರ ಮನದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಆಸೆ ಇದೆ. ಆದರೆ, ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿಲ್ಲ ಎಂದು ಆ ಪಕ್ಷದ ನಾಯಕರು ಹೇಳುತ್ತಿದ್ದಾರೆ.


ಈ ನಡುವೆ, ಪಿರಿಯಾಪಟ್ಟಣ ಕ್ಷೇತ್ರದ ಶಾಸಕ, ಸಚಿವ ಕೆ.ವೆಂಕಟೇಶ್ ಅವರು, ‘ಮೈಸೂರು ಕ್ಷೇತ್ರದಿಂದ ಡಾ.ಯತೀಂದ್ರ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಕೈ ಪಾಳಯದಲ್ಲೂ ಟಿಕೆಟ್ ಗೊಂದಲ ಸೃಷ್ಟಿಯಾಗಿದೆ. ಯಾರು ಕೈ ಅಭ್ಯರ್ಥಿ ಆಗಲಿದ್ದಾರೆ ಎಂಬ ಕೌತಕ ಮೂಡಿದೆ.

ರಾಜಕೀಯ ಬಲಾಬಲ


ಈ ಸಲ ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 5 ಕ್ಷೇತ್ರದ ಮೇಲೆ ಹಿಡಿತ ಸಾಧಿಸಿಕೊಂಡಿದೆ. ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಚಾಮರಾಜ, ನರಸಿಂಹರಾಜ ಕ್ಷೇತ್ರದಲ್ಲಿ ಕೈ ಮೇಲುಗೈ ಸಾಧಿಸಿದೆ. ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಜಯ ಗಳಿಸಿದ್ದರೆ, ಚಾಮರಾಜ ಕ್ಷೇತ್ರ ಮಾತ್ರ ಬಿಜೆಪಿಗೆ ಒಲಿದಿದೆ. ಹೀಗಾಗಿ, ಮೂರು ಪಕ್ಷಗಳು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಾಜಕೀಯ ತಂತ್ರ ರೂಪಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net