

ಮಲ್ಲು ಕಳಸಾಪುರ ಲಕ್ಷ್ಮೇಶ್ವರ
ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ಗದಗ ಜಿಲ್ಲೆಯ ಮಾಗಡಿ ಕೆರೆಗೆ ಪ್ರತಿವರ್ಷದಂತೆ ಈ ವರ್ಷವೂ ವಿದೇಶಗಳಿಂದ ಬಾನಾಡಿಗಳು ಬಂದಿದ್ದು, ಕೆರೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಆದರೆ, ಅತ್ಯಂತ ಸೂಕ್ಷ್ಮವಾಗಿರುವ ಈ ಹಕ್ಕಿಗಳ ರಕ್ಷಣೆಗೆ ಸಂಬಂಧಪಟ್ಟವರು ಗಮನಹರಿಸದಿರುವುದು ಪಕ್ಷಿಗಳ ಜೀವಕ್ಕೆ ಕುತ್ತು ತರುವಂತಿದೆ.
ಕೆರೆಯ ಸುತ್ತಲೂ ಗಲೀಜಿನಿಂದ ಕೂಡಿದ್ದು ಪಕ್ಷಿಗಳ ಪ್ರಾಣಕ್ಕೆ ಆಪತ್ತು ತರುವ ಲಕ್ಷಣಗಳಿವೆ. ಮಾಗಡಿ ಪಕ್ಷಿಧಾಮಕ್ಕೆ ಕಳೆದ ವರ್ಷ ರಾಮ್ಸರ್ ಕನ್ವೆನ್ಷನ್ ಅಡಿ ರಾಮ್ಸರ್ ಸೈಟ್ (ಜೌಗು ಪ್ರದೇಶ) ಎಂಬ ಅಂತಾರಾಷ್ಟ್ರೀಯ ಮಾನ್ಯತೆ ದೊರಕಿದೆ. ಉತ್ತರ ಕರ್ಣಾಟಕದ ರಂಗನತಿಟ್ಟು ಎಂದು ಕರೆಯುವ 138 ಎಕರೆ ವಿಸ್ತಾರದ ಮಾಗಡಿ ಕೆರೆಗೆ ಪ್ರತಿವರ್ಷ ಚಳಿಗಾಲದಲ್ಲಿ ಸಾವಿರಾರು ವಿದೇಶಿ ಪಕ್ಷಿಗಳು ಬರುತ್ತವೆ. ರಾಮ್ಸರ್ ಸೈಟ್ ಘೋಷಣೆಯಿಂದ ಇಲ್ಲಿಗೆ ಬರುವ ವಿದೇಶಿ ಹಕ್ಕಿಗಳ ದೃಷ್ಟಿಕೋನದಿಂದ ಕಾನೂನು ರಕ್ಷಣೆ ಸಿಗಲಿದೆ. ಮತ್ತು ಸರ್ವತೋಮುಖ ಅಭಿವೃದ್ಧಿ ಹೊಂದಿ ವಿಶ್ವಮಾನ್ಯ ಪ್ರವಾಸಿ ತಾಣವಾಗಲಿದೆ. ರಾಮ್ಸರ್ ಪಟ್ಟಿಯ ಗುರಿಯು ಜೌಗು ಪ್ರದೇಶಗಳ ಅಂತಾರಾಷ್ಟ್ರೀಯ ಜಾಲವನ್ನು ಅಭಿವೃದ್ಧಿಪಡಿಸಿ, ಸಂರಕ್ಷಿಸಿ ನಿರ್ವಹಿಸುವುದಾಗಿದೆ. ಆದರೆ, ಎಲ್ಲವೂ ಘೋಷಣೆಗೆ ಮಾತ್ರ ಸೀಮಿತವಾದಂತಾಗಿದೆ ಇಲ್ಲಿನ ಪರಿಸ್ಥಿತಿ.
ಕೆರೆಯ ಸುತ್ತಲಿನ ಪ್ರದೇಶವನ್ನೊಮ್ಮೆ ಗಮನಿಸಿದರೆ ಪ್ರತಿಯೊಬ್ಬರೂ ತಲೆತಗ್ಗಿಸಲೇಬೇಕು. ಕೆರೆಯ ಸುತ್ತಲಷ್ಟೆ ಅಲ್ಲದೆ, ಕೆರೆಯ ನೀರಿನಂಚಿನ ಪ್ರದೇಶದಲ್ಲೂ ಮಲಮೂತ್ರ ವಿಸರ್ಜನೆ ಕಂಡು ಬರುತ್ತದೆ. ಕೆರೆ ಸುತ್ತಲೂ ಜಾಲಿಕಂಟಿ, ಕಸ ಬೆಳೆದಿವೆ. ಕೆರೆಯಲ್ಲಿ ದನಗಳ ್ನು ಮೈತೊಳೆಯುವುದು, ಬಟ್ಟೆ-ಮುಸರಿ ತೊಳೆಯುವ ಕೆಲಸ ನಿರಂತರವಾಗಿದೆ. ಅನೈರ್ಮಲ್ಯದ ಪರಿಣಾಮ ವಿದೇಶಿ ಪಕ್ಷಿಗಳು ಸಾವಿಗೀಡಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಆದರೂ ಸಂಬಂಧಪಟ್ಟ ಯಾರೊಬ್ಬರೂ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸವೇ ಸರಿ!.
ಕೆರೆ ಸುತ್ತಮುತ್ತ ಮಲಮೂತ್ರದಲ್ಲುಂಟಾಗುವ ಇ-ಕೋಲಿ ಎಂಬ ಬ್ಯಾಕ್ಟಿರೀಯಾ ಪಕ್ಷಿಗಳ ದೇಹ ಸೇರಿ ನಿರ್ಜಲೀಕರಣವಾಗಿ ಬಾನಾಡಿಗಳು ಮೃತಪಟ್ಟ ಪ್ರಕರಣಗಳ ಬಗ್ಗೆ ಪಕ್ಷಿ ಸಾವಿನ ವೈದ್ಯಕೀಯ ವರದಿ ಸಹಿತ ‘ವಿಜಯವಾಣಿ’ ವಿಸ್ತೃತ ವರದಿ ಮಾಡಿ ಗಮನ ಸೆಳೆದಿತ್ತು. ಈ ವರ್ಷವೂ ಈ ಪರಿಸ್ಥಿತಿ ಉಂಟಾಗದಿರಲಿ ಎಂಬ ಕಳಕಳಿ ಪತ್ರಿಕೆಯದ್ದಾಗಿದೆ. 2018-19 ರಲ್ಲಿ 18 ಪಕ್ಷಿಗಳು, 2021-22ರಲ್ಲಿ 7 ಪಕ್ಷಿಗಳು, 2022-23 ರಲ್ಲಿ 4 ಪಕ್ಷಿಗಳು, ಕಳೆದ ವರ್ಷವೂ ನಾಲೈದು ಪಕ್ಷಿಗಳು ಇದೇ ಕಾರಣದಿಂದ ಸಾವಿಗೀಡಾಗಿವೆ ಎನ್ನಲಾಗಿದೆ.
ಪಕ್ಷಿ ಪ್ರೇಮಿಗಳಲ್ಲಿ ಇಲ್ಲಿನ ವ್ಯವಸ್ಥೆ ಮುಜುಗರ ಉಂಟು ಮಾಡುತ್ತದೆ. ಇಲ್ಲಿ ಸ್ವಚ್ಛತೆ, ಆರೋಗ್ಯಕರ ವಾತಾವರಣ ಕಲ್ಪಿಸಬೇಕಾದ ಅರಣ್ಯ, ಸಣ್ಣ ನೀರಾವರಿ ಇಲಾಖೆ, ಗ್ರಾಮ ಪಂಚಾಯಿತಿ ಒಬ್ಬರ ಮೇಲೊಬ್ಬರು ಹಾಕಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಅರಣ್ಯ ಇಲಾಖೆ ಮತ್ತು ಗ್ರಾಪಂನವರು ಕೆರೆಯ ಸುತ್ತಲೂ ಸ್ವಚ್ಛತೆ ಕಾಪಾಡಲು ಹೆಚ್ಚಿನ ಸಿಬ್ಬಂದಿ ನೇಮಿಸಬೇಕು. ಪ್ರವಾಸೋದ್ಯಮ ಇಲಾಖೆಯ ಸಚಿವರ ತವರು ಜಿಲ್ಲೆಯಲ್ಲಿಯೇ ಪಕ್ಷಿಧಾಮ ಅನೈರ್ಮಲ್ಯದ ತಾಣವಾಗಿರುವುದು ಬೇಸರದ ಸಂಗತಿ. ನಾಗರಾಜ ಕುಲಕರ್ಣಿ, ಪಕ್ಷಿ ಪ್ರೇಮಿ
ಮಾಗಡಿ ಕೆರೆಯ ಸ್ವಚ್ಛತೆ, ಸಂರಕ್ಷಣೆಯ ಜವಾಬ್ದಾರಿ ಗ್ರಾಮ ಪಂಚಾಯಿತಿಗೊಳಪಡುತ್ತದೆ. ಸಂರಕ್ಷಿತ ಕೆರೆಯ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ 2018ರಿಂದಲೇ ಪತ್ರ ಬರೆಯಲಾಗುತ್ತಿದೆ. ಕಳೆದ ವರ್ಷ ರಾಮ್ಸರ್ ಸೈಟ್ ವ್ಯಾಪ್ತಿಗೆ ಸೇರಿದ್ದರಿಂದ ಕೇಂದ್ರ ಸರ್ಕಾರಕ್ಕೆ ಅಭಿವೃದ್ಧಿಗೆ ಪತ್ರ ಬರೆಯಲಾಗಿದೆ. ಪಕ್ಷಿಗಳ ರಕ್ಷಣೆ ಮತ್ತು ಮಾಹಿತಿ ನೀಡಲು ಒಬ್ಬ ನೌಕರರನ್ನು ನೇಮಿಸಲಾಗಿದೆ. ಕೂಡಲೆ ಕೆರೆಯ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಮತ್ತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ರಾಮಪ್ಪ ಪೂಜಾರ, ಆರ್‌ಎಫ್‌ಒ
ಕೆರೆಯ ಸುತ್ತಲಿನ ಪ್ರದೇಶದಲ್ಲಿ ಬಯಲು ಬಹಿರ್ದೆಸೆ ತಡೆಯುವುದು, ಸ್ವಚ್ಛತೆ ಕಾಪಾಡುವ ಮತ್ತು ಪಕ್ಷಿ ವಿಕ್ಷಣೆಗೆ ಬರುವವರಿಗೆ ಉತ್ತಮ ವಾತಾವರಣ, ಅನುಕೂಲತೆ ಕಲ್ಪಿಸುವ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯಾಧಿಕಾರಿಯೊಂದಿಗೆ ಭೇಟಿ ನೀಡಿ ಚರ್ಚಿಸಲಾಗುವುದು. ಕೆರೆಯ ಅಭಿವೃದ್ಧಿ, ಪಕ್ಷಿಗಳ ಸಂರಕ್ಷಣೆ ವಿಷಯದಲ್ಲಿ ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ಇನ್ನೂ ಹೆಚ್ಚಿನ ಸಹಕಾರದೊಂದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಭರತ ಎಸ್, ಸಿಇಒ ಮಾಗಡಿ ಕೆರೆಗೆ ಬರುವ ವಿದೇಶಿ ಪಕ್ಷಿಗಳು... ಮಂಗೋಲಿಯಾ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಬರ್ಮಾ, ಭೂತಾನ್ ಮತ್ತು ಜಮ್ಮು-ಕಾಶ್ಮೀರದ ಲಡಾಕ್‌ನಲ್ಲಿನ ಸರೋವರಗಳು ಚಳಿಗಾಲದ ವೇಳೆ ಹೆಪ್ಪುಗಟ್ಟುವುದರಿಂದ ಪಕ್ಷಿಗಳು ಸಮಶೀತೋಷ್ಣವಲಯದ ಇಲ್ಲಿನ ಹಿತಕರ ವಾತಾವರಣ, ಆಹಾರ, ಆಶ್ರಯ ಅರಸಿ ಮಾಗಡಿ ಕೆರೆಗೆ ಬರುತ್ತವೆ. 4 ತಿಂಗಳ ಕಾಲ ವಿಹರಿಸುತ್ತವೆ. ಸಾವಿರಾರು ಕಿ.ಮೀ ದೂರದಿಂದ ಪ್ರತಿವರ್ಷ ಬರುವ ಪಕ್ಷಿಗಳಲ್ಲಿ ಪ್ರಮುಖವಾಗಿ ಬಾರ್ ಹೆಡೆಡ್ ಗೀಸ್, ಡೊಮಿಸಿಲ್ ಕ್ರೇನ್, ಬ್ರಾಹ್ಮಿಣಿಡಕ್, ಪೇಟೆಂಡ್ ಸ್ಪಾರ್ಕ್, ವೈಟ್‌ಇಬಿಸ್, ಬ್ಲಾಕ್ ಹೆಡೆಡ್ ಇಬೀಸ್, ವರಟೆ (ಸ್ಪಾಟ್ ಬಿಲ್ಡ್ ಡಕ್), ನೀರು ಕಾಗೆ ( ಕೋರ್‌ಮೊರೆಂಟ್), ನೆರಳೆ ಜಂಬು ಕೋಳಿ (ವರ್ಷಲ್ ಮೋರ್ ಹೆನ್) ಬೂದು ಮಂಗಟೆ ಹಕ್ಕಿ (ಗ್ರೇ ಹಾರ್ನ್ ಬಿಲ್) ಸೇರಿ ಅಂದಾಜು 30 ಜಾತಿಯ ಪಕ್ಷಿಗಳು ನೋಡುಗರನ್ನು ಆಕರ್ಷಿಸುತ್ತವೆ. ನವೆಂಬರ್‌ನಿಂದ ಮಾರ್ಚ್‌ವರೆಗೆ ನೆಲೆ ನಿಲ್ಲುವ ಪಕ್ಷಿಗಳ ಪ್ರಮುಖ ಆಹಾರ ರೈತರ ಜಮೀನುಗಳಲ್ಲಿನ ಶೇಂಗಾ ಕಾಳು, ಕಡಲೆ/ಕಡಲೆ ಚಿಗುರು, ತೊಗರಿ, ಚಿಗುರು ಹುಲ್ಲು ತಿನ್ನುತ್ತವೆ. ಈ ವರ್ಷ ಈಗಾಗಲೇ 6 ಸಾವಿರ ಪಕ್ಷಿಗಳು ಬಂದಿದ್ದು ಯುರೋಪದ ಗ್ರೇಯಲ್ಯಾಗ್ ಈ ವರ್ಷದ ವಿಶೇಷ ಅತಿಥಿಯಾಗಿದೆ.