

ಶಿವಾನಂದ ಹಿರೇಮಠ ಗದಗ
ಅಕ್ರಮ ಮಣ್ಣು ಗಣಿಗಾರಿಕೆಯಿಂದ ಸೃಷ್ಟಿಯಾದ ಹೊಂಡದಲ್ಲಿ ಬಿದ್ದು ಮೂವರು ಮೃತಪಟ್ಟ ಪ್ರಕರಣ ಜಿಲ್ಲೆಗೆ ಕಳಂಕ ತಂದರೂ ಕೆಂಪು ಗರಸು ಗಣಿಗಾರಿಕೆ ಮಾಡುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅಧಿಕಾರಿಗಳು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಾಲ್ಕು ವರ್ಷದ ಹಿಂದೆ ಚಿಕ್ಕಹಂದಿಗೊಳ ಗ್ರಾಮದಲ್ಲಿ ಅಕ್ರಮ ಮಣ್ಣುಗಣಿಗಾರಿಕೆಯ ಗುಂಡಿಯಲ್ಲಿ ಬಿದ್ದು ಬಾಲಕ ಮೃತಪಟ್ಟಿದ್ದ. ಮೂರು ದಿನದ ಹಿಂದೆ ಗದಗಿನ ರಹಮತ್ ನಗರದ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಿದ ಹೊಂಡದಲ್ಲಿ ಬಿದ್ದ ನಾಲ್ವರ ಪೈಕಿ ಇಬ್ಬರು ಮೃತಪಟ್ಟರು. ಇಬ್ಬರನ್ನು ರಕ್ಷಣೆ ಮಾಡಲಾಯಿತು. ಇಂತಹ ಅವಘಡ ಮರುಕಳಿಸುತ್ತಿದ್ದರೂ ಮಣ್ಣು ಗಣಿಗಾರಿಕೆಗೆ ಕಡಿವಾಣ ಹಾಕಲು ಅಧಿಕಾರಿಗಳು, ಜಿಲ್ಲಾಡಳಿತ ಮುತುವರ್ಜಿ ವಹಿಸುತ್ತಿಲ್ಲ . ಜೀವದ ಬೆಲೆ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ ಎಂದು ಜನಸಾಮಾನ್ಯರು ಮಾತನಾಡುತ್ತಿದ್ದಾರೆ.
ಇಲಾಖೆಗಳ ನಿಷ್ಕಾಳಜಿ: ಗದಗ ಹೊರ ವಲಯದ ಕಳಸಾಪುರ, ನಾಗಾವಿ, ಬೆಳದಡಿ, ಚಿಕ್ಕ ಹಂದಿಗೋಳ ಸೇರಿ ಹಲವೆಡೆ ಮಣ್ಣು ಗಣಿಗಾರಿಕೆ ಹವ್ಯಾಹತವಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಂಬಂಧಿಸಿದ ಇಲಾಖೆಗಳೊಂದಿಗೆ ಪತ್ರ ವ್ಯವಹಾರ ನಡೆಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಗಣಿಗಾರಿಕೆ ವ್ಯಾಪ್ತಿಯ ತಹಸೀಲ್ದಾರ್ ಕಚೇರಿ, ಅರಣ್ಯ ಇಲಾಖೆ, ಗ್ರಾಪಂ ಹಾಗೂ ಗೃಹ ಮಂಡಳಿಗೆ ಹಲವು ಬಾರಿ ಪತ್ರವ್ಯವಹಾರ ನಡೆಸಿದ್ದು ಬಿಟ್ಟರೆ ಕಠಿಣ ಕ್ರಮ ಕೈಗೊಂಡಿಲ್ಲ. ಆರ್‌ಟಿಒ ಅಧಿಕಾರಿಗಳ ಕಣ್ಣೆದುರೇ ಗೃಹ ಮಂಡಳಿ ಮತ್ತು ಆರ್‌ಡಿಪಿಆರ್ ಮಾಲೀಕತ್ವದ ಕಳಸಾಪುರ ಗ್ರಾಮ ವ್ಯಾಪ್ತಿಯ ಸರ್ವೇ ನಂ. 179/ಎ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಮಣ್ಣು ಗಣಿಗಾರಿಕೆ ನಡೆದರೂ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಗಣಿಗಾರಿಕೆಯ ಜಮೀನು ನಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದ್ದಲ್ಲ ಎಂಬ ಸಮಜಾಯಿಷಿ ನೀಡುತ್ತಿದ್ದಾರೆ.
ಭೂಮಿ ಯಾರದ್ದು?
ಕಳಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ 179/ಎ ಜಮೀನಿನಲ್ಲಿ ಗೃಹ ಮಂಡಳಿ ಬಡಾವಣೆ ಮತ್ತು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಮಾಲೀಕತ್ವ ಹೊಂದಿವೆ. ಗ್ರಾಮ ಪಂಚಾಯಿತಿ ಒಡೆತನದ ಜಮೀನಿನಲ್ಲಿ ಗಣಿಗಾರಿಕೆ ನಡೆದಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೇಲ್ವಿಚಾರಣೆ ನಡೆಸಬೇಕು. ಪಿಡಿಒ ಸಮ್ಮುಖದಲ್ಲಿ ಪಂಚನಾಮೆ ನಡೆಸಿ ಗ್ರಾಮ ಪಂಚಾಯಿತಿ ಮತ್ತು ಗಣಿ ಇಲಾಖೆ ಅಧಿಕಾರಿಗಳು ಜತೆಗೂಡಿ ದೂರು ದಾಖಲಿಸಿಕೊಂಡು ಖದೀಮರಿಗೆ ತಡೆಯೊಡ್ಡಬೇಕಿದೆ. ಆದರೆ, ಕಣ್ಣೆದುರೇ ಗರಸು ಮಣ್ಣು ತುಂಬಿದ ಟಿಪ್ಪರ್‌ಗಳು ಸಂಚರಿಸಿದರೂ ಗೊತ್ತೇ ಇಲ್ಲದಂತೆ ಗ್ರಾಪಂ ಅಧಿಕಾರಿಗಳು ವರ್ತಿಸುತ್ತಿರುವುದು ವಿಪರ್ಯಾಸವಾಗಿದೆ.
ಮಾರ್ಗ ಸ್ಥಗಿತ
ಕಚೇರಿ ಪಕ್ಕದಲ್ಲೇ ಅಕ್ರಮ ಮಣ್ಣು ಗಣಿಗಾರಿಕೆ ನಡೆದಿರುವುದು ಗೊತ್ತೇ ಇಲ್ಲ ಎಂದು ಶುಕ್ರವಾರ ಹೇಳಿಕೆ ನೀಡಿದ್ದ ಆರ್‌ಟಿಒ ಅಧಿಕಾರಿಗಳು ಗಣಿಗಾರಿಕೆಯ ಸ್ಥಳದಲ್ಲಿ ತಗ್ಗುಗುಂಡಿ ತೋಡಿ, ಟಿಪ್ಪರ್ ಸಂಚರಿಸುವ ಮಾರ್ಗವನ್ನು ಸ್ಥಗಿತಗೊಳಿಸಲಾಗುವುದು ಎಂದು ಶನಿವಾರ ಪ್ರತಿಕ್ರಿಯಿಸಿದ್ದಾರೆ.
ವಿಜಯವಾಣಿ’ ಪ್ರಕಟಿಸಿದ ವರದಿ ಗಮನಿಸಿದ್ದೇನೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ. ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.-ವೈಶಾಲಿ ಎಂ.ಎಲ್, ಜಿಲ್ಲಾಧಿಕಾರಿ ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಟಿಪ್ಪರ್ ಹೋಗದಂತೆ ಅಡ್ಡಲಾಗಿ ಗುಂಡಿ ತೋಡಲಾಗುವುದು. ಮತ್ತೊಮ್ಮೆ ಅಕ್ರಮ ನಡೆದರೆ ಕ್ರಮ ವಹಿಸಲಾಗುವುದು.-ಬಾಲಚಂದ್ರ, ಆರ್‌ಟಿಒ