ವಿಧಿಯಾಟಕ್ಕೆ ಹೊಣೆ ಯಾರು...?

31 08 2025_BGR_RURAL-PAGE_02
ಪಟಾಕಿ ಅವಡದಲ್ಲಿ ಗಾಯಗೊಂಡವರ ಆರೋಗ್ಯವನ್ನ ಸಚಿವ ಕೆ.ಎಚ್​ ಮುನಿಯಪ್ಪ ವಿಚಾರಿಸಿದರು. ಡಿಸಿ ಎ.ಬಿ ಬಸವರಾಜು, ಎಸಿ ದುರ್ಗಾಶ್ರೀ, ಡಿವೈಎಸ್ಪಿ ರವಿ ಇತರರು ಇದ್ದರು.
Published on

ದೊಡ್ಡಬಳ್ಳಾಪುರ: ಇವರದ್ದು ಆರತಿಗೊಬ್ಬ ಕೀರ್ತಿಗೊಬ್ಬ ಎಂಬಂತೆ ಇಬ್ಬರು ಮಕ್ಕಳನ್ನು ಪಡೆದಿದ್ದ ಕುಟುಂಬ. ತಂದೆ ಶ್ರೀನಿವಾಸ ರಾವ್​ ಪತ್ನಿ ವೆಂಕೂಬಾಯಿ ದಂಪತಿ, ಇಬ್ಬರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಎದೆ ಎತ್ತರಕ್ಕೆ ಬೆಳೆಸಿದ್ದರು. ಎಸ್ಸೆಸ್ಸೆಲ್ಸಿ ನಂತರ ಉನ್ನತ ಶಿಕ್ಷಣ ಪಡೆಯುವ ಕನಸು ಕಂಡಿದ್ದ ವಿದ್ಯಾರ್ಥಿಗಳ ಜೀವನದಲ್ಲಿ ವಿಧಿ ಬೇರೆನೇ ಆಟವಾಡಿದೆ. ವಿಧಿಯಾಟಕ್ಕೆ ತಂದೆ ತಾಯಿಯ ಕನಸುಗಳು ನುಚ್ಚು ನೂರಾಗಿವೆ. ಮೊದಲ ಮಗ ಗಗನ್​ ನೀರಿನಲ್ಲಿ ಮುಳುಗಿ ಮೃತಪಟ್ಟರೇ, ಎರಡನೇ ಮಗ ಧನುಷ್​ ರಾವ್​ ಪಟಾಕಿ ಸಿಡಿದು ಕೊನೆಯುಸಿರೆಳೆದಿದ್ದಾನೆ.

ಹೌದು..! ನಗರದ ಮುತ್ತೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಪವರ್​ ಲಿಫ್ಟರ್​ ವಾಹನದ ಇಂಜಿನ್​ ಮೇಲೆ ಇಟ್ಟಿದ್ದ ಪಟಾಕಿಗಳು ಸಿಡಿದು ಮುತ್ತೂರಿನ ಬಾಲಕ ಧನುಷ್​ ರಾವ್​ ಮೃತಪಟ್ಟಿದ್ದಾನೆ. ತಂದೆ ಶ್ರೀನಿವಾಸರಾವ್​ ನಿತ್ಯ ಕೂಲಿ ಕೆಲಸ ಮಾಡಿ, ತಾಯಿ ವೆಂಕೂಬಾಯಿ ಗಾರ್ಮೆಂಟ್ಸ್​ನಲ್ಲಿ ದುಡಿದು ಸಾಕಿ ಸಲುಹಿದ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಇಬ್ಬರು ಮಕ್ಕಳಿದ್ದ ಸುಂದರ ಕುಟುಂಬದಲ್ಲಿ ವಿಧಿ ಅವರ ಜೀವನದ ಸಂತೋಷವನ್ನೇ ಕಸಿದುಕೊಂಡಿದೆ. ಶ್ರೀನಿವಾಸ ದಂಪತಿಗೆ ಇಬ್ಬರು ಗಂಡು ಮಕ್ಕಳು. ಮೊದಲ ಮಗ ಗಗನ್​ ಕಳೆದ ವರ್ಷ ಕೆರೆಯಲ್ಲಿ ಆಡುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಎಸ್ಸೆಸ್ಸೆಲ್ಸಿ ಓದುತ್ತಿದ್ದ ಹುಡುಗನ ಕಳೆದುಕೊಂಡು ನೋವಿನಲ್ಲಿದ್ದ ಕುಟುಂಬಕ್ಕೆ ಗಣೇಶ ಹಬ್ಬ ಮತ್ತೊಂದು ಆಘಾತ ತಂದೊಡ್ಡಿದೆ. ಮನೆಯ ಬಳಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದ ಧನುಶ್​ ರಾವ್​ ಮೇಲೆ ಪಟಾಕಿ ಸಿಡಿದು ಕೊನೆಯುಸಿರೆಳೆದಿದ್ದಾನೆ.

ಕುಸಿದು ಬಿದ್ದ ತಾಯಿ : ಎರಡನೇ ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆ ತಾಯಿ ವೆಂಕೂಬಾಯಿ ಕುಸಿದು ಬಿದ್ದಿದ್ದು, ಕೂಡಲೇ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದಾರೆ. ಮಕ್ಕಳ ಸಾವಿನ ನೋವು ಕುಟುಂಬಸ್ಥರಿಗೆ ಹೇಳತೀರದ್ದಾಗಿತ್ತು.

ಪ್ರಕರಣ ದಾಖಲು : ಘಟನೆಗೆ ಸಂಬಂಧಿಸಿದಂತೆ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದ್ದ ಮಾರುತಿ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ. ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net